Sidlaghatta : ಮುಖ್ಯಮಂತ್ರಿ ಸೇರಿದಂತೆ ಸಚಿವರಿಗೆ ಬುಟ್ಟಿಯಲ್ಲಿ ಮಾವಿನ ಹಣ್ಣು ಕೊಡುವುದು ಬಿಟ್ಟು ತಾಲ್ಲೂಕಿಗೆ ಅನುದಾನ ತನ್ನಿ, ದರಕಾಸ್ತು ಸಮಿತಿಗೆ ಸದಸ್ಯರನ್ನು ನೇಮಿಸುವ ಕೆಲಸ ಮಾಡಿ ರೈತರಿಗೆ ಅನುಕೂಲ ಮಾಡಿಕೊಡಿ ಎಂದು ಜೆಡಿಎಸ್ ಮುಖಂಡ, ರಾಜ್ಯ ಒಕ್ಕಲಿಗರ ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಪೂಲಕುಂಟಹಳ್ಳಿ ರಘುನಾಥರೆಡ್ಡಿ ಅವರು ಕಾಂಗ್ರೆಸ್ ಮುಖಂಡರನ್ನು ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ತಾಲ್ಲೂಕಿನ ಕಾಂಗ್ರೆಸ್ ಮುಖಂಡ ಪುಟ್ಟು ಆಂಜಿನಪ್ಪ ಅವರು ತಮ್ಮ ತೋಟದಲ್ಲಿ ಬೆಳೆದ ಮಾವಿನ ಹಣ್ಣುಗಳನ್ನು ಬುಟ್ಟಿಗೆ ತುಂಬಿಕೊಂಡು ಸಿಎಂ ಡಿಕೆಶಿ, ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವರಾದ ಕೃಷ್ಣಬೈರೇಗೌಡ ಸೇರಿದಂತೆ ಹಲವು ಸಚಿವರಿಗೆ ಕೊಡುತ್ತಿದ್ದಾರೆ.
ಕೊಡಲಿ ನಮ್ಮದೇನು ಅಭ್ಯಂತರವಿಲ್ಲ. ಆದರೆ ಅದೇ ಸಿಎಂ, ಡಿಸಿಎಂ, ಸಚಿವರನ್ನು ಭೇಟಿ ಮಾಡಿ ಶಿಡ್ಲಘಟ್ಟ ತಾಲ್ಲೂಕಿಗೆ ವಿಶೇಷ ಅನುದಾನ ತರಲಿ.
ಮುಖ್ಯವಾಗಿ ಕಳೆದ ಹಲವು ವರ್ಷಗಳಿಂದಲೂ ತಾಲ್ಲೂಕಿನಲ್ಲಿ ದರಕಾಸ್ತು ಸಮಿತಿ ರಚನೆಯಾಗಿಲ್ಲ. ಅನೇಕ ವರ್ಷಗಳಿಂದಲೂ ನಮೂನೆ 51, 53 ಹಾಗೂ 57ನ್ನು ಹಾಕಿಕೊಂಡು ಬಕ ಪಕ್ಷಿಗಳಂತೆ ಸಾವಿರಾರು ರೈತರು ಕಾಯುತ್ತಿದ್ದಾರೆ. ದರಕಾಸ್ತು ಸಮಿತಿ ಇಲ್ಲದ ಕಾರಣ ಇವರಿಗೆ ಜಮೀನು ಹಕ್ಕು ಪತ್ರ ವಿತರಣೆಯಾಗಿಲ್ಲ. ಇದರಿಂದ ಜಮೀನಿನ ಮಾಲೀಕರಾಗುವ ಕನಸು ಕನಸಾಗಿಯೆ ಉಳಿದಿದೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸರ್ಕಾರವಿದೆ. ತಾಲ್ಲೂಕಿನ ಕಾಂಗ್ರೆಸ್ ಮುಖಂಡರ ಮಾತು ನಡೆಯುತ್ತದೆ. ವಿಶೇಷ ಅನುದಾನ ತನ್ನಿ, ದರಕಾಸ್ತು ಸಮಿತಿ ರಚಿಸಲು ಸರ್ಕಾರದ ಮೇಲೆ ಒತ್ತಡ ಹಾಕಿ. ರೈತರಿಗೆ, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಿ ಎಂದು ಒತ್ತಾಯಿಸಿದರು.








