ತಾಲ್ಲೂಕಿನ ಹೊಸಪೇಟೆ ಕಂದಾಯ ವೃತ್ತದಲ್ಲಿ ಮಂಗಳವಾರ ತಾಲ್ಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಪಿಂಚಣಿ ಹಾಗೂ ಪೌತಿ ಖಾತೆ ಆಂದೋಲನ ಕಾರ್ಯಕ್ರಮದಲ್ಲಿ ಪೌತಿ ಖಾತೆಗೆ 15 ಮತ್ತು ಪಿಂಚಣಿಗಾಗಿ 25 ಅರ್ಜಿಗಳನ್ನು ಸ್ವೀಕರಿಸಿ ತಹಶೀಲ್ದಾರ್ ಕೆ.ಅರುಂಧತಿ ಮಾತನಾಡಿದರು.
ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ತಾಲ್ಲೂಕಿನ ಆಡಳಿತದ ವತಿಯಿಂದ ಪಿಂಚಣಿ ಹಾಗೂ ಪೌತಿ ಖಾತೆ ಆಂದೋಲನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದು ಅವರು ತಿಳಿಸಿದರು.
ಪೌತಿ ಖಾತೆ ಆಂದೋಲನ ಅಂದರೆ, ಪಿತ್ರಾರ್ಜಿತ ಜಮೀನನ್ನು ಮಕ್ಕಳ ಹೆಸರಿಗೆ ಖಾತೆ ಮಾಡಿಸುವ ಪ್ರಕ್ರಿಯೆ. ಪಿತ್ರಾರ್ಜಿತ ಜಮೀನು ಮಕ್ಕಳ ಹೆಸರಿಗೆ ವಿಭಜನೆಗೊಳ್ಳದೆ, ಇನ್ನೂ ಮೃತ ತಾತ, ತಂದೆ, ಪತಿ ಹೆಸರಲ್ಲೇ ಇದೆ. ಇದರಿಂದ ಹಲವು ಯೋಜನೆಗಳ ಲಾಭ ರೈತರಿಗೆ ಸಿಗುತ್ತಿಲ್ಲ. ಮೃತ ತಾತ, ತಂದೆ ಹೆಸರಲ್ಲೇ ಜಮೀನು ನೋಂದಣಿಯಾಗಿರುವುದರಿಂದ ಅವರ ರೈತ ಮಕ್ಕಳಿಗೆ ಸರ್ಕಾರದ ಯೋಜನೆಗಳ ಸಂಪೂರ್ಣ ಲಾಭ ಲಭ್ಯವಾಗುತ್ತಿಲ್ಲ. ಇದಕ್ಕಾಗಿ ಸರ್ಕಾರ ಪೌತಿ ಖಾತೆ ಮಾಡಿಸಲು ಮುಂದಾಗಿದೆ. ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪೌತಿ ಖಾತೆ ಆಂದೋಲನ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಉಪತಹಶೀಲ್ದಾರ್ ಆನಂದಮೂರ್ತಿ, ರಾಜಸ್ವ ನಿರೀಕ್ಷಕ ಶಶಿಧರ್, ಮೋಹನ್ ಕುಮಾರ್, ಕಾರ್ತಿಕ್, ಗ್ರಾಮ ಪಂಚಾಯಿತಿ ಸದಸ್ಯ ಸುರೇಶ್ ಹಾಜರಿದ್ದರು.