Kudapakunte, Sidlaghatta : ತಾಲ್ಲೂಕಿನ ಕುದುಪಕುಂಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶೌಚಾಲಯವನ್ನು ಮಕ್ಕಳಿಂದ ಸ್ವಚ್ಛಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯ ಮುಖ್ಯಶಿಕ್ಷಕಿ ಬಿ.ರೇಣುಕಾ ಅವರನ್ನು ಅಮಾನತುಗೊಳಿಸಲಾಗಿದೆ.
ಮಕ್ಕಳಿಂದ ಶೌಚಾಲಯ ಸ್ವಚ್ಛ ಮಾಡಿಸುತ್ತಿರುವುದನ್ನು ಗ್ರಾಮಸ್ಥರು ವಿಡಿಯೊ ಮಾಡಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಹರಿಬಿಟ್ಟಿದ್ದರು.
ಸೋಮವಾರ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜಿ.ಮುನಿರಾಜ, ಕ್ಷೇತ್ರ ಶಿಕ್ಷಣಾಧಿಕಾರಿ ನರೇಂದ್ರಕುಮಾರ್ ಮತ್ತು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಜಗದೀಶ್ ಶಾಲೆಗೆ ಭೇಟಿ ನೀಡಿದರು. ಮಕ್ಕಳು, ಶಿಕ್ಷಕಿ ಹಾಗೂ ಪೋಷಕರ ಜೊತೆ ಮಾತುಕತೆ ನಡೆಸಿದರು. ಹೇಳಿಕೆಗಳನ್ನು ಪಡೆದರು.
ಪೋಷಕರು ಹಾಗೂ ಗ್ರಾಮಸ್ಥರು ಶಿಕ್ಷಕಿಯ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಕ್ರಮ ಕೈಗೊಳ್ಳಲು ಮನವಿ ಮಾಡಿದರು. ಬೇರೊಬ್ಬ ಶಿಕ್ಷಕಿಯನ್ನು ನಿಯೋಜಿಸುವಂತೆ ಕೋರಿದರು.
‘ವಿದ್ಯಾರ್ಥಿಗಳನ್ನು ಗೋಪ್ಯವಾಗಿ ವಿಚಾರಣೆ ನಡೆಸಿದ್ದೇವೆ. ಗ್ರಾಮಸ್ಥರಿಂದ ಮಾಹಿತಿ ಸಹ ಪಡೆದಿದ್ದೇವೆ. ಮುಖ್ಯ ಶಿಕ್ಷಕಿಯನ್ನು ಅಮಾನತುಗೊಳಿಸಲಾಗಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ನರೇಂದ್ರಕುಮಾರ್ ತಿಳಿಸಿದರು.
ಶಾಲೆಗಳಲ್ಲಿ ಮಕ್ಕಳಿಂದ ಶೌಚಾಲಯದ ಸ್ವಚ್ಛ ಮಾಡಿಸದಂತೆ ಸರ್ಕಾರ ಆದೇಶಿಸಿದೆ. ಆದರೂ ಇಲ್ಲಿ ಸ್ವಚ್ಛತೆ ಮಾಡಿಸಲಾಗಿದೆ ಎಂದು ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.