ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ಶಿವಯೋಗಿ ಸಿದ್ದರಾಮೇಶ್ವರ ಜಯಂತ್ಯುತ್ಸವ ಕಾರ್ಯಕ್ರಮದ ಅಂಗವಾಗಿ ಸಿದ್ದರಾಮೇಶ್ವರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ತಹಶೀಲ್ದಾರ್ ಕೆ.ಅರುಂದತಿ ಮಾತನಾಡಿದರು.
ಕಾಯಕದ ಮಹತ್ವವನ್ನು ತಿಳಿಸಿದ ಸಿದ್ದರಾಮೇಶ್ವರರು ಮಹಾನ್ ಯೋಗಿಯಾಗಿದ್ದರು ಎಂದು ಅವರು ತಿಳಿಸಿದರು.
12ನೇ ಶತಮಾನದ ಖ್ಯಾತ ಪಂಚಶರಣರಲ್ಲಿ ಒಬ್ಬರಾದ ಶಿವಯೋಗಿ ಸಿದ್ದರಾಮೇಶ್ವರರು ವೈದಿಕ ಧರ್ಮದ ಮೌಡ್ಯತೆ, ಮೇಲುಕೀಳು, ವರ್ಣಧರ್ಮ ಶ್ರೇಣೀಕರಣ, ಸಂಪ್ರದಾಯಗಳಿಂದ ದೂರ ಉಳಿದು ಎಲ್ಲರೂ ಸಮಾನರು ಎಂಬ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಚಿಂತನೆಯನ್ನು ಆ ಕಾಲದಲ್ಲೇ ಹುಟ್ಟುಹಾಕಿದವರು ಎಂದರು.
ತಾಲ್ಲೂಕು ಭೋವಿ ಸಂಘದ ಅಧ್ಯಕ್ಷ ಚಿಕ್ಕನರಸಿಂಹಪ್ಪ ಮಾತನಾಡಿ, ದಯೆಯೇ ಧರ್ಮದ ಮೂಲವೆಂದು ಸಾರಿದ ವಚನಕಾರರು ಮೌಡ್ಯದ ವಿರುದ್ಧ ಜನಜಾಗೃತಿ ಮೂಡಿಸಿದ್ದರು. ಕೆರೆ ಕಟ್ಟೆಗಳನ್ನು, ಅನ್ನದಾಸೋಹ ಕಟ್ಟಡಗಳನ್ನು ಕಟ್ಟುವ ಮೂಲಕ ಕಲ್ಲು ಮಣ್ಣಿನ ಕಸುಬಿನ ಮಹತ್ವ ಎತ್ತಿಹಿಡಿದವರು ಸಿದ್ದರಾಮೇಶ್ವರರು. ದೇವರ ಬಗ್ಗೆ ಅಪಾರ ಭಕ್ತಿಯುಳ್ಳ ಶಿವಭಕ್ತರಾಗಿ, ಕರ್ಮಯೋಗಿಯಾಗಿ ಅಕ್ಷರಜ್ಞಾನದಿಂದ ವಚನಗಳನ್ನು ರಚಿಸುವ ಮೂಲಕ ಜ್ಞಾನಯೋಗಿಗಳಾಗಿದ್ದಾರೆ ಎಂದು ಹೇಳಿದರು.
ಭೋವಿ ಸಂಘದ ಕಾರ್ಯದರ್ಶಿ ನರಸಪ್ಪ, ರಾಜಸ್ವ ನಿರೀಕ್ಷಕ ಪ್ರಶಾಂತ್ ಹಾಜರಿದ್ದರು.