Sidlaghatta : ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ವೀರೇಂದ್ರ ಹೆಗಡೆಯವರು ಮಾಡುವಂತಹ ಅನೇಕ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಅತೀ ಮುಖ್ಯವಾದ ಕಾರ್ಯಕ್ರಮ ಈ ಮದ್ಯವರ್ಜನ ಶಿಬಿರ. ಈ ಕಾರ್ಯಕ್ರಮದ ಮುಖಾಂತರ ರಾಜ್ಯದ ಲಕ್ಷಾಂತರ ಕುಟುಂಬದ ಬಾಳಿಗೆ ಬೆಳಕಾಗಿದ್ದಾರೆ ಎಂದು ವಿಜಯಪುರದ ಬಸವ ಕಲ್ಯಾಣ ಮಠದ ಮಹಾದೇವಸ್ವಾಮಿಗಳು ತಿಳಿಸಿದರು.
ತಾಲ್ಲೂಕಿನ ಹಂಡಿಗನಾಳದ ಕೆಂಪಣ್ಣಸ್ವಾಮಿ ವೀರಣ್ಣಸ್ವಾಮಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ 1819 ನೇ ಮದ್ಯವರ್ಜನ ಶಿಬಿರ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಮದ್ಯ ವ್ಯಸನದಿಂದ ಇವತ್ತು ಸಮಾಜದಲ್ಲಿ ಲಕ್ಷಾಂತರ ಕುಟುಂಬಗಳು ಹಾಳಾಗಿದ್ದು, ಹೆಣ್ಣು ಮಕ್ಕಳ ಬದುಕನ್ನ ಸಂಕಷ್ಟಕ್ಕೆ ದೂಡಿದಂತಾಗಿದೆ. ಇದರಿಂದ ಕುಟುಂಬಗಳ ನೆಮ್ಮದಿಯು ಹಾಳಾಗಿದೆ, ಪೂಜ್ಯರು ಮದ್ಯವರ್ಜನ ಶಿಬಿರದಂತಹ ಕಾರ್ಯಕ್ರಮದಿಂದ ಮದ್ಯ ವ್ಯಸನಿಗಳನ್ನ ಸಮಾಜದ ಮುಖ್ಯ ವಾಹಿನಿಗೆ ತರಲು ಮತ್ತು ನೆಮ್ಮದಿಯ ಬದುಕನ್ನು ರೂಪಿಸಲು ಸಾಕಷ್ಟು ಶ್ರಮಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಪ್ರಾದೇಶಿಕ ನಿರ್ದೇಶಕ ಶೀನಪ್ಪ ಮಾತನಾಡಿ, “ಸಂಸ್ಥೆಯು ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯ ಉದ್ದೇಶವನ್ನು ಹೊಂದಿದೆ. ಒಂದು ದುಶ್ಚಟ ಇಡೀ ಕುಟುಂಬದ ವಿನಾಶಕ್ಕೆ ಕಾರಣವಾಗುತ್ತದೆ. ವೀರೇಂದ್ರ ಹೆಗಡೆಯವರು ವ್ಯಸನಮುಕ್ತ ಸಮಾಜದ ಗುರಿ ಹೊಂದಿದ್ದು, ಈ ನಿಟ್ಟಿನಲ್ಲಿ ಉತ್ತಮ ಸಮಾಜದ ನಿರ್ಮಾಣದಲ್ಲಿ ಇದು 1819 ನೇ ಶಿಬಿರವಾಗಿದೆ. ಸ್ಥಳಿಯರು, ದೇವಾಲಯದ ಸಿಬ್ಬಂದಿ ಸಹಕಾರ ಮರೆಯಲಾಗದು” ಎಂದು ಹೇಳಿದರು.
ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಎನ್.ಸುಬ್ಬಾರೆಡ್ಡಿ ಮಾತನಾಡಿ, ಸಮಾಜದಲ್ಲಿ ಕಟ್ಟ ಕಡೆಯ ವ್ಯಕ್ತಿಯು ಉತ್ತಮ ರೀತಿಯಲ್ಲಿ ಬದುಕಲು ಈ ಮದ್ಯವರ್ಜನ ಶಿಬಿರಗಳು ಸಹಾಯ ಮಾಡುತಿದ್ದು, ಸಮಾಜದಲ್ಲಿ ಒಳ್ಳೆಯ ಮನುಷ್ಯನಾಗಿ ಬದುಕಲು ನೆರವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಯಳುವಳ್ಳಿ ರಮೇಶ್, ಸದಸ್ಯರಾದ ಎ.ಎಂ.ತ್ಯಾಗರಾಜ್, ಬೋದಗೂರು ವೆಂಕಟಸ್ವಾಮಿ ರೆಡ್ಡಿ, ಹಿತ್ತಲಹಳ್ಳಿ ಸುರೇಶ್, ನಿವೃತ್ತ ಐಪಿಎಸ್ ಅಧಿಕಾರಿ ಎನ್. ನಾಗರಾಜ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಪ್ರಶಾಂತ್,ತಾಲ್ಲೂಕು ಯೋಜನಾಧಿಕಾರಿ ಸುರೇಶ್, ಒಕ್ಕಲಿಗರ ಸಂಘದ ತಾಲ್ಲೂಕು ಅಧ್ಯಕ್ಷ ನಾರಾಯಣಸ್ವಾಮಿ,ಗುತ್ತಿಗೆದಾರ ವಿಜಯಕುಮಾರ್,ಎಸ್.ವಿ. ನಾಗರಾಜ್ ರಾವ್, ಆನೂರು ವಿಜಯೇಂದ್ರ, ಜೆ.ವಿ. ಸುರೇಶ್, ವೆಂಕಟೇಶ್ವರ ಚಿತ್ರ ಮಂದಿರ ಮಾಲೀಕ ಪ್ರಕಾಶ್ ಹಾಜರಿದ್ದರು.