Sidlaghatta : ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರೆಲ್ಲರೂ ಒಗ್ಗಟ್ಟಿನಿಂದ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿ ಕಮಲ ಅರಳಿಸಲು ಶ್ರಮಿಸಬೇಕು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ (Dr. K Sudhakar) BJP ಮುಖಂಡರು ಮತ್ತು ಕಾರ್ಯಕರ್ತರಿಗೆ ಕರೆ ನೀಡಿದರು.
ಸೆಪ್ಟಂಬರ್ 8 ರಂದು ದೊಡ್ಡಬಳ್ಳಾಪುರದಲ್ಲಿ ನಡೆಯಲಿರುವ ಜನೋತ್ಸವ (Janotsava) ಕಾರ್ಯಕ್ರಮದ ಅಂಗವಾಗಿ ಶನಿವಾರ ಹಂಡಿಗನಾಳ ಗ್ರಾಮದ ಶ್ರೀ ವೀರಣ್ಣ ಕೆಂಪಣ್ಣ ಕಲ್ಯಾಣ ಮಂಟಪದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಲು ಜನೋತ್ಸವ ಕಾರ್ಯಕ್ರಮ ಗಟ್ಟಿ ಅಡಿಪಾಯ ಆಗಬೇಕು. ಪ್ರಸ್ತುತ ವಿಧಾನಸಭಾ ಚುನಾವಣೆಗಳು ಸಮೀಪಿಸುತ್ತಿರುವ ಈ ಸಮಯದಲ್ಲಿ ರಾಜ್ಯ ಬಿಜೆಪಿ ಸರ್ಕಾರಕ್ಕೆ ಮೂರು ವರ್ಷ ಪೂರೈಸಿದೆ. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಒಂದು ವರ್ಷ ಪೂರೈಸಿದ್ದಾರೆ. ಈ ವೇಳೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಜನಪರ ಯೋಜನೆಗಳ ಬಗ್ಗೆ ಜನರಿಗೆ ತಿಳಿಸಿಬೇಕು. ಸರ್ಕಾರದ ರಿಪೋರ್ಟ್ ಕಾರ್ಡ್ ಜನರ ಮುಂದಿಡಬೇಕು. ಚುನಾವಣೆಯಲ್ಲಿ ತೀರ್ಮಾನಿಸುವವರು ಜನಸಾಮಾನ್ಯರೇ ಎಂದು ಜನೋತ್ಸವ ಕುರಿತು ತಿಳಿಸಿದರು.
ವಿದ್ಯಾಸಿರಿ ಯೋಜನೆ, ಕೃಷಿ ಸಮ್ಮಾನ್ ಯೋಜನೆಯಂತಹ ಫಲಾನುಭವಿಗಳು ತಪ್ಪದೇ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು, ರೈತರ ಖಾತೆಗೆ ಬರುತ್ತಿರುವ ಹಣ ನೀಡುತ್ತಿರುವವರು ಯಾರು ಎಂಬ ಅರಿವು ಜನಸಾಮಾನ್ಯರಿಗೆ ಇರಬೇಕು. ವರ್ಷಗಳ ಹಿಂದೆ ಸರ್ಕಾರದ ಯೋಜನೆಯ ಹಣ ಪಡೆಯಬೇಕಾದರೆ ಮಧ್ಯವರ್ತಿಗಳಿಗೆ ಹಣ ಸಲ್ಲಿಸಬೇಕಿತ್ತು. ತಿಂಗಳುಗಟ್ಟಲೆ ಕಚೇರಿಗಳಿಗೆ ಅಲೆಯಬೇಕಿತ್ತು. ಆದರೆ ಈಗ ಅಂತಹ ಸ್ಥಿತಿ ಇಲ್ಲ. ಫಸಲ್ ಭೀಮಾ ಯೋಜನೆಯಡಿ ರೈತರು ಬೆಳೆದ ಬೆಳೆಗಳಿಗೆ ಪರಿಹಾರ. ಆಯುಷ್ಮಾನ್ ಭಾರತ್ ಯೋಜನೆಯಡಿ ಪ್ರತಿ ಕುಟುಂಬಕ್ಕೆ ವಾರ್ಷಿಕ 5 ಲಕ್ಷ ರೂಪಾಯಿ ಉಚಿತ ಚಿಕಿತ್ಸೆ ಲಭ್ಯವಿದೆ ಎಂದು ಯೋಜನೆ ಕುರಿತು ವಿವರಿಸಿದರು.
ಭಾರತದಲ್ಲಿ 140 ಕೋಟಿ ಮಂದಿಗೆ ಎರಡು ಡೋಸ್ ಲಸಿಕೆ ನೀಡುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಕೋವಿಡ್ ನಂತರ ದೇಶ ಆರ್ಥಿಕ ಪುನಶ್ಚೇತನವಾಗುತ್ತಿದೆ. ಪ್ರಸ್ತುತದಲ್ಲಿ ಜಿಡಿಪಿ 13.5 ರಷ್ಟಕ್ಕೆ ಏರಿಕೆ ಆಗಿದೆ. ಇಂತಹ ಸಂದರ್ಭದಲ್ಲಿ ಜನೋತ್ಸವವನ್ನು ಅತ್ಯಂತ ಸೂಕ್ತವಾಗಿ ಆಚರಿಸಬೇಕು ಎಂಬುದು ಸರ್ಕಾರದ ಆಶಯವಾಗಿದೆ. ನಾವು ಯಾರ ಹುಟ್ಟುಹಬ್ಬವನ್ನೂ ಆಚರಿಸುತ್ತಿಲ್ಲ, ಜನರ ಹಬ್ಬವನ್ನು ಆಚರಿಸುತ್ತಿದ್ದೇವೆ ಎಂದರು.
ಬಿಜೆಪಿ ಜನರಿಗಾಗಿ ಶ್ರಮಿಸುತ್ತಿರುವ ಪಕ್ಷವಾಗಿದೆ. ಕಳೆದ ಮೂರು ವರ್ಷದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜಾರಿಗೆ ತಂದಿರುವ ಜನಪರ ಯೋಜನೆಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ಕೆಲಸವಾಗಬೇಕು ಎಂಬ ಉದ್ಧೇಶದಿಂದ ಜನೋತ್ಸವ ಆಯೋಜಿಸಿದ್ದೇವೆ. ಇದನ್ನು ಯಶಸ್ವಿಗೊಳಿಸಲು ಎಲ್ಲರೂ ಕೈ ಜೋಡಿಸಬೇಕೆಂದು ಸಚಿವರು ಕೋರಿದರು.
ವಿಧಾನ ಪರಿಷತ್ ಸದಸ್ಯ ಕೇಶವ ಪ್ರಸಾದ್, ಬಿಜೆಪಿ ವಿಭಾಗ ಸಂಘಟನಾ ಪ್ರದಾನ ಕಾರ್ಯದರ್ಶಿ ಕಾಂತರಾಜ್, ಬಿಜೆಪಿ ಜಿಲ್ಲಾ ಅಧ್ಯಕ್ಷ ರಾಮಲಿಂಗಪ್ಪ, ಮಾಜಿ ಶಾಸಕ ಎಂ.ರಾಜಣ್ಣ, ಗ್ರಾಮಾಂತರ ಮಂಡಲ ಅಧ್ಯಕ್ಷ ಸುರೇಂದ್ರಗೌಡ, ನಗರ ಘಟಕ ರಾಘವೇಂದ್ರ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಿ.ಸಿ.ನಂದೀಶ್, ಸ್ಕೂಲ್ ದೇವರಾಜ್, ಕನಕ ಪ್ರಸಾದ್, ಆಂಜನೇಯ ಗೌಡ, ಮುರಳೀಧರ, ನರ್ಮದಾ ರೆಡ್ಡಿ, ಶ್ರೀಧರ್, ರಂಜಿತ್ ಹಾಜರಿದ್ದರು.