Devaramallur, Sidlaghatta : ರೈತರು ತಮ್ಮ ರಾಸುಗಳಿಗೆ ತಪ್ಪದೆ ಜೀವ ವಿಮೆ ಮಾಡಿಸಬೇಕು. ಇದರಿಂದ ಆಕಸ್ಮಿಕವಾಗಿ ರಾಸುಗಳು ಮೃತಪಟ್ಟರೆ ಆಗಬಹುದಾದ ಆರ್ಥಿಕ ತೊಂದರೆ ತಪ್ಪಲಿದೆ ಎಂದು ಕೋಚಿಮುಲ್ ಶಿಬಿರ ಕಚೇರಿಯ ಉಪ ವ್ಯವಸ್ಥಾಪಕ ಡಾ.ಬಿ.ಆರ್.ರವಿಕಿರಣ್ ರೈತರಲ್ಲಿ ಮನವಿ ಮಾಡಿದರು.
ತಾಲ್ಲೂಕಿನ ದೇವರಮಳ್ಳೂರು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಾಕಷ್ಟು ರೈತರು ಹೆಚ್ಚು ಬೆಲೆ ಕೊಟ್ಟು ಉತ್ತಮ ತಳಿಯ ಸೀಮೆ ಹಸುಗಳನ್ನೆ ತಂದು ಸಾಕುತ್ತಾರೆ. ಆದರೆ ಜೀವ ವಿಮೆ ಮಾಡಿಸುವ ಪ್ರಮಾಣ ಬಹಳ ಕಡಿಮೆಯಿದೆ. ರೋಗ ರುಜಿನಗಳು ಬಂದು ಸಾವನ್ನಪ್ಪಿದರೆ ಬಹಳ ಆರ್ಥಿಕ ನಷ್ಟಕ್ಕೆ ಸಿಲುಕುತ್ತಾರೆ ಎಂದರು.
ಜೀವ ವಿಮೆ ಬಗ್ಗೆ ಸಾಕಷ್ಟು ಅರಿವು ಮೂಡಿಸುತ್ತಿದ್ದರೂ ಹೆಚ್ಚಿನ ರೈತರು ಆಸಕ್ತಿ ತೋರುತ್ತಿಲ್ಲ. ವಿಮೆಯ ಅರ್ಧ ಮೊತ್ತವನ್ನು ಸಹಕಾರ ಸಂಘ ಭರಿಸಲಿದ್ದು ಇನ್ನುಳಿದ ಅರ್ಧ ಮೊತ್ತವನ್ನು ಮಾತ್ರವೇ ರೈತ ಭರಿಸಬೇಕಾಗುತ್ತದೆ ಎಂದು ಹೇಳಿದರು.
ಮಳೆಗಾಲದಲ್ಲಿ ಹಾಲು ನೀಡುವ ಸೀಮೆ ಹಸುಗಳಿಗೆ ಬರೀ ಹಸಿ ಮೇವನ್ನು ಮಾತ್ರ ನೀಡದೆ ಹಸಿ ಮೇವಿನ ಜತೆಗೆ ಒಣ ಮೇವನ್ನು ಕೂಡ ನೀಡುವುದರಿಂದ ಮಾತ್ರ ಉತ್ತಮ ಗುಣಮಟ್ಟದ ಮತ್ತು ಹೆಚ್ಚು ಹಾಲನ್ನು ಸೀಮೆ ಹಸು ನೀಡುತ್ತದೆ ಎಂದು ತಿಳಿಸಿದರು.
ರೈತರು ತಮ್ಮದೇ ಜಮೀನಿನಲ್ಲಿ ಮೇವಿನ ಜೋಳವನ್ನು ಬೆಳೆದರೆ ರೈತರಿಗೆ ಪ್ರತಿ ಎಕರೆಗೆ 3 ಸಾವಿರ ರೂ ಪ್ರೋತ್ಸಾಹ ಧನ ಇಲಾಖೆಯಿಂದ ನೀಡಲಿದ್ದು ಆಸಕ್ತ ರೈತರು ಇಲಾಖೆ ಅಧಿಕಾರಿಗಳನ್ನು, ಡೇರಿ ಕಾರ್ಯನಿರ್ವಹಣಾಧಿಕಾರಿಗಳನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.
ಕೋಚಿಮುಲ್ ಶಿಬಿರ ಕಚೇರಿಯ ವಿಸ್ತರಣಾಧಿಕಾರಿ ಬಿ.ಶ್ರೀನಿವಾಸ್ 2024-25ನೇ ಸಾಲಿನ ಜಮಾ-ಖರ್ಚು ಮಂಡಿಸಿ ಸಭೆಯ ಅನುಮೋಧನೆ ಪಡೆದುಕೊಂಡರು. ಪ್ರಸಕ್ತ ವರ್ಷದಲ್ಲಿ 7 ಲಕ್ಷ ರೂಗಳ ನಿವ್ವಳ ಲಾಭ ಪಡೆದುಕೊಂಡಿದೆ ಎಂದು ವಿವರಿಸಿದರು.
ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಂ.ದೇವರಾಜ್ ಮಾತನಾಡಿ, ಡೇರಿಯ ಅಭಿವೃದ್ದಿ ಆದರೆ ಹಾಲು ಉತ್ಪಾದಕರ ಅಭಿವೃದ್ದಿ ಆದಂತೆ. ಹಾಗಾಗಿ ಎಲ್ಲ ಹೈನುಗಾರರು ಉತ್ತಮ ಗುಣಮಟ್ಟದ ಹಾಲು ಉತ್ಪಾದನೆ ಮಾಡಿ ಸರಬರಾಜು ಮಾಡುವಂತೆ ಮನವಿ ಮಾಡಿದರು.
ಹೆಚ್ಚು ಹಾಲು ಸರಬರಾಜು ಮಾಡಿದ ಹೈನುಗಾರರಾದ ಆಂಜಿನಪ್ಪ, ಬೈರಮ್ಮ, ಕೇಶವ, ಹೈನುಗಾರರ ಪ್ರತಿಭಾವಂತ ಮಕ್ಕಳಾದ 7ನೇ ತರಗತಿಯ ತೇಜಸ್ವಿನಿ, ಎಸ್ಸೆಸ್ಸೆಲ್ಸಿಯ ನಿಖಿಲ್ ಗೌಡ, ದ್ವಿತೀಯ ಪಿಯುಸಿಯ ಸ್ಪೂರ್ತಿ ಮತ್ತು ಎಂಬಿಬಿಎಸ್ ಓದುತ್ತಿರುವ ಜೆ.ನಯನ ಅವರಿಗೆ ಪುರಸ್ಕರಿಸಿ ಪ್ರೋತ್ಸಾಹ ಧನ ವಿತರಿಸಲಾಯಿತು.
ಉಪಾಧ್ಯಕ್ಷ ಎಂ.ಕೇಶವರೆಡ್ಡಿ, ನಿರ್ದೇಶಕರಾದ ಡಿ.ಎನ್.ಕೃಷ್ಣಪ್ಪ, ಬಿ.ಎಲ್.ನಂಜುಂಡಪ್ಪ, ಎಂ.ಆನಂದಪ್ಪ, ಅಶೋಕ್ ಕುಮಾರ್, ಕೆ.ಮುನಿರೆಡ್ಡಿ, ಶಿಶಕುಮಾರ್, ಲಿಂಗಪ್ಪ, ಡಿ.ಎಂ.ವೆಂಕಟೇಶಪ್ಪ, ಗೌರಮ್ಮ, ಬೈರಮ್ಮ, ರಾಧಮ್ಮ, ಡೇರಿಯ ಕಾರ್ಯನಿರ್ವಾಹಕ ಮಂಜುನಾಥ್, ಸಿಬ್ಬಂದಿ ಹಾಜರಿದ್ದರು.