Sidlaghatta : ದೇಶದ ರಕ್ಷಣೆಗೆ ಸೈನಿಕರು ಎಷ್ಟು ಮುಖ್ಯವೋ ದೇಹದ ಆರೋಗ್ಯ ರಕ್ಷಣೆಗೆ ವೈದ್ಯರು ಅಷ್ಟೇ ಮುಖ್ಯ. ಹಾಗಾಗಿಯೆ ವೈದ್ಯರನ್ನು ನಾರಾಯಣನಿಗೆ ಹೋಲಿಕೆ ಮಾಡಲಾಗುತ್ತದೆ ಎಂದು ಡಾಲ್ಫಿನ್ ಪಬ್ಲಿಕ್ ಶಾಲೆಯ ವ್ಯವಸ್ಥಾಪಕ ನಿರ್ದೇಶಕ ಎನ್.ಅಶೋಕ್ ತಿಳಿಸಿದರು.
ನಗರದ ಡಾಲ್ಫಿನ್ ಪಬ್ಲಿಕ್ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಹತ್ತನೇ ರಾಷ್ಟ್ರೀಯ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ನಾವು ಎಷ್ಟೇ ಎತ್ತರಕ್ಕೆ ಬೆಳೆದರೂ ನಮ್ಮೆಲ್ಲರಿಗೂ ಜನ್ಮ ನೀಡಿದ ಹೆತ್ತವರನ್ನು, ದೇಶದ ಗಡಿ ಕಾದು ರಕ್ಷಣೆ ನೀಡುವ ಸೈನಿಕರನ್ನು, ಅಕ್ಷರ ಕಲಿಸಿದ ಗುರುಗಳನ್ನು, ಪ್ರಾಣ ಉಳಿಸುವ ವೈದ್ಯರನ್ನು ಮರೆಯಬಾರದು. ಇವರೆಲ್ಲರ ಸೇವೆ ಅನನ್ಯ ಹಾಗೂ ಅವಿಸ್ಮರಣೀಯ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ್‌ಮೂರ್ತಿ ಮಾತನಾಡಿ, ದೇಶದ ಅಭಿವೃದ್ಧಿಯಲ್ಲಿ ವೈದ್ಯರ ಪಾತ್ರ ಅತ್ಯಂತ ಅಗತ್ಯವಾಗಿದ್ದು ನಮ್ಮೆಲ್ಲರ ಆರೋಗ್ಯ ಉತ್ತಮವಾಗಿದ್ದರೆ ಮಾತ್ರ ಉತ್ತಮ ಬದುಕು ಉತ್ತಮ ದೇಶ ನಮ್ಮದಾಗಲಿದೆ ಎಂದರು.
ಭವ್ಯ ಭವಿಷ್ಯದ ಭಾರತವನ್ನು ಕಾಣಬೇಕಾದರೆ ಪ್ರತಿಯೊಬ್ಬರು ತನ್ನದೇ ಆದ ಗುರಿಯನ್ನು ಹೊಂದಿರಬೇಕು. ಆ ಗುರಿಯನ್ನು ಮುಟ್ಟಲು ಸತತ ಪ್ರಯತ್ನವನ್ನ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತನ್ನು ಹೇಳಿದರು.
ವೈದ್ಯರಾದ ಡಾ.ಲತಾ ಮಾತನಾಡಿ, ಪ್ರತಿಯೊಂದು ಮಗುವೂ ಈ ದೇಶದ ಆಸ್ತಿ. ಈ ದೇಶದ ಭವಿಷ್ಯವನ್ನು ರೂಪಿಸುವ, ಅಭಿವೃದ್ದಿ ಪಥವನ್ನೇ ಬದಲಿಸುವ ಶಕ್ತಿ ಇವರಿಗೆ ಭವಿಷ್ಯದಲ್ಲಿ ಬರಲಿದೆ. ಅದಕ್ಕಾಗಿ ಮಕ್ಕಳನ್ನು ನಾವಿಂದು ಉತ್ತಮ ಹಾದಿಯಲ್ಲಿ ಬೆಳೆಸಬೇಕೆಂದರು.
ಆರೋಗ್ಯವಂತ ಮಗುವನ್ನು ನಾವು ಬೆಳೆಸಿದರೆ ದೇಶ ತಂತಾನೆ ಅಭಿವೃದ್ದಿ ಪ್ರಗತಿ ಕಾಣುತ್ತದೆ ಎಂದು ದೇಶದ ಅಭಿವೃದ್ದಿ, ಉತ್ತಮ ಸಮಾಜದ ನಿರ್ಮಾಣದಲ್ಲಿ ಆರೋಗ್ಯದ ಪಾತ್ರ ಮತ್ತು ವೈದ್ಯರ ಪಾತ್ರದ ಬಗ್ಗೆ ವಿವರಿಸಿದರು.
ಸಾರ್ವಜನಿಕ ಆಸ್ಪತ್ರೆಯ ಆರೋಗ್ಯ ನಿರೀಕ್ಷಕ ದೇವರಾಜ್, ಡಾಲ್ಫಿನ್ ಶಾಲೆಯ ಆಡಳಿತ ಅಧಿಕಾರಿ ಚಂದನಅಶೋಕ್, ಪ್ರಿನ್ಸಿಪಾಲ್ ಮುನಿಕೃಷ್ಣಪ್ಪ, ಶಿಕ್ಷಕರು, ವಿದ್ಯಾರ್ಥಿಗಳು, ಆರೋಗ್ಯ ಇಲಾಖೆ ಸಿಬ್ಬಂದಿ ಹಾಜರಿದ್ದರು.