Sidlaghatta : ನೀತಿ ಸಂಹಿತೆ ಜಾರಿಯಲ್ಲಿದ್ದು ಪಾರದರ್ಶಕ, ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆ ನಡೆಸಲು ನಾವು ಸಿದ್ದರಿದ್ದೇವೆ. ಎಲ್ಲ ಮಾನ್ಯತೆ ಪಡೆದ ಪಕ್ಷಗಳ ಪ್ರತಿನಿಧಿಗಳು, ಅಭ್ಯರ್ಥಿಗಳು, ಸಾರ್ವಜನಿಕರು, ಮತದಾರರು ಸಹಕರಿಸಬೇಕೆಂದು ಸಹಾಯಕ ಚುನಾವಣಾಧಿಕಾರಿಗಳೂ ಆದ ತಹಶೀಲ್ದಾರ್ ಬಿ.ಎನ್.ಸ್ವಾಮಿ ಮನವಿ ಮಾಡಿದರು.
ಶಿಡ್ಲಘಟ್ಟ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಮಾನ್ಯತೆ ಪಡೆದ ಪಕ್ಷಗಳ ಪ್ರತಿನಿಧಿಗಳೊಂದಿಗಿನ ಸಭೆಯಲ್ಲಿ ಅವರು ಮಾತನಾಡಿದರು.
ಮುಂದಿನ ಮಾ.28 ರಂದು ಅಧಿಸೂಚನೆ ಹೊರಡಿಸಲಿದ್ದು ಏ.4 ರವರೆಗೂ ನಾಮಪತ್ರ ಸಲ್ಲಿಸಲು ಅವಕಾಶವಿದೆ. ಏ.5 ರಂದು ನಾಮಪತ್ರಗಳ ಪರಿಶೀಲನೆ, ಏ.8 ರಂದು ನಾಮ ಪತ್ರಗಳನ್ನು ವಾಪಸ್ ಪಡೆಯಲು ಅವಕಾಶ ಇರುತ್ತದೆ. ಏಪ್ರಿಲ್ 26 ರಂದು ಕೋಲಾರ ಲೋಕಸಭೆಗೆ ಚುನಾವಣೆ ನಡೆಯಲಿದೆ. ಜೂನ್ 4 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ ಎಂದರು.
ಕೋಲಾರ ಲೋಕಸಭಾ ವ್ಯಾಪ್ತಿಗೆ ಸೇರುವ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣೆಗೆ ಸಂಬಂಧಿಸಿದ ಏನೇ ಕಾರ್ಯಕ್ರಮ, ಪ್ರಚಾರ ನಡೆಸಲು ಸಂಬಂಧಿಸಿದವರಿಂದ ಪೂರ್ವಾನುಮತಿ ಕಡ್ಡಾಯ, ಸುವಿಧ ಆಪ್ ಮೂಲಕ 24 ಗಂಟೆಗಳ ಮುಂಚಿತವಾಗಿ ಅನುಮತಿಗಾಗಿ ಅರ್ಜಿ ಸಲ್ಲಿಸಬೇಕು.
ಅನುಮತಿ ಪಡೆದುಕೊಳ್ಳಲು ಬೇರೆ ಬೇರೆ ಇಲಾಖೆಗಳಿಗೆ ಪ್ರತ್ಯೇಕ ಅರ್ಜಿ ಸಲ್ಲಿಸಬೇಕಿಲ್ಲ. ಬದಲಿಗೆ ಏಕ ಗವಾಕ್ಷಿ ಯೋಜನೆ ಇದಾಗಿದ್ದು ಎಲ್ಲ ಇಲಾಖೆಗಳು ಈ ಆಪ್ ಮೂಲಕವೇ ಅನುಮತಿ ನೀಡಲು ಅವಕಾಶವಿದೆ ಎಂದರು.
ಸಿ-ವಿಝಿಲ್ ಆಪ್ ಮೂಲಕ ಸಾರ್ವಜನಿಕರು, ಮತದಾರರು ಅಥವಾ ಯಾರೇ ಆಗಲಿ ಚುನಾವಣೆಯ ಅಕ್ರಮಗಳ ಬಗ್ಗೆ ದೂರು ನೀಡಬಹುದು, ದೂರುದಾರರ ಗೌಪ್ಯತೆಯನ್ನು ಕಾಪಾಡಲಾಗುತ್ತದೆ. ದೂರು ಸಲ್ಲಿಸಿದ 90 ನಿಮಿಷದೊಳಗೆ ಸಂಬಂಧಿಸಿದ ತಂಡ ಸ್ಥಳಕ್ಕೆ ಭೇಟಿ ನೀಡಿ ದೂರನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ವಿವರಿಸಿದರು.
ಇನ್ನು ಮಾನ್ಯತೆ ಪಡೆದ ರಾಜಕೀಯ ಪಕ್ಷಗಳು ಏನು ಮಾಡಬೇಕು, ಏನು ಮಾಡಬಾರದು, ಯಾವ ಹಂತದಲ್ಲಿ ಯಾರ ಅನುಮತಿ ಪಡೆಯಬೇಕು ಎಂಬುದರ ಬಗ್ಗೆ ಚರ್ಚಿಸಲಾಯಿತು. ಲೋಕಸಭಾ ಅಭ್ಯರ್ಥಿಗೆ ಲೋಕಸಭಾ ವ್ಯಾಪ್ತಿಯಲ್ಲಿ ಒಬ್ಬರು ಏಜೆಂಟರು ಇರುತ್ತಾರೆ.
ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಏಜೆಂಟರ ನೇಮಕ ಮಾಡಲು ಅವಕಾಶ ಇದೆಯಾ ಎಂಬುದರ ಬಗ್ಗೆ ಹಿರಿಯ ಅಧಿಕಾರಿಗಳ ಜತೆ ಚರ್ಚಿಸಿ ಹೇಳುತ್ತೇನೆಂದು ತಹSIಲ್ದಾರ್ ಬಿ.ಎನ್.ಸ್ವಾಮಿ ಪಕ್ಷಗಳ ಪ್ರತಿನಿಧಿಗಳಿಗೆ ತಿಳಿಸಿದರು. ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಬಿಎಸ್ಪಿ ಇನ್ನಿತರೆ ಪಕ್ಷಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.