Jangamakote, Sidlaghatta : “ಅಂತರ್ಜಲವನ್ನೇ ನಂಬಿ ಬದುಕುತ್ತಿರುವ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ನಿರುದ್ಯೋಗ ಸಮಸ್ಯೆ ಹೋಗಲಾಡಿಸಲು ಕೆಐಎಡಿಬಿ ಕೈಗಾರಿಕೆಗಳ ಸ್ಥಾಪನೆ ಅತ್ಯಗತ್ಯ. ಈ ನಿಟ್ಟಿನಲ್ಲಿ ಸರ್ಕಾರವು ಕೂಡಲೇ ಅಂತಿಮ ಅಧಿಸೂಚನೆ ಹೊರಡಿಸಲು ಒತ್ತಡ ತರಬೇಕು,” ಎಂದು ರೈತ ಮುಖಂಡರು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರಿಗೆ ಮನವಿ ಮಾಡಿದರು.
ಜಂಗಮಕೋಟೆಯ ಶಾಲಾ ಕಾರ್ಯಕ್ರಮವೊಂದಕ್ಕೆ ತೆರಳುತ್ತಿದ್ದ ಶ್ರೀಗಳನ್ನು ಮಾರ್ಗಮಧ್ಯೆ ಜೆ.ವೆಂಕಟಾಪುರದ ಬಳಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರೈತ ಮುಖಂಡರು ಭೇಟಿ ಮಾಡಿದರು. ತಾಲ್ಲೂಕಿನ ಅಭಿವೃದ್ಧಿಯ ಹಿತದೃಷ್ಟಿಯಿಂದ ಕೈಗಾರಿಕಾ ವಲಯದ ಸ್ಥಾಪನೆಗೆ ಶ್ರೀಗಳು ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದು ಅವರು ವಿನಂತಿಸಿದರು.
ಜಮೀನು ವಿವರ ಮತ್ತು ರೈತರ ಒಪ್ಪಿಗೆ:
ಹೋರಾಟಗಾರರು ಶ್ರೀಗಳಿಗೆ ನೀಡಿದ ಮಾಹಿತಿಯ ಪ್ರಕಾರ, ಜಂಗಮಕೋಟೆ ಹೋಬಳಿಯ 13 ಹಳ್ಳಿಗಳಲ್ಲಿ ಸುಮಾರು 2823 ಎಕರೆ ಜಮೀನು ಭೂಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ. ಇದರಲ್ಲಿ:
1623 ಎಕರೆ: ಸರ್ಕಾರಿ ಗೋಮಾಳ, ಗುಂಡುತೋಪು ಹಾಗೂ ಪಿ.ಎಸ್.ಎಲ್ ಕಂಪನಿ ವಶದಲ್ಲಿದೆ.
1200 ಎಕರೆ: ರೈತರ ಹೆಸರಿನಲ್ಲಿದ್ದು, ಬಹುಪಾಲು ರೈತರು ಈಗಾಗಲೇ ಕೆಐಎಡಿಬಿಗೆ ಜಮೀನು ನೀಡಲು ಸ್ವಯಂಪ್ರೇರಿತ ಒಪ್ಪಿಗೆ ಸೂಚಿಸಿದ್ದಾರೆ.

ನಿರುದ್ಯೋಗದ ಆತಂಕ: “ಪ್ರತಿ ವರ್ಷ ಸಾವಿರಾರು ವಿದ್ಯಾರ್ಥಿಗಳು ಪದವಿ ಮುಗಿಸಿ ಹೊರಬರುತ್ತಿದ್ದರೂ ಉದ್ಯೋಗವಿಲ್ಲದೆ ಕಂಗಾಲಾಗಿದ್ದಾರೆ. ಫಲವತ್ತಾದ ನೀರಾವರಿ ಪ್ರದೇಶಗಳನ್ನು ಹೊರತುಪಡಿಸಿ, ಉಳಿದ ಜಮೀನಿನಲ್ಲಿ ಕೈಗಾರಿಕೆ ಸ್ಥಾಪನೆಯಾದರೆ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಯಾಗುತ್ತದೆ. ಕಳೆದ ಒಂದು ವರ್ಷದಿಂದ ಸರ್ಕಾರಕ್ಕೆ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ,” ಎಂದು ರೈತ ಮುಖಂಡರು ಅಳಲು ತೋಡಿಕೊಂಡರು.
ಮನವಿ ಸ್ವೀಕರಿಸಿದ ಶ್ರೀಗಳು ಪ್ರತಿಕ್ರಿಯಿಸಿ, “ಈ ವಿಷಯದ ಕುರಿತು ಸಮಗ್ರವಾಗಿ ಚರ್ಚಿಸಲು ನೀವೆಲ್ಲರೂ ಒಮ್ಮೆ ಮಠಕ್ಕೆ ಆಗಮಿಸಿ, ಅಲ್ಲಿ ನಾವು ಅಂತಿಮ ತೀರ್ಮಾನಕ್ಕೆ ಬರೋಣ,” ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷ ಸುಗಟೂರು ನಾಗೇಶ್ ಗೌಡ, ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್, ಜಿಲ್ಲಾ ಯುವ ಘಟಕದ ಅಧ್ಯಕ್ಷ ನಲ್ಲೇನಹಳ್ಳಿ ಸುಬ್ರಮಣಿ ಸೇರಿದಂತೆ 13 ಹಳ್ಳಿಗಳ ರೈತ ಪರ ಹೋರಾಟ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.








