Sidlaghatta : ಶಿಡ್ಲಘಟ್ಟ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುವಂತೆ ನೋಡಿಕೊಳ್ಳುವುದು ಸಮಾಜದ ಜವಾಬ್ದಾರಿಯಾಗಿದ್ದು, ಹಣದ ಕೊರತೆಯಿಂದ ಯಾವುದೇ ವಿದ್ಯಾರ್ಥಿ ಶಿಕ್ಷಣದಿಂದ ವಂಚಿತನಾಗಬಾರದು ಎಂದು ಶಾಸಕ ಬಿ.ಎನ್. ರವಿಕುಮಾರ್ ಹೇಳಿದರು.
ತಾಲ್ಲೂಕಿನ ಗಂಜಿಗುಂಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಮಗ್ರಿಗಳನ್ನು ವಿತರಿಸಿ ಅವರು ಮಾತನಾಡಿದರು.
ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಬಹುತೇಕ ಮಕ್ಕಳು ಆರ್ಥಿಕವಾಗಿ ದುರ್ಬಲ ಕುಟುಂಬಗಳಿಂದ ಬಂದವರಾಗಿದ್ದು, ಪ್ರತಿಭೆ ಇದ್ದರೂ ಆರ್ಥಿಕ ಸಂಕಷ್ಟದಿಂದ ಕೆಲವರು ಓದನ್ನು ಅರ್ಧದಲ್ಲೇ ಮೊಟಕುಗೊಳಿಸುತ್ತಾರೆ ಅಥವಾ ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಾರೆ. ಇಂತಹ ಪರಿಸ್ಥಿತಿ ಕ್ಷೇತ್ರದ ಯಾವುದೇ ವಿದ್ಯಾರ್ಥಿಗೆ ಎದುರಾಗಬಾರದು ಎಂಬ ಉದ್ದೇಶದಿಂದ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಅಗತ್ಯ ಶೈಕ್ಷಣಿಕ ನೆರವು ನೀಡಲಾಗುತ್ತಿದೆ ಎಂದು ತಿಳಿಸಿದರು.
ಶಾಸಕರಿಗೆ ವಾರ್ಷಿಕವಾಗಿ ಲಭ್ಯವಾಗುವ ₹32 ಲಕ್ಷ ಅನುದಾನವನ್ನು ತಾಲ್ಲೂಕಿನ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಹಾಗೂ ಲೇಖನಿ ಸಾಮಗ್ರಿಗಳ ವಿತರಣೆಗೆ ಬಳಸಲಾಗುತ್ತಿದೆ. ಅಲ್ಲದೆ, ಉದ್ಯಮಿಗಳು, ಸರ್ಕಾರಿ ನೌಕರರು, ಜನಪ್ರತಿನಿಧಿಗಳು ಮತ್ತು ಸಮಾಜಸೇವಕ ಸಹಕಾರದ ಮೂಲಕ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆರವು ಒದಗಿಸುವ ಪ್ರಯತ್ನವೂ ನಡೆಯುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಜ್ಯ ಒಕ್ಕಲಿಗರ ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಪೂಲಕುಂಟಹಳ್ಳಿ ರಘುನಾಥರೆಡ್ಡಿ ಅವರು ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ಗಳನ್ನು ವಿತರಿಸಿದರು.
ಬಿಇಓ ಪಿ. ಸ್ವಾಮಿ, ಚಿಮುಲ್ ನಿರ್ದೇಶಕರಾದ ಬಂಕ್ ಮುನಿಯಪ್ಪ ಹಾಗೂ ಹುಜಗೂರು ರಾಮಣ್ಣ, ಪೂಲಕುಂಟಹಳ್ಳಿ ರಘುನಾಥರೆಡ್ಡಿ, ನರಸಿಂಹಮೂರ್ತಿ, ನಂದನವನಂ ಶ್ರೀರಾಮರೆಡ್ಡಿ, ಕುಂದಲಗುರ್ಕಿ ಚಂದ್ರು, ಎಸ್.ಡಿ.ಎಂ.ಸಿ ಅಧ್ಯಕ್ಷೆ ಸಮ್ರೀಮ್ ತಾಜ್, ಎಲ್.ವಿ. ವೆಂಕಟರೆಡ್ಡಿ, ಮುಖ್ಯ ಶಿಕ್ಷಕ ಒಬಯ್ಯ, ಶ್ರೀರಾಮ್, ನಾರಾಯಣಸ್ವಾಮಿ, ಮಂಜುನಾಥರೆಡ್ಡಿ, ಅಶೋಕ್ ಬಾಬು, ಚಂದ್ರಶೇಖರ್ ರೆಡ್ಡಿ ಹಾಜರಿದ್ದರು.
In English: MLA B.N. Ravikumar inaugurated an educational materials distribution program at Ganjigunte Government Higher Primary School in Sidlaghatta taluk, distributing notebooks and stationery to students. He said strengthening government school education and ensuring no student is denied education due to financial hardship is a key priority, funded partly through his annual MLA grant and community support.








