Sidlaghatta : ಶಿಡ್ಲಘಟ್ಟ ತಾಲ್ಲೂಕಿನಾದ್ಯಂತ ಶ್ರೀ ಆಂಜನೇಯಸ್ವಾಮಿ ದೇವಾಲಯಗಳಲ್ಲಿ ಹನುಮ ಜಯಂತಿ ಪ್ರಯುಕ್ತ ಶುಕ್ರವಾರ ಶ್ರದ್ದಾ-ಭಕ್ತಿಯಿಂದ ವಿಶೇಷ ಪೂಜೆಗಳು ಜರುಗಿದವು.
ನಗರದ ಕೋಟೆ ಆಂಜನೇಯಸ್ವಾಮಿ ದೇವಾಲಯ, ಮಯೂರ ವೃತ್ತದ ಆಂಜನೇಯಸ್ವಾಮಿ ದೇವಾಲಯ, ಚಿಂತಾಮಣಿ ರಸ್ತೆಯ ವೀರಾಂಜನೇಯಸ್ವಾಮಿ ದೇಗುಲ, ಹಾಗೂ ತಾಲ್ಲೂಕಿನ ಅಪ್ಪೇಗೌಡನಹಳ್ಳಿ, ಮುತ್ತೂರು, ನಾಗಮಂಗಲ ಸೇರಿದಂತೆ ವಿವಿಧ ಗ್ರಾಮಗಳ ಆಂಜನೇಯಸ್ವಾಮಿ ದೇವಾಲಯಗಳಲ್ಲಿ ಹೋಮ, ಹವನ, ವಿಶೇಷ ಅಲಂಕಾರ, ಪೂಜಾ ಮಹೋತ್ಸವಗಳು ನಡೆದವು.
ಚೌಡಸಂದ್ರದಲ್ಲಿ 34ನೇ ವಾರ್ಷಿಕೋತ್ಸವ:
ತಾಲ್ಲೂಕಿನ ಚೌಡಸಂದ್ರ ಗ್ರಾಮದ ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ ಸೀತಾರಾಮ ಲಕ್ಷ್ಮಣ ಸಮೇತ ಆಂಜನೇಯಸ್ವಾಮಿಯ ಉತ್ಸವ ಮೂರ್ತಿಯ ಕಲ್ಯಾಣೋತ್ಸವ ಮತ್ತು ದೇವಾಲಯದ 34ನೇ ವಾರ್ಷಿಕೋತ್ಸವದ ಪ್ರಯುಕ್ತ ವಿಶೇಷ ಪೂಜೆ, ಹೋಮ-ಹವನ, ಮತ್ತು ದೀಪಾಲಂಕೃತ ಅಲಂಕಾರ ನಡೆದವು. ಭಕ್ತರಿಗಾಗಿ ಪ್ರಸಾದ ಮತ್ತು ಭೋಜನ ವ್ಯವಸ್ಥೆ ಕಲ್ಪಿಸಲಾಗಿತ್ತು.
ಹನುಮ ಜಯಂತಿಯ ಪ್ರಯುಕ್ತ ದೇವಾಲಯಗಳನ್ನು ಹೂವಿನ ಅಲಂಕಾರ ಮತ್ತು ವಿದ್ಯುತ್ ದೀಪಗಳಿಂದ ಸಿಂಗಾರಿಸಲಾಗಿತ್ತು. ಗ್ರಾಮದಲ್ಲಿ ಜಾತ್ರಾ ವಾತಾವರಣ ಸೃಷ್ಟಿಯಾಗಿದೆ. ಭಕ್ತರು ವಿವಿಧ ತಾಲ್ಲೂಕು ಹಾಗೂ ಜಿಲ್ಲೆಗಳಿಂದ ಆಗಮಿಸಿ ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.
ರಾತ್ರಿ ಸ್ವಾಮಿಯ ಉತ್ಸವ ಮೂರ್ತಿಯನ್ನು ಹೂವಿನ ಪಲ್ಲಕ್ಕಿಯಲ್ಲಿ villageದಲಿ ಮೆರವಣಿಗೆ ಮಾಡಲಾಯಿತು. ಈ ಉತ್ಸವ ಮೆರವಣಿಗೆಗೆ ನೂರಾರು ಭಕ್ತರು ಸಾಕ್ಷಿಯಾದರು.