Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ವ್ಯಾಪ್ತಿಯ 13 ಹಳ್ಳಿಗಳಲ್ಲಿ ಕೈಗಾರಿಕಾ ಪ್ರದೇಶ ನಿರ್ಮಾಣಕ್ಕಾಗಿ ನಡೆಯುತ್ತಿರುವ ಭೂಸ್ವಾಧೀನ ಪ್ರಕ್ರಿಯೆ ವಿರೋಧಿಸಿ ಹೋರಾಟ ನಡೆಸುತ್ತಿರುವ ರೈತರಿಗೆ ಹೊಸ ಆಶಾಭಾವ ಮೂಡಿದೆ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಬೆಂಗಳೂರಿನ ಜೆ.ಪಿ. ಭವನದಲ್ಲಿ ನಡೆದ ಸಭೆಯಲ್ಲಿ ರೈತರ ಅಹವಾಲು ಆಲಿಸಿ, ಹೋರಾಟಕ್ಕೆ ಬೆಂಬಲ ಸೂಚಿಸಿರುವುದು ರೈತರಲ್ಲಿ ವಿಶ್ವಾಸ ಹೆಚ್ಚಿಸಿದೆ.
ಸಭೆಯಲ್ಲಿ ಶಿಡ್ಲಘಟ್ಟ ಶಾಸಕ ಬಿ.ಎನ್. ರವಿಕುಮಾರ್, ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಕೆ. ಕೃಷ್ಣಾರೆಡ್ಡಿ ಸೇರಿದಂತೆ ಪಕ್ಷದ ಮುಖಂಡರು ಭಾಗವಹಿಸಿದ್ದರು. ಕೃಷಿ ಭೂಮಿಯಲ್ಲಿ ಕೈಗಾರಿಕಾ ಪ್ರದೇಶ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಹಾಗೂ ರೈತರ ಪರವಾಗಿ ನಿಲ್ಲುವುದಾಗಿ ಶಾಸಕ ಭರವಸೆ ನೀಡಿದರು ಎಂದು ಸಭೆಯಲ್ಲಿ ಪಾಲ್ಗೊಂಡ ರೈತರು ತಿಳಿಸಿದ್ದಾರೆ.
ಜಂಗಮಕೋಟೆ ವ್ಯಾಪ್ತಿಯ 13 ಹಳ್ಳಿಗಳ 2,823 ಎಕರೆ ಭೂಮಿಯನ್ನು ಕೈಗಾರಿಕಾ ಪ್ರದೇಶಕ್ಕಾಗಿ ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಗೆ ವಿರೋಧವಾಗಿ ರೈತರು ಕಳೆದ 112 ದಿನಗಳಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ. ಈವರೆಗೆ ಅಧಿಕಾರಿಗಳಿಂದ ಸಮರ್ಪಕ ಸ್ಪಂದನೆ ದೊರಕಿರಲಿಲ್ಲ ಎನ್ನುವುದು ರೈತರ ಆರೋಪವಾಗಿದೆ.
ಭೂಸ್ವಾಧೀನ ವಿಚಾರವಾಗಿ ಈ ಹಿಂದೆ ಪರ–ವಿರೋಧ ಚರ್ಚೆಗಳು ನಡೆದಿದ್ದವು. ಕೆಐಎಡಿಬಿ ಮೂಲಕ ಭೂಸ್ವಾಧೀನ ಪ್ರಕ್ರಿಯೆ ಮುಂದುವರಿದಿದ್ದು, ಭೂಮಾಲೀಕರಿಗೆ ನೋಟಿಸ್ ನೀಡಿ ದರ ನಿಗದಿ ಸಭೆಗಳನ್ನೂ ನಡೆಸಲಾಗಿತ್ತು. ನೋಟಿಫಿಕೇಷನ್ ಆಗಿದ್ದ 2,823 ಎಕರೆ ಪ್ರದೇಶದಲ್ಲಿ ಕೆಲ ಭೂಮಿಯನ್ನು ಕೈಬಿಟ್ಟು ಉಳಿದ ಭೂಮಿಯ ಸ್ವಾಧೀನ ಪ್ರಕ್ರಿಯೆ ಮುಂದುವರಿದಿತ್ತು.
ಈ ನಡುವೆ ರೈತರ ಮನವಿಯ ಮೇರೆಗೆ ಜೆಡಿಎಸ್ ನಾಯಕರು ಸಭೆ ಆಯೋಜಿಸಿ, ಸಮಸ್ಯೆ ಕುರಿತು ಚರ್ಚಿಸಿದರು. ಹೋರಾಟಕ್ಕೆ ಕೇಂದ್ರ ಸಚಿವ ಕುಮಾರಸ್ವಾಮಿ ಅವರೂ ನೇರವಾಗಿ ಭಾಗವಹಿಸುವುದಾಗಿ ಭರವಸೆ ನೀಡಿರುವುದು ರೈತರಲ್ಲಿ ನಿರೀಕ್ಷೆ ಮೂಡಿಸಿದೆ.
ರೈತರಲ್ಲಿ ವಿಶ್ವಾಸ ಹೆಚ್ಚಿದೆ
“ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಶಾಸಕ ಬಿ.ಎನ್. ರವಿಕುಮಾರ್ ರೈತರ ಭೂಮಿ ಉಳಿಸುವ ಕುರಿತು ಭರವಸೆ ನೀಡಿದ್ದಾರೆ. ನಮ್ಮ ಮನವಿಗೆ ಸ್ಪಂದಿಸಿ ಹೋರಾಟಕ್ಕೆ ಬೆಂಬಲ ಸೂಚಿಸಿರುವುದು ರೈತರಲ್ಲಿ ಹೊಸ ವಿಶ್ವಾಸ ಮೂಡಿಸಿದೆ” ಎಂದು ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಹೇಳಿದರು.
ರೈತರು ತಮ್ಮ ಸಮಸ್ಯೆಗಳನ್ನು ನೇರವಾಗಿ ಜನಪ್ರತಿನಿಧಿಗಳ ಗಮನಕ್ಕೆ ತಂದಿರುವ ಹಿನ್ನೆಲೆಯಲ್ಲಿ, ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಪರಿಹಾರ ದೊರೆಯುವ ನಿರೀಕ್ಷೆ ವ್ಯಕ್ತವಾಗಿದೆ.
In English: Union Minister H.D. Kumaraswamy has extended support to farmers protesting the acquisition of 2,823 acres across 13 villages in Sidlaghatta’s Jangamakote region for an industrial area, at a meeting held in Bengaluru. Farmers have been protesting outside the Deputy Commissioner’s office for 112 days; local MLA B.N. Ravikumar reaffirmed he would stand by farmers and oppose converting agricultural land for industrial use.








