Sidlaghatta : “ನಗರಸಭೆ ಪೌರಾಯುಕ್ತೆ, ಪೌರಕಾರ್ಮಿಕರು ಮತ್ತು ಜನಪ್ರಿಯ ಶಾಸಕರ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕ್ಷೇತ್ರದ ಶಾಂತಿ ಕದಡುತ್ತಿರುವ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅವರನ್ನು ಶಿಡ್ಲಘಟ್ಟ ಕ್ಷೇತ್ರದಿಂದಲೇ ಹೊರಹಾಕಬೇಕು,” ಎಂದು ಜೆಡಿಎಸ್ ಹಿರಿಯ ಮುಖಂಡ ಹಾಗೂ ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಬಂಕ್ ಮುನಿಯಪ್ಪ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ನಡೆದ ಜೆಡಿಎಸ್ ಮುಖಂಡರ ತುರ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜೀವ್ ಗೌಡ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಸಂಸ್ಕಾರವಿಲ್ಲದ ವ್ಯಕ್ತಿಗೆ ನಾಯಕತ್ವ ಬೇಡ: “ಶಿಡ್ಲಘಟ್ಟ ಕ್ಷೇತ್ರದ ಇತಿಹಾಸದಲ್ಲಿ ಕಾಂಗ್ರೆಸ್ ಅಥವಾ ಜೆಡಿಎಸ್ ನ ಯಾವೊಬ್ಬ ಶಾಸಕರೂ ಇಷ್ಟು ಕೀಳುಮಟ್ಟದ ಪದ ಬಳಕೆ ಮಾಡಿದ ಉದಾಹರಣೆಯಿಲ್ಲ. ಕೇವಲ ರಿಯಲ್ ಎಸ್ಟೇಟ್ ಮೂಲಕ ಹಣ ಮಾಡಿ ಬಂದಿರುವ ರಾಜೀವ್ ಗೌಡರಿಗೆ ಸಂಸ್ಕಾರ ಕಲಿಸಿದಂತಿಲ್ಲ. ಒಬ್ಬ ಮಹಿಳಾ ಅಧಿಕಾರಿಯನ್ನು ಚಪ್ಪಲಿಯಲ್ಲಿ ಹೊಡೆಸುತ್ತೇನೆ, ಕಚೇರಿಗೆ ಬೆಂಕಿ ಹಚ್ಚುತ್ತೇನೆ ಎನ್ನುವ ಇಂತಹ ಕಿಡಿಗೇಡಿಯನ್ನು ನಾಯಕನಾಗಿ ಮುಂದುವರೆಸುವುದು ಕಾಂಗ್ರೆಸ್ ಪಕ್ಷಕ್ಕೂ ಶೋಭೆ ತರುವುದಿಲ್ಲ,” ಎಂದು ಟೀಕಿಸಿದರು.
ಉಗ್ರ ಹೋರಾಟದ ಎಚ್ಚರಿಕೆ: ಮುಖಂಡ ಮೇಲೂರು ಮಂಜುನಾಥ್ ಮಾತನಾಡಿ, “ಅಧಿಕಾರವಿಲ್ಲದಾಗಲೇ ಸರ್ಕಾರಿ ಅಧಿಕಾರಿಗಳ ಮೇಲೆ ಇಷ್ಟೊಂದು ದರ್ಪ ತೋರಿಸುವ ವ್ಯಕ್ತಿಗೆ ಅಧಿಕಾರ ಸಿಕ್ಕರೆ ಕ್ಷೇತ್ರದ ಜನರ ಪರಿಸ್ಥಿತಿ ಏನಾಗಬೇಡ? ಇವರನ್ನು ಕೂಡಲೇ ಬಂಧಿಸದಿದ್ದರೆ ತಾಲ್ಲೂಕು ಜೆಡಿಎಸ್ ವತಿಯಿಂದ ಕ್ಷೇತ್ರದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು,” ಎಂದು ಎಚ್ಚರಿಸಿದರು.
ಕಳೆದ ಎರಡೂವರೆ ವರ್ಷಗಳಿಂದ ಶಾಸಕ ಬಿ.ಎನ್. ರವಿಕುಮಾರ್ ಅವರು ಕ್ಷೇತ್ರವನ್ನು ಶಾಂತಿಯುತವಾಗಿರಿಸಲು ಶ್ರಮಿಸುತ್ತಿದ್ದಾರೆ. ಅಂತಹವರ ವಿರುದ್ಧವೂ ರಾಜೀವ್ ಗೌಡ ಅವಾಚ್ಯ ಪದ ಬಳಸಿದ್ದಾರೆ ಎಂದು ಜೆಡಿಎಸ್ ಮುಖಂಡರು ದೂರಿದರು. ಸುದ್ದಿಗೋಷ್ಠಿಯಲ್ಲಿ ಹುಜಗೂರು ರಾಮಯ್ಯ, ನಾಗಮಂಗಲ ಶ್ರೀನಿವಾಸಗೌಡ ಸೇರಿದಂತೆ ಹತ್ತಾರು ಮುಖಂಡರು ಭಾಗವಹಿಸಿದ್ದರು.








