Sidlaghatta : ಶಿಡ್ಲಘಟ್ಟ ನಗರ ಹೊರವಲಯದ ಬೂದಾಳ ಸಮೀಪ ಇರುವ ಶ್ರೀಕಾಟೇರಮ್ಮ ದೇವಾಲಯದಲ್ಲಿ ತಾಯಿ ಕಾಟೇರಮ್ಮನ ಮೈಮೇಲೆ ಹಾಕಿದ್ದ ಚಿನ್ನ ಬೆಳ್ಳಿಯ ಆಭರಣ ಮತ್ತು ಹುಂಡಿಯಲ್ಲಿ ಭಕ್ತರು ಹಾಕಿದ್ದ ಕಾಣಿಕೆಯ ಹಣವನ್ನು ಕಳ್ಳರು ದೋಚಿದ್ದಾರೆ.
ಶಿಡ್ಲಘಟ್ಟ-ಚಿಂತಾಮಣಿ ಮಾರ್ಗ ರಾಷ್ಟ್ರೀಯ ಹೆದ್ದಾರಿ-234 ಕ್ಕೆ ಹೊಂದಿಕೊಂಡಂತೆ ಬೂದಾಳ ಬಳಿ ಇರುವ ಶ್ರೀಕಾಟೇರಮ್ಮ ದೇವಾಲಯದಲ್ಲಿ ಚಿನ್ನಾಭರಣ, ಹುಂಡಿಯಲ್ಲಿನ ಹಣ ಕಳ್ಳತನವಾಗಿದ್ದು ಭಕ್ತರಲ್ಲಿ ಆತಂಕ ಮೂಡಿಸಿದೆ.
ಗರ್ಭಗುಡಿಯ ನಿರ್ಮಾಣವಷ್ಟೆ ಪೂರ್ಣಗೊಂಡಿದ್ದು ಆಲಯ ಇನ್ನೂ ಪೂರ್ಣಗೊಂಡಿಲ್ಲ. ಕೆಲ ತಿಂಗಳ ಹಿಂದಷ್ಟೆ ಪ್ರತಿಷ್ಠಾಪಿಸಿದ್ದ ಕಾಟೇರಮ್ಮ ದೇವಿಗೆ ಚಿನ್ನದ ತಾಳಿ ಸೇರಿದಂತೆ ಕೆಲ ಬೆಳ್ಳಿಯ ಆಭರಣಗಳನ್ನು ತೊಡಿಸಲಾಗಿತ್ತು. ಹುಂಡಿಯಲ್ಲಿ ಭಕ್ತರು ಹಾಕಿದ್ದ ಹಣವಿತ್ತು.
ಯಾರೋ ದುಷ್ಕರ್ಮಿಗಳು ದೇವಾಲಯಕ್ಕೆ ನುಗ್ಗಿ ದೇವರ ಮೈಮೇಲಿದ್ದ ಚಿನ್ನದ ತಾಳಿ ಬೊಟ್ಟು, ಬೆಳ್ಳಿಯ ಆಭರಣಗಳನ್ನು ಕದ್ದಿದ್ದಾರೆ. ಹುಂಡಿಯಲ್ಲಿನ ಹಣವನ್ನು ದೋಚಿ ಖಾಲಿ ಹುಂಡಿಯನ್ನು ಅಲ್ಲೇ ಸಮೀಪದ ತೋಟವೊಂದರಲ್ಲಿ ಬಿಸಾಡಿ ಹೋಗಿದ್ದಾರೆ.
ನಿತ್ಯದಂತೆ ಪೂಜೆ ಸಲ್ಲಿಸಲು ಪೂಜಾರಿಯು ದೇವಾಲಯಕ್ಕೆ ಹೋದಾಗ ಕಳ್ಳತನ ಆಗಿರುವುದು ಗಮನಕ್ಕೆ ಬಂದಿದ್ದು ಶಿಡ್ಲಘಟ್ಟ ಗ್ರಾಮಾಂತರ ಠಾಣೆ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.