Melur, Sidlaghatta : ಮೇಲೂರಿನ SJC ಶಾಲೆಯಲ್ಲಿ ಗುರುವಾರ ವಿಶ್ವ ಹಿಂದೂ ಪರಿಷತ್ ಹಾಗೂ ಎಸ್.ಜೆ.ಸಿ ಶಾಲೆಯ ವತಿಯಿಂದ ಗೋಕುಲಾಷ್ಟಮಿ ಮತ್ತು ವಿಶ್ವ ಹಿಂದೂ ಪರಿಷತ್ತಿನ ಷಷ್ಠಿ ಪೂರ್ತಿ ಸಮಾರಂಭವನ್ನು ಆಯೋಜಿಸಲಾಗಿತ್ತು.
ಮೇಲೂರಿನ ಅಂಗನವಾಡಿ ಮಕ್ಕಳು, ಸರ್ಕಾರಿ ಪ್ರಾಥಮಿಕ ಶಾಲಾ ಮಕ್ಕಳು ಹಾಗೂ ಎಸ್.ಜೆ.ಸಿ ಶಾಲಾ ಮಕ್ಕಳು ಶ್ರೀ ಕೃಷ್ಣ ರಾಧಾ ಹಾಗೂ ಪುರಾಣ ಪುಣ್ಯ ಪುರುಷರ ವೇಷ ಭೂಷಣಗಳನ್ನು ಧರಿಸಿ ದೇಶೀಯ ಸಂಸ್ಕೃತಿಯನ್ನು ಪ್ರಸ್ತುತಪಡಿಸಿದ್ದರು.
ವಿಶ್ವ ಹಿಂದೂ ಪರಿಷತ್ ನ ಕೋಲಾರ ಸಂಘಟನಾ ಕಾರ್ಯದರ್ಶಿ ಸಾಗರ್ ಜೀ ಮಾತನಾಡಿ, ರಾಷ್ಟ್ರದಲ್ಲಿ ವಿಶ್ವ ಹಿಂದೂ ಪರಿಷತ್ ಸ್ಥಾಪನೆಯಾಗಿ ಅರುವತ್ತು ವರ್ಷ ಪೂರ್ಣಗೊಂಡ ನೆನಪಿನಲ್ಲಿ ಷಷ್ಠಿ ಪೂರ್ತಿ ಸಂಭ್ರಮಾಚರಣೆ ನಡೆಸಲಾಗುತ್ತಿದೆ. ಮೈಸೂರಿನ ಮೊದಲು ಪರಿಷತ್ತಿನ ಅಧ್ಯಕ್ಷರಾಗಿದ್ದವರು ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರು. ಅಖಂಡ ಭಾರತವು ಮತ್ತೊಮ್ಮೆ ಒಂದಾಗಿ ಬೆಳಗಬೇಕಾದದು ಇಂದಿನ ಅಗತ್ಯವಾಗಿದೆ. ಎಲ್ಲರಲ್ಲೂ ಏಕತೆ, ಒಗ್ಗಟ್ಟು, ಸಹೋದರ ಭಾವನೆ, ಎಲ್ಲದೊಂದಿಗೆ ಸಹಕರಿಸಿ ಬಾಳುವ ದಯಾಪರತೆ ಬೆಳೆಯಲಿ ಎಂದು ಹೇಳಿದರು.
ಪರಿಷತ್ ನ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಜೀ ಮಕ್ಕಳ ಉತ್ಸಾಹದಲ್ಲಿ ಭಾಗಿಯಾಗಿ ಸಂತಸ ಹಂಚಿಕೊಂಡರು. ಪರಿಷತ್ ನ ತಾಲ್ಲೂಕು ಕಾರ್ಯದರ್ಶಿ ಮಲ್ಲೇಶ್ ಜೀ, ಎಸ್ ಜೆ ಸಿ ಶಾಲೆಯ ಕಾರ್ಯದರ್ಶಿ ಎಂ.ಎಸ್.ಗೋಪಿನಾಥ್, ಮೇಲೂರಿನ ಮಹೇಶ್, ಸುಧೀರ್, ಸುದರ್ಶನ್, ಶಿಕ್ಷಕ ಪ್ರಕಾಶ್, ಶಾಲೆಯ ಶಿಕ್ಷಕರು, ಪೋಷಕರು ಹಾಜರಿದ್ದರು.