Melur, Sidlaghatta, Chikkaballapur : ತಾಲ್ಲೂಕಿನ ಮೇಲೂರು ಗ್ರಾಮದಲ್ಲಿ ಆಕಸ್ಮಿಕವಾಗಿ ಚರಂಡಿಗೆ ಬಿದ್ದಿದ್ದ ಸೀಮೆ ಹಸುವೊಂದನ್ನು ಸ್ಥಳೀಯ ಯುವಕರು ತಕ್ಷಣ ಕಾರ್ಯಪ್ರವೃತ್ತರಾಗಿ ಜೆಸಿಬಿ ಯಂತ್ರದ ನೆರವಿನಿಂದ ರಕ್ಷಿಸಿದ್ದಾರೆ. ರಕ್ಷಣೆಯ ನಂತರ ಹಸುವಿಗೆ ಸೂಕ್ತ ಚಿಕಿತ್ಸೆ ಕೊಡಿಸಿ ರೈತರಿಗೆ ಒಪ್ಪಿಸುವ ಮೂಲಕ ಯುವಕರ ತಂಡ ಮಾನವೀಯತೆ ಮೆರೆದಿದೆ.
ಮೇಲೂರು ಮಾರ್ಗದಲ್ಲಿ ಹಾದುಹೋಗುವ ರಸ್ತೆ ಪಕ್ಕದಲ್ಲಿದ್ದ ಚರಂಡಿಯ ಮೋರಿಗೆ ಸೀಮೆ ಹಸು ಬಿದ್ದಿತ್ತು. ತಕ್ಷಣ ಇದನ್ನು ಗಮನಿಸಿದ ಗ್ರಾಮದ ಯುವಕ ಧನುಷ್ ಮತ್ತು ಅವರ ಸ್ನೇಹಿತರ ತಂಡ ಕಾರ್ಯೋನ್ಮುಖವಾಯಿತು. ಅವರು ತಡಮಾಡದೆ ಜೆಸಿಬಿ ಯಂತ್ರವನ್ನು ತರಿಸಿ, ಬಿದ್ದಿದ್ದ ಹಸುವನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿದರು. ಈ ವೇಳೆ ಗಾಯಗೊಂಡಿದ್ದ ಹಸು ನಿತ್ರಾಣಗೊಂಡಿತ್ತು.
ರಕ್ಷಣಾ ಕಾರ್ಯದ ಬಳಿಕ, ಯುವಕರು ಸೀಮೆ ಹಸುವನ್ನು ಹತ್ತಿರದಲ್ಲೇ ಇದ್ದ ಪಶು ವೈದ್ಯಕೀಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದರು. ಸಂಪೂರ್ಣ ಉಪಚರಿಸಿದ ನಂತರ ಹಸುವನ್ನು ಅದರ ಮಾಲೀಕರಾದ ರೈತರಿಗೆ ಒಪ್ಪಿಸಿದರು. ಯುವಕ ಧನುಷ್ ಮತ್ತು ಅವರ ಸ್ನೇಹಿತರು ಸಮಯಪ್ರಜ್ಞೆ ಮತ್ತು ಮಾನವೀಯತೆಯಿಂದ ಮಾಡಿದ ಈ ಕಾರ್ಯಕ್ಕೆ ಗ್ರಾಮಸ್ಥರು ಹಾಗೂ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.








