Hemarlahalli, Sidlaghatta, Chikkaballapur : ಗ್ರಾಮೀಣ ಹಾಗೂ ಆರ್ಥಿಕವಾಗಿ ಹಿಂದುಳಿದ ಪ್ರದೇಶಗಳಿಗೂ ಆರೋಗ್ಯ ಸೇವೆಯನ್ನು ವಿಸ್ತರಿಸುವ ಉದ್ದೇಶದಿಂದ ಹೇಮರ್ಲಹಳ್ಳಿಯಲ್ಲಿ ಮೊಬೈಲ್ ವೈದ್ಯಕೀಯ ಘಟಕ (Mobile Medical Unit) ಗೆ ಚಾಲನೆ ನೀಡಲಾಯಿತು. ತಾಲ್ಲೂಕಿನ ಹೇಮರ್ಲಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ನಡೆದ ಈ ಕಾರ್ಯಕ್ರಮವನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್. ಮಹೇಶ್ ಕುಮಾರ್ ಅವರು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಜನರ ಮನೆ ಬಾಗಿಲಿಗೇ ವೈದ್ಯಕೀಯ ಸೇವೆ ತಲುಪಿಸುವ ಈ ಯೋಜನೆ ಜನಪರ ಕಾರ್ಯಕ್ರಮವಾಗಿದೆ. ಸರ್ಕಾರದ ಜೊತೆಗೂಡಿ ಖಾಸಗಿ ಸಂಸ್ಥೆಗಳು ಆರೋಗ್ಯ ರಕ್ಷಣೆಯಲ್ಲಿ ಸಹಕರಿಸುತ್ತಿರುವುದು ಶ್ಲಾಘನೀಯ. ವಿಶೇಷವಾಗಿ ಲ್ಯಾಂಡ್ ಮಾರ್ಕ್ ಕೇರ್ಸ್ ಮತ್ತು ಸೇವಂ ಬಿ ಸಂಸ್ಥೆಗಳ ಸಹಯೋಗದ ಈ ಪ್ರಯತ್ನ ಗ್ರಾಮೀಣ ಜನತೆಗೆ ಉಪಯುಕ್ತ,” ಎಂದು ಹೇಳಿದರು.
ಲ್ಯಾಂಡ್ ಮಾರ್ಕ್ ಗ್ರೂಪ್‌ನ ಸಿ.ಎಸ್.ಆರ್ ವ್ಯವಸ್ಥಾಪಕ ಅಗ್ನಿಶ್ವರ್ ದಾಸ್ ಮಾತನಾಡಿ, “ಮೊಬೈಲ್ ಮೆಡಿಕಲ್ ಘಟಕವನ್ನು ಹೇಮರ್ಲಹಳ್ಳಿ ಪಿಎಚ್‌ಸಿಯಲ್ಲಿ ಯಶಸ್ವಿಯಾಗಿ ಪ್ರಾರಂಭಿಸಲಾಗಿದೆ. ಇದರಡಿ ಪಿಎಚ್‌ಸಿ ವ್ಯಾಪ್ತಿಯ 18 ಹಳ್ಳಿಗಳ ಜನರಿಗೆ ವೈದ್ಯಕೀಯ ತಪಾಸಣೆ ಮತ್ತು ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಒದಗಿಸುವ ಗುರಿ ಹೊಂದಿದ್ದೇವೆ,” ಎಂದರು.
ಡಾ. ಮಹೇಶ್ ಕುಮಾರ್ ಮುಂದುವರಿದು, “ಆರೋಗ್ಯ ತಪಾಸಣೆಯನ್ನು ಸಮಯಕ್ಕೆ ಮಾಡಿಕೊಂಡರೆ ಯಾವುದೇ ರೋಗವನ್ನು ತಡೆಗಟ್ಟಬಹುದು. ರಕ್ತದೊತ್ತಡ, ಮಧುಮೇಹ ಮುಂತಾದ ಕಾಯಿಲೆಗಳನ್ನು ನಿರ್ಲಕ್ಷಿಸಬಾರದು. ಆರೋಗ್ಯವೇ ನಮ್ಮ ಕುಟುಂಬದ ಬಲ,” ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಾ. ಸಂತೋಷ್ (ಆರ್.ಸಿ.ಎಚ್., ಚಿಕ್ಕಬಳ್ಳಾಪುರ), ಸೇವಾಮೊಬ್ ಉಪಾಧ್ಯಕ್ಷ ಡಾ. ಬಿ.ಸಿ. ಪ್ರವೀಣ್ ಕುಮಾರ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಎಸ್. ದೇವರಾಜ್, ಗ್ರಾಮಸ್ಥ ನಾಗರಾಜ್ ಹಾಗೂ ಆಶಾ ಕಾರ್ಯಕರ್ತೆಯರು ಹಾಜರಿದ್ದರು.
For Daily Updates WhatsApp ‘HI’ to 7406303366









