
Sidlaghatta : ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಎಚ್.ಕ್ರಾಸ್ ಸಮೀಪ ಚಾಕು ತೋರಿಸಿ ಕಾರ್ಮಿಕರಿಂದ ಮೊಬೈಲ್‌ಗಳನ್ನು ದೋಚಿದ ಇಬ್ಬರು ಆರೋಪಿಗಳ ವಾಹನವು ಪರಾರಿಯಾಗುವ ಯತ್ನದಲ್ಲಿ ಅಪಘಾತಕ್ಕೀಡಾಗಿದೆ. ಪರಿಣಾಮವಾಗಿ ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನೊಬ್ಬ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ಘಟನೆ ವಿವರ
ಶಿಡ್ಲಘಟ್ಟ ತಾಲ್ಲೂಕು ಎಚ್.ಕ್ರಾಸ್ ಮಾರ್ಗದ ಹಾರಡಿ ಬಳಿ ಟೈಲ್ಸ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಉತ್ತರ ಪ್ರದೇಶ ಮೂಲದ ನಾಲ್ವರು ಕೂಲಿ ಕಾರ್ಮಿಕರು ರಾತ್ರಿ ವೇಳೆ ತಮ್ಮ ಊರಿಗೆ ತೆರಳಲು ಬಸ್‌ಗಾಗಿ ನಡೆದುಕೊಂಡು ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಕಾರಿನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಕಾರ್ಮಿಕರಿಗೆ ಚಾಕು ತೋರಿಸಿ ಬೆದರಿಸಿ ಅವರ ಮೊಬೈಲ್‌ಗಳನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ.
ಅದೇ ಸಮಯಕ್ಕೆ ರಾತ್ರಿ ಗಸ್ತು ಮುಗಿಸಿ ಠಾಣೆಗೆ ಹಿಂದಿರುಗುತ್ತಿದ್ದ ಶಿಡ್ಲಘಟ್ಟ ಗ್ರಾಮಾಂತರ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಅವರ ಜೀಪನ್ನು ತಡೆದ ಕಾರ್ಮಿಕರು ನಡೆದ ಘಟನೆಯನ್ನು ವಿವರಿಸಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ಕಳುವಾದ ಮೊಬೈಲ್‌ಗಳ ಟವರ್ ಲೊಕೇಷನ್ ಮಾಹಿತಿ ಆಧರಿಸಿ ಆರೋಪಿಗಳ ವಾಹನವನ್ನು ಹಿಂಬಾಲಿಸಿದ್ದಾರೆ.
ದರೋಡೆ ಮಾಡಿ ಪರಾರಿಯಾಗುವ ಭರದಲ್ಲಿ ಆರೋಪಿಗಳಿದ್ದ ಕಾರು ಶಿಡ್ಲಘಟ್ಟ-ಜಂಗಮಕೋಟೆ ಮಾರ್ಗದ ಬೋದಗೂರು-ಮಳಮಾಚನಹಳ್ಳಿ ಮಧ್ಯೆ ನಿಯಂತ್ರಣ ಕಳೆದುಕೊಂಡು ಉರುಳಿ ಬಿದ್ದಿದೆ. ಈ ಅಪಘಾತದಲ್ಲಿ ಕಾರಿನಲ್ಲಿದ್ದ 25 ವರ್ಷದ ಸಿದ್ದು ಅಲಿಯಾಸ್ ಸಿದ್ದೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಆರೋಪಿಗಳ ಹಿನ್ನೆಲೆ:
ಮೃತ ಸಿದ್ದೇಶ್ ಆಂಧ್ರದ ಚಿತ್ತೂರಿನವನಾಗಿದ್ದು, ಲಾರಿ ಚಾಲಕನಾಗಿದ್ದನು. ಬಂಧಿತ ಮತ್ತೊಬ್ಬ ಆರೋಪಿ ಕನ್ನಮಂಗಲ ವಾಸಿ ವೈಶಾಖ್ ಸಹ ಲಾರಿ ಚಾಲಕನಾಗಿದ್ದು, ಇಬ್ಬರೂ ಪರಿಚಿತರಾಗಿದ್ದರು. ಇಬ್ಬರೂ ಲಾರಿ ಚಾಲಕ ಕೆಲಸದ ಜೊತೆಗೆ ದರೋಡೆ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಕೃತ್ಯ ಎಸಗುವ ವೇಳೆ ಇಬ್ಬರೂ ಮದ್ಯ ಸೇವಿಸಿರುವುದು ತನಿಖೆಯಲ್ಲಿ ದೃಢಪಟ್ಟಿದೆ.
ಶಿಡ್ಲಘಟ್ಟ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಸ್ಪಿ ಕುಶಲ್ ಚೌಕ್ಸೆ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣದ ಎಲ್ಲ ಆಯಾಮಗಳಲ್ಲಿಯೂ ತನಿಖೆ ಮುಂದುವರೆಸುವಂತೆ ಸೂಚಿಸಿದ್ದಾರೆ.