
Sidlaghatta : ಶಿಡ್ಲಘಟ್ಟ : ನಗರಸಭೆ ಸಾಮಾನ್ಯ ಸಭೆಯನ್ನು ಜುಲೈ 18 ರಂದು ಕರೆದಿದ್ದು ಯಾವುದೆ ಸಕಾರಣ ಇಲ್ಲದೆ ಏಕಾ ಏಕಿ ಸಭೆಯನ್ನು ರದ್ದು ಮಾಡಿದ್ದು ಏಕೆ ? ಕಾಲ ಕಾಲಕ್ಕೆ ಸಾಮಾನ್ಯ ಸಭೆಯನ್ನು ಕರೆಯದ ಕಾರಣ ಅಭಿವೃದ್ದಿ ಕಾರ್ಯಗಳು ನೆನೆಗುದಿಗೆ ಬಿದ್ದಿವೆ ಎಂದು ನಗರಸಭೆಯ ಸದಸ್ಯ ಅಫ್ಸರ್ ಪಾಷ ಅವರು ದೂರಿದರು.
ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ನಗರಸಭೆ ಅಧ್ಯಕ್ಷ ಎಂ.ವಿ.ವೆಂಕಟಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಜುಲೈ 18 ರ ಶುಕ್ರವಾರ ಸಾಮಾನ್ಯ ಸಭೆ ಕರೆದಿದ್ದು ನಮ್ಮೆಲ್ಲರಿಗೂ ಸಭಾ ತಿಳುವಳಿಕೆ ನೊಟೀಸ್ ನೀಡಲಾಗಿತ್ತು. ಸಭೆಯಲ್ಲಿ ಸುಮಾರು 39 ಕ್ಕೂ ಹೆಚ್ಚು ವಿಷಯಗಳನ್ನು ಪ್ರಸ್ತಾಪಿಸಲು ಸಭಾ ತಿಳುವಳಿಕೆ ನೊಟೀಸ್‌ನಲ್ಲಿ ತಿಳಿಸಿತ್ತು.
ಆದರೆ ಏಕಾ ಏಕಿ 18 ರಂದು ನಡೆಯಬೇಕಿದ್ದ ಸಾಮಾನ್ಯ ಸಭೆಯನ್ನು ರದ್ದು ಮಾಡಿ ಜುಲೈ 19 ರಂದು ವಿಶೇಷ ಸಾಮಾನ್ಯ ಸಭೆಯನ್ನು ಕರೆಯಲಾಗಿದೆ. ವಿಶೇಷ ಸಾಮಾನ್ಯ ಸಭೆಯಲ್ಲಿ ಕೇವಲ 3 ವಿಷಯಗಳ ಬಗ್ಗೆ ಚರ್ಚಿಸಲು ಮಾತ್ರವೇ ಅವಕಾಶ ಇದೆ. ಇದರಿಂದ ನಮ್ಮ ವಾರ್ಡುಗಳ ಸಮಸ್ಯೆಗಳ ಬಗ್ಗೆ ಚರ್ಚಿಸಲು ಅವಕಾಶವೇ ಇಲ್ಲವಾಗಿದೆ ಎಂದು ದೂರಿದರು.
ನಗರೋತ್ಥಾನ ಹಂತ-4 ರಲ್ಲಿ ನಗರದಲ್ಲಿ ಕೈಗೊಳ್ಳಲು ಉದ್ದೇಶಿಸಿದ್ದ ಕೆಲ ರಸ್ತೆ ಅಭಿವೃದ್ದಿ ಕಾಮಗಾರಿಗಳನ್ನೆ ಎಸ್.ಎಫ್.ಸಿ ಮುಕ್ತ ನಿಧಿ ಮೂಲ ಅನುದಾನದಲ್ಲೂ ಕೈಗೊಳ್ಳಲು ಕ್ರಿಯಾ ಯೋಜನೆ ತಯಾರಿಸಿ ಲೋಪ ಎಸಗಲಾಗಿದೆ. ಅವ್ಯವಹಾರಕ್ಕೂ ಇದು ದಾರಿ ಮಾಡಿಕೊಡಲಿದೆ ಎಂದು ಅನುಮಾನ ವ್ಯಕ್ತಪಡಿಸಿದರು.
ಇವೆಲ್ಲವನ್ನೂ ನಾವು ಸಾಮಾನ್ಯ ಸಭೆಯಲ್ಲಿ ಪ್ರಶ್ನಿಸಲು ಪೂರಕ ದಾಖಲೆಗಳೊಂದಿಗೆ ಸಿದ್ದರಾಗಿದ್ದೆವು. ತಮ್ಮ ಲೋಪಗಳನ್ನು ಮುಚ್ಚಿಕೊಳ್ಳಲು ಏಕಾ ಏಕಿ ಸಾಮಾನ್ಯ ಸಭೆಯನ್ನು ರದ್ದು ಮಾಡಲಾಗಿದೆ ಎಂದು ಅನುಮಾನ ವ್ಯಕ್ತಪಡಿಸಿದರು.
ನಗರೋತ್ಥಾನ ಹಂತ-4 ರ ಅನುದಾನದಲ್ಲಿ ಕ್ರಿಯಾ ಯೋಜನೆ ತಯಾರಿಸಿ ಅನುಮೋದನೆ ಪಡೆದು ಟೆಂಡರ್ ಕೂಡ ಆಗಿದೆ. ಕಾಮಗಾರಿ ಇನ್ನೂ ಆರಂಭ ಆಗಿಲ್ಲ. ಈ ನಡುವೆ ಅದೇ ಒಂದೆರಡು ಕೆಲಸದ ಕಾಮಗಾರಿಗಳನ್ನು ಎಸ್.ಎಫ್.ಸಿ ಮುಕ್ತ ನಿಧಿ ಮೂಲ ಅನುಧಾನದಲ್ಲೂ ಕೈಗೊಳ್ಳಲು ಕ್ರಿಯ ಯೋಜನೆ ತಯಾರಿಸಿ ಅನುಮೋದನೆ ಪಡೆದುಕೊಳ್ಳಲಾಗಿದೆ.
ನಗರೋತ್ಥಾನ ಯೋಜನೆಯಡಿ ಕಾಮಗಾರಿಯನ್ನು ನಡೆಸಿ ಎಸ್.ಎಫ್.ಸಿ ಮುಕ್ತ ನಿಧಿ ಅನುದಾನವನ್ನು ಬೇರೊಂದು ಕಾಮಗಾರಿಗೆ ಬಳಸಬಹುದಲ್ಲವೇ ಎಂಬುದಷ್ಟೆ ನಮ್ಮ ವಾದ.
ಕಾಲ ಕಾಲಕ್ಕೆ ಸಾಮಾನ್ಯ ಸಭೆ ಕರೆಯದಿರುವುದು ಸೇರಿ ಈ ಎಲ್ಲ ಲೋಪಗಳನ್ನು ಮುಚ್ಚಿ ಹಾಕಲು ಜುಲೈ 18 ರಂದು ನಿಗದಿಯಾಗಿದ್ದ ಸಾಮಾನ್ಯ ಸಭೆಯನ್ನು ರದ್ದು ಮಾಡಿ ವಿಶೇಷ ಸಾಮಾನ್ಯ ಸಭೆಯನ್ನು ಕರೆದಿದ್ದಾರೆ. ಅಲ್ಲಿ ಈ ಎಲ್ಲ ವಿಷಯಗಳ ಬಗ್ಗೆ ಚರ್ಚಿಸಲು ಅವಕಾಶ ನೀಡುವುದಿಲ್ಲ. ಆದರೂ ನಾವು ನಗರಸಭೆ ಅಧ್ಯಕ್ಷರ ಲೋಪಗಳನ್ನು ಎತ್ತಿ ಚರ್ಚಿಸಿ ನಾಗರೀಕರ ಮುಂದಿಡುತ್ತೇವೆ ಎಂದರು. ನಗರಸಭೆ ಸದಸ್ಯ ಎಂ.ಶ್ರೀನಿವಾಸ್, ಮುಖಂಡರಾದ ಸಮೀವುಲ್ಲಾ, ಬಾಬಾ ಪ್ರಕೃದ್ದೀನ್, ಅನ್ಸರ್, ಅಫ್ಸಲ್ ಪಾಷಾ ಹಾಜರಿದ್ದರು.