
Sugaturu, sidlaghatta : ಪುರಾತನ ದೇವಾಲಯಗಳಿಗೆ ಪ್ರಸಿದ್ಧಿಯಾಗಿರುವ ತಾಲ್ಲೂಕಿನ ಸುಗಟೂರು ಗ್ರಾಮದಲ್ಲಿ ಆಷಾಢ ಮಾಸದ ಕೊನೆಯ ಶುಕ್ರವಾರದಂದು ಗ್ರಾಮದೇವತೆ ಸತ್ಯಮ್ಮದೇವಿಗೆ ಗ್ರಾಮಸ್ಥರೆಲ್ಲರೂ ಸೇರಿ ಪೂಜೆ ಸಲ್ಲಿಸಿದರು.
ದೇವಾಲಯದ ಕಟ್ಟಡವಿಲ್ಲದೆ, ಬಯಲಿನಲ್ಲಿರುವ ಸತ್ಯಮ್ಮದೇವಿಗೆ, ಪ್ರತಿ ವರ್ಷ ಆಷಾಢ ಮಾಸದಲ್ಲಿ, ಮಂಗಳವಾರ ಮತ್ತು ಶುಕ್ರವಾರದ ದಿನಗಳಲ್ಲಿ, ಗ್ರಾಮದ ಮಹಿಳೆಯರು, ಹೆಣ್ಣು ಮಕ್ಕಳು, ಒಂದೊಂದು ಬಿಂದಿಗೆ ನೀರು ತಂದು, ಮಜ್ಜನ ಮಾಡಿಸಿ, ಪೂಜೆ ಸಲ್ಲಿಸಿ ಹೋಗುವುದು ಸುಮಾರು ವರ್ಷಗಳಿಂದಲೂ ನಡೆದುಕೊಂಡು ಬಂದಿರುವ ಪದ್ಧತಿಯಾಗಿದೆ. ಹಿಂದಿನ ನಡೆದುಕೊಂಡು ಬಂದಿರುವ ಪದ್ಧತಿಯಂತೆ ಈ ವರ್ಷವೂ, ಗ್ರಾಮದ ಮಹಿಳೆಯರು, ಹೆಣ್ಣುಮಕ್ಕಳು ಮಂಗಳವಾರ ಮತ್ತು ಶುಕ್ರವಾರದ ದಿನಗಳಲ್ಲಿ ಮಜ್ಜನ ಮಾಡಿಸಿ, ಪೂಜೆ ಸಲ್ಲಿಸಿದ್ದಾರೆ. ಆಷಾಢದಲ್ಲಿ ತಿಂಗಳಲ್ಲಿ ಬರುವ ಎಲ್ಲಾ ಮಂಗಳವಾರ ಮತ್ತು ಶುಕ್ರವಾರ ನೀರು ಹಾಕಿ ಪೂಜೆ ಸಲ್ಲಿಸುವುದಾಗಿ ಹಲವರು ಹರಕೆ ಕಟ್ಟಿಕೊಳ್ಳುತ್ತಾರೆ. ಹರಕೆಗಳು ಈಡೇರಿವೆ ಎಂದು ಗ್ರಾಮದ ಹಿರಿಯ ಮಹಿಳೆ ನಾರಾಯಣಮ್ಮ ಹೇಳಿದರು.
ಸತ್ಯಮ್ಮ ದೇವಿಗೆ ಗ್ರಾಮಸ್ಥರೆಲ್ಲರೂ ಸೇರಿ, ದೇವಾಲಯವನ್ನು ನಿರ್ಮಾಣ ಮಾಡಬೇಕೆಂದು ಪ್ರಯತ್ನಿಸಿದ್ದಾರಾದರೂ ದೇವಾಲಯಕ್ಕಾಗಿ ನಿರ್ಮಾಣ ಮಾಡುವ ಕಟ್ಟಡ ನಿಲ್ಲದ ಕಾರಣ, ಇದುವರೆಗೂ ದೇವಾಲಯ ನಿರ್ಮಾಣ ಮಾಡಿಲ್ಲ. ದೇವಾಲಯದ ಬಳಿಯಲ್ಲಿ ಬನ್ನಿಮರವಿದ್ದು, ಇದು ಸಹಾ ಹಳೆಯದಾಗಿದ್ದು, ಕೊಂಬೆಗಳು ಮುರಿದು ಬಿದ್ದರೂ ಪುನಃ ಹೊಸದಾಗಿ ಕೊಂಬೆಗಳು ಬರುತ್ತಿವೆ. ಆದರೆ, ಬಡವು ಹಾಗೆ ಇದೆ ಎಂದು ಗ್ರಾಮಸ್ಥರು ಹೇಳುತ್ತಾರೆ.