ಕಂದಾಯ ಅಧಿಕಾರಿ, ಸಿಬ್ಬಂದಿ ನಿಮ್ಮ ಮನೆ ಬಾಗಿಲಿಗೆ ಬರಲಿದ್ದು ಮೃತಪಟ್ಟ ನಿಮ್ಮ ಹಿರಿಯರ ಹೆಸರಿನಲ್ಲೇ ಇರುವ ಆಸ್ತಿಗಳ ದಾಖಲೆಗಳನ್ನು ಕುಟುಂಬದ ವಾರಸುದಾರರ ಹೆಸರಿಗೆ ಮಾಡಿಸಿಕೊಂಡು ನಿಮ್ಮ ಆಸ್ತಿಯನ್ನು ಸುಭದ್ರವಾಗಿಸಿಕೊಳ್ಳಿ, ದಾಖಲೆಗಳನ್ನು ಜೋಪಾನ ಮಾಡಿಕೊಳ್ಳಿ ಎಂದು ತಹಸೀಲ್ದಾರ್ ಗಗನ ಸಿಂಧು ಅವರು ಗ್ರಾಮಸ್ಥರಲ್ಲಿ ಮನವಿ ಮಾಡಿದರು.
ತಾಲ್ಲೂಕಿನ ದೇವರಮಳ್ಳೂರು ಗ್ರಾಮ ಪಂಚಾಯಿತಿಯ ಇದ್ಲೂಡು ಗ್ರಾಮದಲ್ಲಿ ಕಂದಾಯ ಇಲಾಖೆಯಿಂದ ತಾಲ್ಲೂಕಿನಲ್ಲಿ ನಡೆಸುತ್ತಿರುವ ಫವತಿ ಆಂದೋಲನ ಕುರಿತಾಗಿ ಗ್ರಾಮಸ್ಥರಲ್ಲಿ ಅರಿವು ಮೂಡಿಸಿ ಮಾತನಾಡಿದರು.
ತಾಲ್ಲೂಕಿನಲ್ಲಿ ಅನೇಕ ಕುಟುಂಬಗಳಿಗೆ ಸಂಬಂದಿಸಿದ ಆಸ್ತಿಗಳ ದಾಖಲೆಗಳು ಮೃತಪಟ್ಟ ಹಿರಿಯರ ಹೆಸರಿನಲ್ಲೇ ಇವೆ. ಮೃತಪಟ್ಟು ವರ್ಷಗಳೆ ಕಳೆದಿದ್ದರೂ ಆ ಆಸ್ತಿಯ ದಾಖಲೆಗಳನ್ನು ಅವರ ಮಕ್ಕಳು ಮೊಮ್ಮಕ್ಕಳ ಹೆಸರಿಗೆ ಬದಲಾವಣೆ ಆಗಿರುವುದಿಲ್ಲ ಎಂದರು.
ಇದರಿಂದ ಸದರಿ ಆಸ್ತಿಯ ವಿಭಾಗ ಮಾಡಿಕೊಳ್ಳುವುದು, ಪಾಲುದಾರಿಕೆ ಮಾಡಿಕೊಳ್ಳಲು, ಮಾರಾಟ ಮಾಡುವುದು, ಬ್ಯಾಂಕ್‌ನಲ್ಲಿ ಅಡ ಇಟ್ಟು ಸಾಲ ಪಡೆಯುವುದು, ಅಸ್ತಿ ದಾಖಲೆಗಳನ್ನು ಭದ್ರಪಡಿಸಿಕೊಳ್ಳುವ ಕೆಲಸ ಆಗುತ್ತಿಲ್ಲ. ಇದರಿಂದ ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸುವಂತಾಗಿದೆ ಎಂದು ಹೇಳಿದರು.
ಇದು ಒಂದೇ ಕುಟುಂಬದ ಅಣ್ಣ ತಮ್ಮಂದಿರು, ಅಕ್ಕ ತಂಗಿಯರ ನಡುವೆ ಕಲಹಗಳಿಗೂ ಕಾರಣವಾಗುತ್ತಿದೆ. ಇದೆಲ್ಲವನ್ನೂ ಗಮನಿಸಿ ಸರಕಾರವು ಫವತಿ ಖಾತೆ ಆಂದೋಲನವನ್ನು ಕಂದಾಯ ಇಲಾಖೆ ಮೂಲಕ ಹಮ್ಮಿಕೊಂಡಿದ್ದು ಕಂದಾಯ ಇಲಾಖೆ ಸಿಬ್ಬಂದಿ ನಿಮ್ಮ ಮನೆ ಬಾಗಿಲಿಗೆ ಬರಲಿದ್ದಾರೆ.
ಅಗತ್ಯ ದಾಖಲೆಗಳನ್ನು ಹಾಜರುಪಡಿಸಿ ಕುಟುಂಬದ ಎಲ್ಲರೂ ಒಮ್ಮತದಿಂದ ನಿರ್ಧಾರ ಮಾಡಿ ಆಸ್ತಿಯ ಫವತಿ ಖಾತೆ ಮಾಡಿಸಿಕೊಳ್ಳಿ. ನಿಮ್ಮ ಆಸ್ತಿಯನ್ನು ಹಾಗೂ ಆಸ್ತಿಯ ದಾಖಲೆಗಳನ್ನು ಭದ್ರಪಡಿಸಿಕೊಳ್ಳಿ. ಇದರಿಂದ ನೀವು ಫವತಿ ಖಾತೆಗಾಗಿ ತಾಲ್ಲೂಕು ಕಚೇರಿ, ನಾಡ ಕಚೇರಿಗೆ ವಿನಾಕಾರಣ ಅಲೆದಾಡುವ ತಾಪತ್ರಯ ತಪ್ಪಲಿದೆ. ಹಣ ಸಮಯ ಉಳಿತಾಯ ಆಗಲಿದೆ ಎಂದರು.
ಗ್ರಾಮದಲ್ಲಿ ಸುತ್ತಾಡಿ ಫವತಿ ಖಾತೆ ಬಗ್ಗೆ ಕಂದಾಯ ಇಲಾಖೆ ಸಿಬ್ಬಂದಿ ಯಾರಾದರೂ ನಿಮಗೆ ಮಾಹಿತಿ ನೀಡಿದ್ದಾರಾ? ಫವತಿ ಖಾತೆ ಎಂದರೆ ಏನು? ಎಂದು ಗ್ರಾಮದ ಹಲವರನ್ನು ಕೇಳಿ ತಿಳಿದುಕೊಂಡರು. ಫವತಿ ಖಾತೆ ಆಂದೋಲನದ ಬಗ್ಗೆ ಕಂದಾಯ ಇಲಾಖೆ ಸಿಬ್ಬಂದಿ ನಮಗೆ ತಿಳಿಸಿದ್ದರು ಎಂದು ಗ್ರಾಮಸ್ಥರು ತಿಳಿಸಿದರು.
ಫವತಿ ಖಾತೆ ಆಂದೋಲನಕ್ಕೆ ಸಂಬಂಸಿದ ಏನಾದರೂ ಅನುಮಾನ ಸಮಸ್ಯೆಗಳು ಇದ್ದಲ್ಲಿ ಹೇಳಿ ಎಂದು ಕೆಲ ಕಾಲ ಗ್ರಾಮಸ್ಥರೊಂದಿಗೆ ಚರ್ಚಿಸಿದರು.
ಫವತಿ ಖಾತೆ ಆಂದೋಲನದ ಬಗ್ಗೆ ಆಟೋದಲ್ಲಿ ಧ್ವನಿ ವರ್ಧಕದ ಮೂಲಕ ಪ್ರಚಾರ ಮಾಡಿ ಗ್ರಾಮಸ್ಥರಲ್ಲಿ ಅರಿವು ಮೂಡಿಸಲಾಯಿತು.
ಫವತಿ ಖಾತೆ ಆಂದೋಲನ ಅರಿವು ಮೂಡಿಸುವುದಕ್ಕಾಗಿ ಇದ್ಲೂಡು ಗ್ರಾಮಕ್ಕೆ ತೆರಳಿದ್ದ ತಹಸೀಲ್ಧಾರ್ ಗಗನ ಸಿಂಧು ಅವರು ಸರಕಾರಿ ಶಾಲೆಗೆ ದಿಢೀರ್ ಭೇಟಿ ನೀಡಿ ಮಕ್ಕಳೊಂದಿಗೆ ಕೆಲ ಕಾಲ ಚರ್ಚಿಸಿದರು. ಮದ್ಯಾಹ್ನದ ಬಿಸಿಯೂಟ, ಆಟದ ಮೈದಾನ, ಪಾಠ ಪ್ರವಚನಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ಮಕ್ಕಳಿಗೆ ಆಟದ ಮೈದಾನ ಹಾಗೂ ಗ್ರಾಮದ ದೇವಾಲಯಕ್ಕೆ ಸೂಕ್ತ ಜಾಗ ಒದಗಿಸಿಕೊಡಲು ಗ್ರಾಮಸ್ಥರು ತಹಸೀಲ್ದಾರ್ ಬಳಿ ಮನವಿ ಮಾಡಿಕೊಂಡರು.
ಉಪ ತಹಸೀಲ್ದಾರ್ ಚೇತನ್, ಕಸಬಾ ಕಂದಾಯ ಅಧಿಕಾರಿ ವೇಣುಗೋಪಾಲ್, ಗ್ರಾಮಸ್ಥರು ಹಾಜರಿದ್ದರು.







