Sidlaghatta : ಸಚಿವ ಜಮೀರ್ ಅಹಮದ್ ಖಾನ್ ಪುತ್ರ ಝೈದ್ ಖಾನ್ ನಟನೆಯ “ಕಲ್ಟ್” ಸಿನಿಮಾದ ಪ್ರಚಾರದ ಫ್ಲೆಕ್ಸ್ ತೆರವುಗೊಳಿಸಿದ ವಿಚಾರವಾಗಿ, ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅವರು ಪೌರಾಯುಕ್ತೆ ಜಿ. ಅಮೃತಾ ಅವರಿಗೆ ಅಶ್ಲೀಲವಾಗಿ ನಿಂದಿಸಿ, ಪ್ರಾಣ ಬೆದರಿಕೆ ಹಾಕಿರುವ ಘಟನೆ ಈಗ ತೀವ್ರ ಸ್ವರೂಪ ಪಡೆದುಕೊಂಡಿದೆ.
ಘಟನೆಯ ವಿವರ: ಮಂಗಳವಾರ ಶಿಡ್ಲಘಟ್ಟದ ನೆಹರೂ ಮೈದಾನದಲ್ಲಿ “ಕಲ್ಟ್” ಸಿನಿಮಾದ ಪ್ರಚಾರ ಸಭೆ ನಡೆದಿತ್ತು. ಈ ವೇಳೆ ಕೋಟೆ ವೃತ್ತದ ರಸ್ತೆಗೆ ಅಡ್ಡಲಾಗಿ ಅಕ್ರಮವಾಗಿ ಅಳವಡಿಸಲಾಗಿದ್ದ ಬ್ಯಾನರ್‌ಗಳಿಂದ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂಬ ಸಾರ್ವಜನಿಕರ ದೂರಿನ ಮೇರೆಗೆ ನಗರಸಭೆ ಸಿಬ್ಬಂದಿ ಅದನ್ನು ತೆರವುಗೊಳಿಸಿದ್ದರು. ಇದರಿಂದ ಕೆರಳಿದ ಕೆಪಿಸಿಸಿ ಸಂಯೋಜಕ ರಾಜೀವ್ ಗೌಡ, ಪೌರಾಯುಕ್ತೆಗೆ ಫೋನ್ ಮಾಡಿ ಬೆದರಿಕೆ ಹಾಕಿದ್ದಾರೆ.
ವೈರಲ್ ಆಡಿಯೋದಲ್ಲಿ ಏನಿದೆ? ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಆಡಿಯೋದಲ್ಲಿ ರಾಜೀವ್ ಗೌಡ ಅವರು, “ಬ್ಯಾನರ್ ಬಿಚ್ಚಿಸಿದರೆ ಬೆಂಕಿ ಹಚ್ಚಿಸುವೆ, ಚಪ್ಪಲಿಯಲ್ಲಿ ಹೊಡೆಸುವೆ” ಎಂದು ಅಶ್ಲೀಲವಾಗಿ ನಿಂದಿಸಿದ್ದಾರೆ. ಅಲ್ಲದೆ, ಸ್ಥಳೀಯ ಶಾಸಕ ಬಿ.ಎನ್. ರವಿಕುಮಾರ್ ಅವರ ವಿರುದ್ಧವೂ ಅವಾಚ್ಯ ಶಬ್ದಗಳನ್ನು ಬಳಸಿದ್ದಾರೆ. ಇದು ಅಧಿಕಾರಿಗಳ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಬೀದಿಗಿಳಿದ ಪೌರಕಾರ್ಮಿಕರು: ಘಟನೆಯನ್ನು ಖಂಡಿಸಿ ನಗರಸಭೆ ಸಿಬ್ಬಂದಿ ಮತ್ತು ಪೌರಕಾರ್ಮಿಕರು ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು. “ರಾಜೀವ್ ಗೌಡಾಕೋ ಹಠಾವೋ ಶಿಡ್ಲಘಟ್ಟಕೋ ಬಚಾವೋ” ಎಂದು ಘೋಷಣೆ ಕೂಗಿದ ಪ್ರತಿಭಟನಾಕಾರರು, ರಾಜೀವ್ ಗೌಡ ಅವರು ಸ್ಥಳಕ್ಕೆ ಬಂದು ಕ್ಷಮೆ ಕೇಳುವವರೆಗೂ ಕೆಲಸಕ್ಕೆ ಹಾಜರಾಗುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಪೊಲೀಸ್ ದೂರು ದಾಖಲು: ಈ ಸಂಬಂಧ ಪೌರಾಯುಕ್ತೆ ಅಮೃತಾ, ಜೆಡಿಎಸ್ ಮುಖಂಡರು ಮತ್ತು ಬಿಜೆಪಿ ಜಿಲ್ಲಾಧ್ಯಕ್ಷರು ಪ್ರತ್ಯೇಕವಾಗಿ ಪೊಲೀಸ್ ದೂರು ನೀಡಿದ್ದಾರೆ. ಶಾಸಕ ಬಿ.ಎನ್. ರವಿಕುಮಾರ್ ಪ್ರತಿಕ್ರಿಯಿಸಿ, “ಒಬ್ಬ ಮಹಿಳಾ ಅಧಿಕಾರಿಯ ಬಗ್ಗೆ ಗೂಂಡಾಗಿರಿ ಮಾಡಿರುವುದು ಕಾಂಗ್ರೆಸ್ ಪಕ್ಷಕ್ಕೆ ನಾಚಿಕೆಗೇಡು. ಈ ಬಗ್ಗೆ ಹೆಚ್.ಡಿ. ಕುಮಾರಸ್ವಾಮಿ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಗಳೊಂದಿಗೆ ಮಾತನಾಡಿದ್ದಾರೆ,” ಎಂದು ತಿಳಿಸಿದ್ದಾರೆ.








