Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಜಯಂತಿಗ್ರಾಮದಲ್ಲಿ ಶನಿವಾರ ನಡೆದ ಗ್ರಾಮೀಣ ಕ್ರೀಡೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೆಣ್ಣುಮಕ್ಕಳು ಭಾಗವಹಿಸಿ ಅಧಿಕ ಬಹುಮಾನಗಳನ್ನು ಗೆಲ್ಲುವ ಮೂಲಕ ಮೇಲುಗೈ ಸಾಧಿಸಿದ್ದಾರೆ.
ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಯಂತಿಗ್ರಾಮದ ಭಗತ್ ಸಿಂಗ್ ಅಥ್ಲೆಟಿಕ್ ಅಸೋಸಿಯೇಷನ್ ಹಾಗು ಕರ್ನಾಟಕ ರಾಜ್ಯ ಯುವ ಸಂಘ ಸಂಸ್ಥೆಗಳ ಒಕ್ಕೂಟದ ವತಿಯಿಂದ ತಾಲ್ಲೂಕಿನ ಜಯಂತಿಗ್ರಾಮದಲ್ಲಿ ಆಯೋಜಿಸಿದ್ದ 2024-25 ನೇ ಸಾಲಿನ ಗ್ರಾಮೀಣ ಕ್ರೀಡೋತ್ಸವದಲ್ಲಿ ಅಧಿಕ ಸಂಖ್ಯೆಯಲ್ಲಿ ಹೆಣ್ಣುಮಕ್ಕಳು ಪಾಲ್ಗೊಂಡಿದ್ದರು.
ಗ್ರಾಮೀಣ ಕ್ರೀಡೋತ್ಸವದಲ್ಲಿ ಭಾಗವಹಿಸಿದ್ದ ಶಿಕ್ಷಕ ಬಿ.ಎಂ. ರಾಧಾಕೃಷ್ಣ ಮಾತನಾಡಿ, ಯಾವುದೇ ವ್ಯಕ್ತಿಯ ಸರ್ವತೋಮುಖ ಏಳಿಗೆಗೆ ಕ್ರೀಡೆಯು ಮುಖ್ಯವಾಗುತ್ತದೆ, ದೇಹವನ್ನು ಸದೃಡವಾಗಿ ಕಾಪಾಡಿಕೊಳ್ಳಲು ಕ್ರೀಡೆ ಅಗತ್ಯ. ಮುಂದಿನ ದಿನಗಳಲ್ಲಿ ತಾಲ್ಲೂಕಿನಲ್ಲಿ ಒಂದಕ್ಕಿಂತ ಹೆಚ್ಚಿನ ಕ್ರೀಡೋತ್ಸವಗಳು ನಡೆಯುವಂತಾಗಲಿ ಎಂದು ಹೇಳಿದರು.
ವಿಜೇತ ತಂಡಗಳಿಗೆ ನಗದು ಬಹುಮಾನ ವಿತರಿಸಿ ಮಾತನಾಡಿದ ದೈಹಿಕ ಶಿಕ್ಷಕಿ ಸಿ.ಕೆ. ಮಂಜುಳಾ, ಕ್ರೀಡೆ ವ್ಯಕ್ತಿಯನ್ನು ಮಾನಸಿಕವಾಗಿ ಹಾಗು ದೈಹಿಕವಾಗಿ ಆರೋಗ್ಯವಾಗಿಡುತ್ತದೆ. ಕ್ರೀಡೆಗೆ ವಯೋಮಾನದ ಅಂತರವಿಲ್ಲ. ಪ್ರತಿಯೊಬ್ಬರೂ ಯಾವುದಾದರೂ ಒಂದು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಆಯೋಜಕರಾದ ರಾಷ್ಟ್ರೀಯ ಕ್ರೀಡಾಪಟು ಜಯಂತಿಗ್ರಾಮ ನಾರಾಯಣಸ್ವಾಮಿ, ಯುವ ಮುಖಂಡರಾದ ರವೀಂದ್ರ, ಗಂಗಾಧರ, ಶಿಕ್ಷಕರಾದ ಗಾಯಿತ್ರಿ, ಮೆಹಬೂಬ ಪಾಷ ಹಾಜರಿದ್ದರು.