Sidlaghatta : ಶೋಷಿತ ವರ್ಗದವರನ್ನು ಶೈಕ್ಷಣಿಕವಾಗಿ ಮೇಲೆ ತರಲು ಹೋರಾಡಿದವರಲ್ಲಿ ಸವಿತಾ ಮಹರ್ಷಿಗಳು ಒಬ್ಬರಾಗಿದ್ದು, ಇಂತಹ ವ್ಯಕ್ತಿಯನ್ನು ಪಡೆದ ಸಮಾಜವು ಕೀಳರಿಮೆ ತೊರೆದು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಮುಂದಾಗಬೇಕು ಇದರಿಂದ ಸಮಾಜದಲ್ಲಿ ಮುನ್ನಡೆಯಲು ಸಾಧ್ಯವಾಗುತ್ತದೆ ಎಂದು ತಹಶೀಲ್ದಾರ್ ಎನ್.ಗಗನಸಿಂಧೂ ತಿಳಿಸಿದರು.
ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಾಡಹಬ್ಬಗಳ ಆಚರಣಾ ಸಮಿತಿ ಹಾಗೂ ಸಮುದಾಯದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಶ್ರೀ ಸವಿತಾ ಮಹರ್ಷಿ ಜಯಂತಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸವಿತಾ ಎಂದರೆ ಬೆಳಕು, ಸವಿತಾ ಸಮಾಜದ ಮೂಲ ಪುರುಷರಾದ ಸವಿತಾ ಮಹರ್ಷಿಗಳು ಪರಶಿವನ ಬಲಗಣ್ಣಿನಿಂದ ಜನಿಸಿದವರಾಗಿದ್ದು ಸೂರ್ಯವಂಶದ ಕುಲದೈವರಾಗಿದ್ದಾರೆ. ಅಪಾರ ಜ್ಞಾನ ಹೊಂದಿದ್ದ ಇವರು ಸಾಮವೇದವನ್ನು ರಚಿಸಿದ್ದು ಸಂಗೀತದ ಪ್ರತೀಕವಾಗಿದ್ದಾರೆ.
ಸವಿತಾ ಮಹರ್ಷಿ ಸೇರಿದಂತೆ ಋಷಿ ಮಹರ್ಷಿಗಳು ಯಾವುದೇ ಸಮಾಜ, ಜನಾಂಗದಲ್ಲಿ ಹುಟ್ಟಿದರೂ ಧರ್ಮದ ದಾರಿ ತೋರಿಸಿದ್ದಾರೆ. ಅವರ ಸಂದೇಶಗಳ ಪಾಲನೆಯಿಂದ ನಮ್ಮ ಬದುಕು ಹಸನಾಗುತ್ತದೆ ಕಾಯಕವೇ ಕೈಲಾಸ ಎಂದು ಸವಿತಾ ಸಮಾಜದ ಜನ ಜೀವನ ನಡೆಸುತ್ತಾರೆ. ಸಮುದಾಯದ ಒಗ್ಗಟ್ಟಿನಿಂದ ಮಾತ್ರ ಸಮಾಜಕ್ಕೆ ಬಲ ಬರುತ್ತದೆ. ರಾಜಕೀಯವಾಗಿ ಶಕ್ತಿ ಸಿಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎ.ನರೇಂದ್ರಕುಮಾರ್, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಮಂಜುಳ, ತಾ.ಪಂ ನರೇಗಾ ಸಹಾಯಕ ನಿರ್ದೇಶಕ ಚಂದ್ರಪ್ಪ, ಸವಿತಾ ಸಮಾಜದ ತಾಲ್ಲೂಕು ಅಧ್ಯಕ್ಷ ನಾರಾಯಣಸ್ವಾಮಿ, ಸಮುದಾಯದ ಮುಖಂಡರಾದ ರಾಜಣ್ಣ, ಪ್ರತಾಪ್, ದೇವರಾಜ್, ಲೋಕೇಶ್, ಅರವಿಂದ್, ನಾರಾಯಣಸ್ವಾಮಿ ಹಾಜರಿದ್ದರು.








