Dibburahalli, Sidlaghatta : ನಾನಾ ಕಾರಣಗಳಿಂದ ಸಂಕಷ್ಟಕ್ಕೆ ಸಿಲುಕಿದ ತಾಲ್ಲೂಕಿನ ಅನೇಕ ರೈತರು ಬದುಕನ್ನು ಕಟ್ಟಿಕೊಳ್ಳಲು ಬೆಂಗಳೂರಿಗೆ ಹೋಗಿದ್ದಾರೆ. ಅಂತಹ ಎಲ್ಲ ರೈತರನ್ನು ಮತ್ತು ಅವರ ಮಕ್ಕಳನ್ನು ಮತ್ತೆ ಶಿಡ್ಲಘಟ್ಟಕ್ಕೆ ಕರೆತಂದು ಇಲ್ಲೇ ದುಡಿದು ಬದುಕನ್ನು ಕಟ್ಟಿಕೊಳ್ಳುವಂತ ವಾತಾವರಣವನ್ನು ನಿರ್ಮಿಸುತ್ತೇನೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ತಿಳಿಸಿದರು.
ತಾಲ್ಲೂಕಿನ ದಿಬ್ಬೂರಹಳ್ಳಿ ಗ್ರಾಮದಲ್ಲಿ ಶನಿವಾರ ನಡೆದ ಬಿಜೆಪಿ ಪಕ್ಷದ ಸಾದಲಿ ಮತ್ತು ಬಶೆಟ್ಟಹಳ್ಳಿ ಹೋಬಳಿಯ ಸಂಘಟನಾ ಪರ್ವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇತ್ತೀಚಿನ ವರ್ಷಗಳಲ್ಲಿ ಕೃಷಿ ಲಾಭದಾಯಕವಲ್ಲ ಎನ್ನುವ ಅಭಿಪ್ರಾಯ ಮೂಡಿದ್ದು ಅನೇಕರು ಊರನ್ನು ತೊರೆದು ಬೆಂಗಳೂರಲ್ಲಿ ತಮ್ಮ ಮಕ್ಕಳ ಜತೆ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಬದುಕನ್ನು ಕಟ್ಟಿಕೊಳ್ಳುತ್ತಿದ್ದು ಅವರೆಲ್ಲರೂ ಮತ್ತೆ ಹುಟ್ಟಿದ ಊರಿಗೆ ವಾಪಸ್ ಬರುವಂತಾಗಬೇಕು ಎಂದರು.
ಶಿಡ್ಲಘಟ್ಟದಲ್ಲೇ ಎಲ್ಲರಿಗೂ ಉದ್ಯೋಗ ಸಿಗುವಂತಾಗಬೇಕು, ಬದುಕನ್ನು ಕಟ್ಟಿಕೊಳ್ಳುವ ಅವಕಾಶಗಳು ಇಲ್ಲೇ ಸಿಗುವಂತಾಗಬೇಕು. ಅಂತಹ ಪೂರಕ ವಾತಾವರಣವನ್ನು ಸರಕಾರ ನಿರ್ಮಿಸಬೇಕು ಎಂದು ಒತ್ತಾಯಿಸಿದರು.
ಶಿಡ್ಲಘಟ್ಟ ಕ್ಷೇತ್ರದ ಜನತೆ ಬಹಳ ಸ್ವಾಭಿಮಾನಿಗಳು, ಅನೇಕ ಸಂದರ್ಭಗಳಲ್ಲಿ ಇದು ಸಾಭೀತಾಗಿದೆ. ಕಾಂಗ್ರೆಸ್‍ನ ಭದ್ರಕೋಟೆಯಾದ ಇಲ್ಲಿ ಮತದಾರರೇ ಹಣ ಕೊಟ್ಟು ಜತೆಗೆ ಮತ ಕೊಟ್ಟು ಶಾಸಕರನ್ನು ಗೆಲ್ಲಿಸಿದ ನಿದರ್ಶನಗಳು ನಮ್ಮ ಮುಂದಿವೆ ಎಂದರು.
ನಾನು ಹಣಕ್ಕಾಗಿಯೋ, ಅಧಿಕಾರಕ್ಕಾಗಿಯೋ ಈ ಕ್ಷೇತ್ರಕ್ಕೆ ಬಂದಿಲ್ಲ. ಬದಲಿಗೆ ಈ ಕ್ಷೇತ್ರದ ಜನರ ನಡುವೆ ಭವಿಷ್ಯದ ಬದುಕನ್ನು ಕಳೆಯಲು ಬಂದಿದ್ದೇನೆ. ಸ್ವಾಭಿಮಾನಿ ಜನರ ಸ್ವಾಭಿಮಾನದ ಬದುಕನ್ನು ಕಟ್ಟುವ ಕನಸು ಕಂಡಿದ್ದು ಅದಕ್ಕೆ ನಿಮ್ಮೆಲ್ಲರ ಸಹಕಾರ ಬೇಕಿದೆ ಎಂದು ಕೋರಿದರು.
ಕೇಂದ್ರದಲ್ಲಿನ ಮೋದಿ ನೇತೃತ್ವದ ಹಾಗೂ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಬಿಜೆಪಿ ಮಾಡಿದ ಕೆಲಸ ಕಾರ್ಯ ಅಭಿವೃದ್ದಿ ಜನಪರ ಯೋಜನೆಗಳನ್ನು ಪ್ರತಿ ಮನೆ ಮನೆಗೂ ತಲುಪಿಸಬೇಕು, ಭ್ರಷ್ಟ ಕಾಂಗ್ರೆಸ್ ಸರಕಾರದ ಆಡಳಿತ ವೈಫಲ್ಯಗಳನ್ನು ಮತದಾರರಿಗೆ ಮನವರಿಕೆ ಮಾಡಿಕೊಡಬೇಕು.
ಮುಂದಿನ ದಿನಗಳಲ್ಲಿ ಬಿಜೆಪಿ ಕ್ಷೇತ್ರ ಸೇರಿದಂತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರುವಂತೆ ಮಾಡಬೇಕು, ಬಿಜೆಪಿಯಿಂದ ಮಾತ್ರ ಜನ ಸಾಮಾನ್ಯರ ಬದುಕು ಹಸನಾಗಲಿದೆ, ಬದುಕು ಭದ್ರವಾಗಲಿದೆ ಎಂದು ಹೇಳಿದರು.
ಇತ್ತೀಚೆಗಷ್ಟೆ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಸೀಕಲ್ ರಾಮಚಂದ್ರಗೌಡ ಅವರನ್ನು ಬಶೆಟ್ಟಹಳ್ಳಿ, ಸಾದಲಿ ಹಾಗೂ ದಿಬ್ಬೂರಹಳ್ಳಿ ಹೋಬಳಿಯ ಬಿಜೆಪಿ ಕಾರ್ಯಕರ್ತರು, ಮುಖಂಡರು ಭಾರಿ ಗಾತ್ರದ ಹೂವಿನ ಹಾರ ಹಾಕಿ ಅಭಿನಂದಿಸಿದರು.
ದಿಬ್ಬೂರಹಳ್ಳಿ ಗ್ರಾಮದಲ್ಲಿನ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಸಾಗಿ ಬಿಜೆಪಿ ಸರಕಾರದ ಸಾಧನೆಗಳನ್ನು ವಿವರಿಸಲಾಯಿತು.
ಮಾಜಿ ಸಂಸದ ಎಸ್.ಮುನಿಸ್ವಾಮಿ, ಮಾಜಿ ಶಾಸಕ ಎಂ.ರಾಜಣ್ಣ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುರಳೀಧರ್, ಅರಿಕೆರೆ ಮುನಿರಾಜು, ಅನೆಮಡಗು ಮುರಳಿ, ವೆಂಕಟೇಶ್‍ಗೌಡ, ಡಿಎಸ್‍ಎನ್ ರಾಜು, ತಾಲೂಕು ಅಧ್ಯಕ್ಷ ಸೀಕಲ್ ಆನಂದಗೌಡ, ರಜನೀಕಾಂತ್ ಬಾಬು, ಪ್ರಸನ್ನ, ಮಂಜುಳ, ರೂಪ ಇನ್ನಿತರರು ಉಪಸ್ಥಿತರಿದ್ದರು.