Sidlaghatta : ರೇಷ್ಮೆನೂಲು ಬಿಚ್ಚಾಣಿಕೆಯಲ್ಲಿ ತೊಡಗಿಸಿಕೊಂಡ ಅಲ್ಪ ಸಂಖ್ಯಾತ ರೀಲರುಗಳಿಗೆ ಸರ್ಕಾರದಿಂದ ಅನೇಕ ರೀತಿಯ ಸವಲತ್ತುಗಳಿದ್ದು ಅವುಗಳನ್ನು ಬಳಸಿಕೊಂಡು ತಮ್ಮ ಉದ್ದಿಮೆಯಲ್ಲಿ ಆರ್ಥಿಕವಾಗಿ ಸುಧಾರಿಸಿಕೊಳ್ಳಿ ಎಂದು ರೇಷ್ಮೆಗೂಡು ಮಾರುಕಟ್ಟೆ ಸಹಾಯಕ ನಿರ್ದೇಶಕ ಕೆ.ತಿಮ್ಮರಾಜು ಅವರು ರೀಲರುಗಳಿಗೆ ತಿಳಿಸಿದರು.
ನಗರದಲ್ಲಿ ಸರ್ಕಾರಿ ರೇಷ್ಮೆಗೂಡು ಮಾರುಕಟ್ಟೆಯ ಸಭಾಂಗಣದಲ್ಲಿ ಆಯೋಜಿಸಿದ್ದ ರೀಲರುಗಳಿಗೆ ಸರ್ಕಾರ ಮತ್ತು ಅಲ್ಪಸಂಖ್ಯಾತ ಅಭಿವೃದ್ದಿ ನಿಗಮದಿಂದ ಸಿಗುವ ಸವಲತ್ತುಗಳ ಬಗ್ಗೆ ಜಾಗೃತಿ ಮೂಡಿಸುವ ಸಭೆಯಲ್ಲಿ ಅವರು ಮಾತನಾಡಿದರು.
ಈಗಾಗಲೆ ತರಬೇತಿ ಪಡೆದು ರೇಷ್ಮೆ ನೂಲು ಬಿಚ್ಚಾಣಿಕೆಯಲ್ಲಿ ತೊಡಗಿರುವ ಅಥವಾ ತೊಡಗಿಸಿಕೊಳ್ಳುವ ರೀಲರುಗಳಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸಲು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಅಭಿವೃದ್ದಿ ನಿಗಮದಿಂದ ಎರಡು ಲಕ್ಷದವರೆಗೆ ಸಾಲ ನೀಡಲಾಗುತ್ತದೆ. ಇದರಲ್ಲಿ ಶೇ 50 ರಷ್ಟು ಸಹಾಯ ಧನವಾಗಿರುತ್ತದೆ ಎಂದರು.
ರೀಲರುಗಳಿಗೆ ದುಡಿಯುವ ಬಂಡವಾಳ(ವರ್ಕಿಂಗ್ ಕ್ಯಾಪಿಟಲ್)ವನ್ನು ಸಹ ನೀಡಲಾಗುತ್ತದೆ. 18 ವರ್ಷದಿಂದ 55 ವರ್ಷದೊಳಗಿನ ರೀಲರುಗಳು, ರಾಜ್ಯದ ವಾಸಿಯಾಗಿದ್ದು ನಿಗಮದಿಂದ ಸಾಲ ಪಡೆದಿರಬಾರದು ಮತ್ತು ಸುಸ್ತಿದಾರರು ಆಗಿರದೇ ಇರುವವರಿಗೆ ಈ ಸವಲತ್ತುಗಳು ಸಿಗಲಿವೆ ಎಂದು ವಿವರಿಸಿದರು.
ತಾಂತ್ರಿಕ ಸೇವಾ ಕೇಂದ್ರದ ಸಹಾಯಕ ನಿರ್ದೇಶಕ ರಾಮ್ ಕುಮಾರ್ ಮಾತನಾಡಿ, ಸ್ವಯಂ ಚಾಲಿತ ದ್ವಿತಳಿಯ ಪ್ರತಿ ಕೆಜಿ ರೇಷ್ಮೆಗೆ ಸಿಗುವ ಸಹಾಯನ ಧನ, ಕಚ್ಚಾ ರೇಷ್ಮೆಗೆ ಸಿಗುವ ಸಹಾಯಧನ, 1200 ಅಡಿ, 900 ಹಾಗೂ 600 ಚದರ ಅಡಿ ವಿಸ್ತೀರ್ಣದ ರೀಲಿಂಗ್ ಶೆಡ್ ನಿರ್ಮಾಣಕ್ಕೆ ದೊರಕುವ ಸಹಾಯ ಧನದ ಬಗ್ಗೆ ಮಾಹಿತಿ ನೀಡಿದರು.
ಸ್ವಯಂ ಚಾಲಿತ ರೀಲಿಂಗ್ ಘಟಕ, ಡೂಪಿಯಾನ ಘಟಕ ಪ್ಯೂಪಾ ಸಂಸ್ಕರಣ ಘಟಕ, ಬೇಸಿನ್ ಮಲ್ಟಿ ಎಂಡ್ ರೀಲಿಂಗ್ ಘಟಕ, ಸುಧಾರಿತ ಕಾಟೇಜ್ ಬೇಸಿನ್ ಘಟಕ, ಇಟಾಲಿಯನ್ ಕಾಟೇಜ್ ಬೇಸಿನ್, ಬಾಯ್ಲರ್ ಅಳವಡಿಕೆ, ಜನರೇಟರ್, ಸೋಲಾರ್ ವಾಟರ್ ಹೀಟರ್, ಹೀಟ್ ರಿಕವರಿ ಯೂನಿಟ್ ಅಳವಡಿಕೆಗೆ ಸಿಗುವ ಸವಲತ್ತು, ಸಾಲ ಹಾಗೂ ಸಹಾಯ ಧನ ಇನ್ನಿತರೆ ಮಾಹಿತಿಯನ್ನು ಒದಗಿಸಿದರು.
ರೇಷ್ಮೆಗೂಡು ಮಾರುಕಟ್ಟೆಯ ಉಪ ನಿರ್ದೇಶಕ ಮಹದೇವಯ್ಯ, ಸಹಾಯಕ ನಿರ್ದೇಶಕ ಕೆ.ತಿಮ್ಮರಾಜು, ತಾಂತ್ರಿಕ ವಿಭಾಗದ ರಾಮ್‌ಕುಮಾರ್, ಸಿಲ್ಕ್ ರೀಲರ್ಸ್ ಸಂಘದ ಅಧ್ಯಕ್ಷ ಅನ್ಸರ್‌ಖಾನ್, ಫಾರುಕ್ ಪಾಷ, ಜಿ.ರೆಹಮಾನ್, ಕೆ.ಆನಂದ್, ಬಂಗಾರು ರಾಮಕೃಷ್ಣಪ್ಪ, ಮಂಜುನಾಥ್, ಮುನಿಕೃಷ್ಣ ಸೇರಿದಂತೆ ರೀಲರುಗಳು ಹಾಜರಿದ್ದರು