Sidlaghatta : ಕೇಂದ್ರ ರೇಷ್ಮೆ ಮಂಡಳಿಯ ಜಂಟಿ ನಿರ್ದೇಶಕ ನರೇಶ್ ಬಾಬು ನೇತೃತ್ವದ ಅಧಿಕಾರಿಗಳ ತಂಡವು ಶಿಡ್ಲಘಟ್ಟ ತಾಲೂಕಿನ ವಿವಿಧ ರೇಷ್ಮೆ ಕೃಷಿ ಪ್ರದೇಶಗಳಿಗೆ ಭೇಟಿ ನೀಡಿದರು. ಈ ಸಂದರ್ಭ ಅವರು ಹಿಪ್ಪುನೇರಳೆ ತೋಟಗಳು, ರೇಷ್ಮೆ ಹುಳು ಸಾಕಣೆ ಮನೆಗಳು ಹಾಗೂ ಚಂದ್ರಿಕೆ ಶೆಡ್‌ಗಳನ್ನು ಪರಿಶೀಲಿಸಿ, ರೈತರು ಅನುಭವಿಸುತ್ತಿರುವ ಸವಾಲುಗಳ ಕುರಿತು ಆಳವಾಗಿ ಚರ್ಚಿಸಿದರು.
ಭೇಟಿಯು ಹಿತ್ತಲಹಳ್ಳಿ ಗ್ರಾಮದಲ್ಲಿ ನಡೆದಿದ್ದು, ಕೃಷಿ ಪಂಡಿತ ಪ್ರಶಸ್ತಿ ವಿಜೇತ ಗೋಪಾಲಗೌಡ ಅವರ ತೋಟದಲ್ಲಿ ಅಧಿಕಾರಿಗಳು ನೇರವಾಗಿ ಪರಿಶೀಲನೆ ನಡೆಸಿದರು. ಈ ವೇಳೆ ರೈತರು ಎದುರಿಸುತ್ತಿರುವ ಪ್ರಾಕೃತಿಕ ಮತ್ತು ತಾಂತ್ರಿಕ ಅಡಚಣೆಗಳ ಬಗ್ಗೆ ಸಮಾಲೋಚನೆ ನಡೆಯಿತು. ರೈತರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ನಿರೀಕ್ಷಿಸಲಾಗುತ್ತಿರುವ ಸಹಾಯಧನ ಮತ್ತು ಸವಲತ್ತುಗಳ ಕುರಿತು ಅಧಿಕಾರಿಗಳು ಮಾಹಿತಿಯನ್ನು ಸಂಗ್ರಹಿಸಿದರು.
ರೈತ ಗೋಪಾಲಗೌಡ ಅವರು ಮಾತನಾಡುತ್ತಾ, ಕೆಲಸಗಾರರ ಕೊರತೆಯ ಹಿನ್ನೆಲೆಯಲ್ಲಿ ಹಿಪ್ಪುನೇರಳೆ ಸೊಪ್ಪು ಕಟಾವು ಯಂತ್ರಗಳನ್ನು ಪರಿಷ್ಕರಿಸಿ ರೈತರಿಗೆ ನೀಡಬೇಕೆಂದು ಮನವಿ ಮಾಡಿದರು. ಹನಿ ನೀರಾವರಿ ಪರಿಕರಗಳನ್ನು 5 ವರ್ಷಗಳ ನಂತರ ಪುನರ್ ವಿತರಣೆಯಾಗಬೇಕೆಂದು ಸೂಚಿಸಿದರು. ರೇಷ್ಮೆಗೂಡಿನ ಬೆಲೆ ಇಳಿಕೆಯಾಗುವ ಸಂದರ್ಭದಲ್ಲಿಯೂ ರೈತರಿಗೆ ಪ್ರೋತ್ಸಾಹ ಧನ ನೀಡಬೇಕು ಎಂದು ಒತ್ತಾಯಿಸಿದರು. ಇದಲ್ಲದೆ, ಹಿಪ್ಪುನೇರಳೆ ಕಡ್ಡಿಗಳನ್ನು ಚಾಪ್ ಕಟ್ ಮಾಡಿ ಗೊಬ್ಬರ ಮಾಡಲು ಶೇ. 90ರಷ್ಟು ರಿಯಾಯಿತಿದರದಲ್ಲಿ ಯಂತ್ರಗಳನ್ನು ನೀಡಬೇಕೆಂದು ಸಲಹೆ ನೀಡಿದರು.
ಅದರೊಂದಿಗೆ ರೈತರು ಇನ್ನೂ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಈ ಕುರಿತು ತಾಲೂಕು ಮಟ್ಟದಲ್ಲಿ ರೈತರ ಸಭೆ ಏರ್ಪಡಿಸಿ ಎಲ್ಲರ ಅಭಿಪ್ರಾಯ ಮತ್ತು ಮಾಹಿತಿಯನ್ನು ಸಂಗ್ರಹಿಸುವ ಅಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಜಂಟಿ ನಿರ್ದೇಶಕ ನರೇಶ್ ಬಾಬು ಅವರು ರೈತರ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸುವುದಾಗಿ ತಿಳಿಸಿ, ಶೀಘ್ರದಲ್ಲೇ ರೈತರ ಸಭೆ ಏರ್ಪಡಿಸುವ ಭರವಸೆ ನೀಡಿದರು. ಈ ಭೇಟಿ ವೇಳೆ ಸಹಾಯಕ ನಿರ್ದೇಶಕ ಮಹೇಶ್, ಬೂದಾಳ ರಾಮಾಂಜಿ, ಬೋದಗೂರು ರಾಮಮೂರ್ತಿ, ಬೆಳ್ಳೂಟಿ ಪ್ರಕಾಶ್, ಹಿತ್ತಲಹಳ್ಳಿ ಪುಟ್ಟೇಗೌಡ ಸೇರಿದಂತೆ ಹಲವಾರು ರೈತರು ಉಪಸ್ಥಿತರಿದ್ದರು.
The editorial desk of Sidlaghatta.com (Namma Shidlaghatta), covering civic affairs, agriculture, silk trade, and local government news for Sidlaghatta taluk, Karnataka.