
Sidlaghatta, Chikkaballapur District : ಶಿಡ್ಲಘಟ್ಟ ನಗರದ ಕೋಟೆ ವೃತ್ತದಲ್ಲಿರುವ ಶ್ರೀ ಸೋಮೇಶ್ವರಸ್ವಾಮಿ ದೇವಾಲಯದ ಪುನರ್ ನಿರ್ಮಾಣ ಕಾರ್ಯ ಸಂಪೂರ್ಣವಾಗಿ ಮುಗಿದು, ನವೆಂಬರ್ 1ರಿಂದ 3ರವರೆಗೆ ನಡೆಯಲಿರುವ ಜೀರ್ಣೋದ್ಧಾರ ಮತ್ತು ಪುನರ್ ಪ್ರತಿಷ್ಠಾಪನಾ ಮಹೋತ್ಸವಕ್ಕೆ ಸಕಲ ಸಿದ್ಧತೆಗಳು ನಡೆದಿದೆ.
ಈ ದೇವಾಲಯವು ಶಿಡ್ಲಘಟ್ಟ ಪಟ್ಟಣದ ನಿರ್ಮಾತೃ ಅಲಸೂರಮ್ಮ ಮತ್ತು ಅವರ ಪುತ್ರ ಶಿವನೇಗೌಡ ಅವರ ಕಾಲದಲ್ಲಿ ನಿರ್ಮಿತವಾಗಿದ್ದು, ಕಾಲಾನಂತರ ನಿರ್ವಹಣೆ ಇಲ್ಲದೆ ಶಿಥಿಲಗೊಂಡಿತ್ತು. ಇದೀಗ ಮುಜರಾಯಿ ಇಲಾಖೆಯಡಿ ಬರುವ ಈ ಪ್ರಾಚೀನ ದೇವಾಲಯವನ್ನು ಡಾಲ್ಫಿನ್ ಸ್ಕೂಲ್‌ನ ನಾಗರಾಜ್ ಅವರ ಅಧ್ಯಕ್ಷತೆಯ ದೇವಾಲಯಾಭಿವೃದ್ಧಿ ಸಮಿತಿ ಸುಮಾರು ₹2 ಕೋಟಿಗಳ ವೆಚ್ಚದಲ್ಲಿ ಸಂಪೂರ್ಣ ಕಲ್ಲಿನಿಂದ ಪುನರ್ ನಿರ್ಮಿಸಿದೆ.
ಹೊಸ ದೇವಾಲಯವು ಸುಂದರ ಕಲಾ ಕೆತ್ತನೆಯ ಪ್ರಾಂಗಣ, ಆಕರ್ಷಕ ಗೋಪುರ, 21 ಅಡಿ ಎತ್ತರದ ಧ್ವಜಸ್ತಂಭ, ಅಶ್ವತ್ಥಕಟ್ಟೆ, ವಿನಾಯಕ ಹಾಗೂ ಸುಬ್ರಮಣ್ಯಸ್ವಾಮಿ ಗುಡಿ, ನೀರಿನ ಚಿಲುಮೆ ಹಾಗೂ ಸಸ್ಯೋಧ್ಯಾನದಿಂದ ಭಕ್ತರ ಮನಸ್ಸು ಸೆಳೆಯುತ್ತಿದೆ.
ಮೂರು ದಿನಗಳ ಕಾಲ ನಡೆಯುವ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಸುತ್ತಮುತ್ತ 5,000ಕ್ಕೂ ಹೆಚ್ಚು ಭಕ್ತರು ಭಾಗವಹಿಸುವ ನಿರೀಕ್ಷೆಯಿದ್ದು, ಪ್ರಸಾದ, ಅನ್ನಸಂತರ್ಪಣೆ ಹಾಗೂ ಊಟದ ಸಕಲ ವ್ಯವಸ್ಥೆ ಮಾಡಲಾಗಿದೆ.
ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ. ಸುಧಾಕರ್, ಶಾಸಕ ಬಿ.ಎನ್. ರವಿಕುಮಾರ್ ಹಾಗೂ ಸಂಸದ ಮಲ್ಲೇಶ್‌ಬಾಬು ಸೇರಿದಂತೆ ಹಲವಾರು ಗಣ್ಯರು ಈ ಧಾರ್ಮಿಕ ಮಹೋತ್ಸವದಲ್ಲಿ ಭಾಗವಹಿಸಲಿದ್ದಾರೆ.
ದೇವಾಲಯದ ಪಾದಚಾರಿ ಮಾರ್ಗ, ಪ್ರಸಾದ ವಿತರಣಾ ಸ್ಥಳ ಹಾಗೂ ನೀರಿನ ಚಿಲುಮೆ ನಿರ್ಮಾಣ ಕಾರ್ಯಗಳ ಅಂತಿಮ ಹಂತ ನಡೆಯುತ್ತಿದ್ದು, ದೇವಾಲಯಾಭಿವೃದ್ಧಿ ಸಮಿತಿಯ ಸದಸ್ಯರಾದ ಮುರಳಿ, ಪಂಪ್ ನಾಗರಾಜ್, ಚಿಕ್ಕಮುನಿಯಪ್ಪ, ರೂಪಸಿ ರಮೇಶ್ ಮತ್ತು ಜೆ.ವಿ. ಸುರೇಶ್ ಅವರು ಸಿದ್ಧತೆಗಳನ್ನು ವೀಕ್ಷಿಸಿದರು.
1500ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿರುವ ದೇವಾಲಯವನ್ನು ದಾನಿಗಳ ನೆರವಿನಿಂದ ಸುಮಾರು 2 ಕೋಟಿ ರೂ ವೆಚ್ಚದಲ್ಲಿ ಪುನರ್ ನಿರ್ಮಾಣ ಮಾಡಲಾಗಿದೆ. ನವೆಂಬರ್ 1ರಿಂದ 3 ದಿನಗಳ ಕಾಲ ಜೀರ್ಣೋದ್ಧಾರ, ಪುನರ್ ಪ್ರತಿಷ್ಠಾಪನೆ ನಡೆಯಲಿದ್ದು ಎಲ್ಲರನ್ನೂ ಧರ್ಮ, ಪಕ್ಷ, ಜಾತ್ಯಾತೀತವಾಗಿ ಆಹ್ವಾನಿಸಲಾಗುವುದು. 5 ಸಾವಿರ ಮಂದಿ ಭಕ್ತರು ಸೇರುವ ನಿರೀಕ್ಷೆಯಿದೆ. ದೇವಾಲಯ ನಿರ್ಮಾಣ ಮತ್ತು ಇತರೆ ಪೂರ್ಜಾ ಕಾರ್ಯಕ್ರಮಗಳಲ್ಲಿ ಎಲ್ಲರೂ ಭಾಗವಹಿಸಿ ತನು ಮನ ಧನ ಅರ್ಪಿಸಿ ಭಗವಂತನ ಕೃಪಗೆ ಪಾತ್ರರಾಗಲು ಮನವಿ.
- ಡಾಲ್ಫಿನ್ ಸ್ಕೂಲ್ ನಾಗರಾಜ್, ಅಧ್ಯಕ್ಷರು, ಸೋಮೇಶ್ವರಸ್ವಾಮಿ ದೇವಾಲಯ ಅಭಿವೃದ್ದಿ ಸಮಿತಿ