Sidlaghatta : ಶಿಡ್ಲಘಟ್ಟ ತಾಲ್ಲೂಕಿನ ದಿಬ್ಬೂರಹಳ್ಳಿ ಸಮೀಪದ ಬಚ್ಚನಹಳ್ಳಿಯ ಗೋಪಮ್ಮನಬೆಟ್ಟದ ಮೇಲಿದ್ದ ಐತಿಹಾಸಿಕ ಹಾಗೂ ಕಲಾತ್ಮಕ ಬೃಹತ್ ಗರುಡಗಂಭವು ನಿಧಿಯ ಆಸೆಗೆ ಬಲಿಯಾಗಿದೆ. ದುಷ್ಕರ್ಮಿಗಳು ನಿಧಿ ಹುಡುಕುವ ಭರದಲ್ಲಿ ಈ ಬೃಹತ್ ಕಂಬವನ್ನು ಬೆಟ್ಟದ ಮೇಲಿನಿಂದ ಸುಮಾರು 30 ಅಡಿ ಕೆಳಕ್ಕೆ ಉರುಳಿಸಿದ್ದು, ಶತಮಾನಗಳ ಇತಿಹಾಸವಿರುವ ಸ್ಮಾರಕವು ಈಗ ಭಗ್ನಗೊಂಡಿದೆ.
ತಾಲ್ಲೂಕಿನಾದ್ಯಂತ ಇತ್ತೀಚಿನ ದಿನಗಳಲ್ಲಿ ಶಾಸನಗಳು, ವೀರಗಲ್ಲುಗಳು ಮತ್ತು ಐತಿಹಾಸಿಕ ಸ್ಮಾರಕಗಳನ್ನು ನಿಧಿಯ ಆಸೆಗೆ ಬಗೆಯುವ ಕೃತ್ಯಗಳು ಹೆಚ್ಚುತ್ತಿವೆ. ಈ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಶಾಸನತಜ್ಞ ಕೆ.ಧನಪಾಲ್, “ಶಾಸನಗಳು ಮತ್ತು ವೀರಗಲ್ಲುಗಳು ಇತಿಹಾಸದ ದಾಖಲೆಗಳೇ ಹೊರತು ಅವುಗಳ ಕೆಳಗೆ ಯಾರೂ ನಿಧಿಯನ್ನು ಹೂತಿಡುತ್ತಿರಲಿಲ್ಲ. ಇತಿಹಾಸದ ಈ ದಾಖಲೆಗಳೇ ನಮಗೆ ಅನರ್ಘ್ಯ ನಿಧಿಗಳು. ಇವುಗಳನ್ನು ನಾಶಪಡಿಸುವುದು ನಮ್ಮ ಪರಂಪರೆಯನ್ನೇ ಅಳಿಸಿದಂತೆ,” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಗೋಪಮ್ಮನಬೆಟ್ಟದ ಮೇಲಿದ್ದ ಈ ಗರುಡಗಂಭವು ಏಕಶಿಲೆಯಲ್ಲಿ ಕೆತ್ತಲ್ಪಟ್ಟ ಅದ್ಭುತ ಕಲಾಕೃತಿಯಾಗಿತ್ತು. ಶಾಸನತಜ್ಞ ಎ.ಎಂ.ತ್ಯಾಗರಾಜ್ ಮಾತನಾಡಿ, “ಆ ಕಾಲದಲ್ಲಿ ನಮ್ಮ ಹಿರಿಯರು ಇಷ್ಟು ದೊಡ್ಡ ಕಂಬವನ್ನು ಬೆಟ್ಟದ ಮೇಲೆ ಸಾಗಿಸಿ ಕೆತ್ತನೆ ಮಾಡಲು ಪಟ್ಟ ಶ್ರಮ ಅಪಾರ. ಅಂತಹ ಕಲಾಕೃತಿಯನ್ನು ಇಂದು ಮರುಸೃಷ್ಟಿಸಲು ಸಾಧ್ಯವಿಲ್ಲ. ಕನಿಷ್ಠ ಇರುವ ಸ್ಮಾರಕಗಳನ್ನಾದರೂ ಉಳಿಸಿಕೊಳ್ಳುವ ಪ್ರಜ್ಞೆ ನಮಗಿರಲಿ,” ಎಂದು ಮನವಿ ಮಾಡಿದ್ದಾರೆ.
ಜಿಲ್ಲಾ ಪಂಚಾಯಿತಿಗೆ ಮನವಿ: ಶಿಡ್ಲಘಟ್ಟ ತಾಲ್ಲೂಕಿನ ಗೆಜ್ಜಿಗಾನಹಳ್ಳಿ, ಕೊತ್ತನೂರು, ನಾಗಮಂಗಲ, ಮುತ್ತೂರು ಸೇರಿದಂತೆ ವಿವಿಧ ಗ್ರಾಮಗಳಲ್ಲಿರುವ ಶಾಸನಗಳನ್ನು ಸಂರಕ್ಷಿಸಬೇಕು ಎಂದು ಧನಪಾಲ್ ಅವರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ವರದಿಯನ್ನು ಸಲ್ಲಿಸಿದ್ದಾರೆ. ಪುರಾತತ್ವ ಇಲಾಖೆಯ ವತಿಯಿಂದ ತುರ್ತು ಸರ್ವೆ ನಡೆಸಿ ಈ ಐತಿಹಾಸಿಕ ಆಸ್ತಿಗಳನ್ನು ಕಾಪಾಡಬೇಕೆಂದು ಒತ್ತಾಯಿಸಲಾಗಿದೆ.








