
Sidlaghatta : ಕನ್ನಡ ನಾಡಿನ ಪ್ರಸಿದ್ಧ ವಚನ ಚಿಂತಕ ಮತ್ತು ಸಾಹಿತಿ ಡಾ. ಫ.ಗು. ಹಳಕಟ್ಟಿಯವರ ಜನ್ಮದಿನಾಚರಣೆ ಹಾಗೂ ವಚನ ಸಾಹಿತ್ಯ ಸಂರಕ್ಷಣಾ ದಿನದ ಅಂಗವಾಗಿ ಶಿಡ್ಲಘಟ್ಟ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಮಂಗಳವಾರದಂದು ಸರಳ ಹಾಗೂ ಸಾಂಸ್ಕೃತಿಕ ರೀತಿಯಲ್ಲಿ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮವನ್ನು ತಾಲ್ಲೂಕು ಆಡಳಿತದ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಸಹಯೋಗದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಆರಂಭದಲ್ಲಿ ಡಾ. ಹಳಕಟ್ಟಿಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಜಾಗೃತಿ ಸಮಿತಿಯ ಸದಸ್ಯ ಮೇಲೂರು ಮಂಜುನಾಥ್ ಅವರು, “ವಚನ ಸಾಹಿತ್ಯ ಕೇವಲ ಸಾಹಿತ್ಯ ಶೈಲಿ ಅಲ್ಲ, ಅದು ಸಮಾಜದಲ್ಲಿ ಬದಲಾವಣೆ ತರುವ ತತ್ವಶಾಸ್ತ್ರವಾಗಿದೆ. ಡಾ. ಹಳಕಟ್ಟಿ ಅವರು ಈ ಪರಂಪರೆಯ ಪ್ರಬಲ ಪ್ರತಿನಿಧಿಯಾಗಿದ್ದರು. ಯುವಪೀಳಿಗೆಗೆ ವಚನ ಪರಂಪರೆಯ ಅರಿವು ಮೂಡಿಸುವುದು ಈ ಸಂದರ್ಭದಲ್ಲಿ ಅಗತ್ಯ,” ಎಂದು ಹೇಳಿದರು.
ಡಾ. ಹಳಕಟ್ಟಿಯ ಸಾಹಿತ್ಯ ಸೇವೆ ಹಾಗೂ ವಚನ ಪರಂಪರೆಯ ಉಳಿವಿಗಾಗಿ ನೀಡಿದ ಕೊಡುಗೆಗಳನ್ನು ಸ್ಮರಿಸಲಾಗಿದ್ದು, ನವ ತಂತ್ರಜ್ಞಾನ ಯುಗದಲ್ಲಿಯೂ ವಚನ ತತ್ವಗಳು ಪ್ರಸ್ತುತವಾಗಿವೆ ಎಂಬುದು ಸ್ಪಷ್ಟವಾಯಿತು.
ಕಾರ್ಯಕ್ರಮದಲ್ಲಿ ಶಿರಸ್ತೇದಾರ್ ಅಸೀಯ ಬಿ., ನರೇಗಾ ಸಹಾಯಕ ನಿರ್ದೇಶಕ ಚಂದ್ರಪ್ಪ, ಮುಖಂಡ ವೇಣು ಸೇರಿದಂತೆ ಕೆಲವೇ ಅಧಿಕೃತರು ಭಾಗವಹಿಸಿದ್ದರು. ಆದರೆ ತಹಶೀಲ್ದಾರ್ ಸೇರಿದಂತೆ ಹಲವಾರು ಹಿರಿಯ ಅಧಿಕಾರಿಗಳ ಗೈರುಹಾಜರಿ ಗಮನ ಸೆಳೆಯಿತು.