Sidlaghatta : ಜನಪ್ರತಿನಿಧಿಯಾದವರು ಮೊದಲು ತಮ್ಮ ನಡೆ ನುಡಿಯನ್ನು ಬದಲಿಸಿಕೊಳ್ಳಬೇಕು, ಮುಖ್ಯವಾಗಿ ಜನರೊಂದಿಗೆ ನಿಕಟ ಸಂಪರ್ಕ ಇರಿಸಿಕೊಂಡು ಸಮಸ್ಯೆಗಳನ್ನು ತಾಳ್ಮೆಯಿಂದ ಕೇಳುವಂತಾಗಬೇಕು ಎಂದು ನಗರದ 11 ನೇ ವಾರ್ಡ್ ನ ನಗರಸಭೆ ಸದಸ್ಯ ಅನಿಲ್ ಕುಮಾರ್ ತಿಳಿಸಿದರು.
ನಗರದಲ್ಲಿನ ನಗರೇಶ್ವರ ಕಲ್ಯಾಣ ಮಂಟಪದಲ್ಲಿ 11 ನೇ ವಾರ್ಡ್ ನ ನಾಗರಿಕರು ನೀಡಿದ “ಸೇವಾ ರತ್ನ” ಪ್ರಶಸ್ತಿಯನ್ನು ಸ್ವೀಕರಿಸಿ ಅವರು ಮಾತನಾಡಿದರು.
ನಾನು ಮೊದಲು ಚುನಾವಣೆಗೆ ಸ್ಪರ್ಧಿಸಿದಾಗ ಮತ ಕೇಳಲು ಮನೆ ಮನೆಗೆ ಹೋದಾಗ “ಏಯ್ ಹೋಗಪ್ಪ ಯಾರು ಬಂದರೂ ಅಷ್ಟೇ ಬಂದಾಗ ಎಲ್ಲರೂ ಅಂಗೈಲಿ ಸ್ವರ್ಗ ತೋರಿಸ್ತಾರೆ ಗೆದ್ದ ಮೇಲೆ ಅವರ ಬಂಡವಾಳ ಗೊತ್ತಾಗುತ್ತೆ” ಎಂದಾಗ ಅಪಮಾನ ಆಯಿತು. ಆದರೆ ಚುನಾವಣೆಯಲ್ಲಿ ನಿಮ್ಮೆಲ್ಲರ ಆಶೀರ್ವಾದದಿಂದ ಗೆದ್ದೆ. ಚುನಾವಣೆ ಸಮಯದಲ್ಲಿ ನಾನು ಭರವಸೆ ಕೊಟ್ಟಂತೆ ನಮ್ಮ ಮನೆ ಬಾಗಿಲಿಗೆ ನೀವು ಬರಬೇಡಿ ನಿಮ್ಮ ಮನೆ ಬಾಗಿಲಿಗೆ ನಾನೇ ಬರುತ್ತೇನೆ ಎಂದು ಹೇಳಿದಂತೆ ನಾನೇ ನಿಮ್ಮ ಮನೆ ಬಾಗಿಲಿಗೆ ಬಂದೆ. ನಿಮ್ಮ ಸಮಸ್ಯೆಯನ್ನು ಆಲಿಸಿದೆ. ನನ್ನ ಇತಿಮಿತಿಯಲ್ಲಿ ತಡಮಾಡದೆ ಸಮಸ್ಯೆ ಪರಿಹರಿಸಿಕೊಂಡು ಬಂದೆ ಎಂದರು.
ನಾನು ಮಾಡಿದ್ದು ಇಷ್ಟೆ. ಕೊರೊನಾ ಕಾಲದಲ್ಲಿ ಲಸಿಕೆ ಹಾಕಿಸಿಕೊಳ್ಳಲು ಜನರು ಹಿಂದೇಟು ಹಾಕಿದಾಗ ಮೊದಲು ನಮ್ಮಪ್ಪನಿಗೆ ಲಸಿಕೆ ಹಾಕಿಸಿ ನಿಮ್ಮಲ್ಲಿ ಲಸಿಕೆ ಬಗ್ಗೆ ಭರವಸೆ ಮೂಡಿಸಿದೆ. ಇದರಿಂದ ಇಡೀ ಜಿಲ್ಲೆಯಲ್ಲೆ ನಮ್ಮ ವಾರ್ಡಿನಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಲಸಿಕೆ ಹಾಕಿಸಲಾಯಿತು ಎಂದರು.
ವಾಟ್ಸಾಪ್ ಗ್ರೂಪ್ ರಚಿಸಿ ಅದರಲ್ಲಿ ವಾರ್ಡಿನಲ್ಲಿನ ಸಮಸ್ಯೆಗಳನ್ನು ಮುಕ್ತವಾಗಿ ಹಂಚಿಕೊಳ್ಳುವಂತೆ ಮಾಡಿ ಅದರಿಂದ ಸಮಸ್ಯೆ ನಿವಾರಣೆಗೆ ಅನುಕೂಲವಾಯಿತು. ಇದರಿಂದ ವಾರ್ಡಿನ ನಾಗರಿಕರಿಗೆ ಇನ್ನಷ್ಟು ಹತ್ತಿರ ಆಗಲು ಸಾಧ್ಯವಾಯಿತು ಎಂದು ಹೇಳಿದರು.
ಇಂದು ನಾನು ಏನೇನೂ ಸಾಧಿಸಿಲ್ಲ. ನಗರಸಭಾ ಸದಸ್ಯನಾಗಿ ನನ್ನ ಮೇಲಿನ ಜವಾಬ್ದಾರಿಯನ್ನು ನಿರ್ವಹಿಸುವ ಪ್ರಯತ್ನ ಮಾಡಿದ್ದೇನೆ. ನೀರು, ಸ್ವಚ್ಛತೆ, ಬೀದಿ ದೀಪ ಮುಂತಾದ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ನಮ್ಮ ಕೆಲಸ. ಅದನ್ನು ಪ್ರಾಮಾಣಿಕವಾಗಿ ಮಾಡಿರುವೆ. ನಾನು ನಿಮ್ಮ ಸಮಸ್ಯೆಗಳನ್ನು ಬಗೆಹರಿಸುವ ಸಣ್ಣ ಪ್ರಯತ್ನ ಮಾಡಿದ್ದೇನೆ. ಆದರೂ ನಿಮ್ಮ ಈ ಪ್ರೀತಿಗೆ ನಾನು ಬದುಕಿನಲ್ಲಿ ಸದಾ ಚಿರ ಋಣಿಯಾಗಿರುತ್ತೇನೆ ಎಂದರು.
ವಾರ್ಡಿನ ನಾಗರೀಕರು “ಸೇವಾ ರತ್ನ” ಪ್ರಶಸ್ತಿ ನೀಡಿ ಸನ್ಮಾನಿಸಿದರು. ವಾರ್ಡಿನ ಎಲ್ಲ ಮನೆಗಳಿಂದಲೂ ಕಾರ್ಯಕ್ರಮಕ್ಕೆ ಆಗಮಿಸಿ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.