Y Hunasenahalli, Sidlaghatta : ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿಯ ಉಪಕಾರ್ಯದರ್ಶಿ ಅತೀಕ್ ಪಾಷಾ ಶುಕ್ರವಾರ ತಾಲ್ಲೂಕಿನ ವೈ.ಹುಣಸೇನಹಳ್ಳಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಅಡಿಯಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದರು.
ವೈ.ಹುಣಸೇನಹಳ್ಳಿ ಗ್ರಾ.ಪಂ ವ್ಯಾಪ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಾಂಪೌಂಡ್, ಅಡುಗೆಕೋಣೆ, ಹಾಗೂ ಸಿ.ಸಿ. ರಸ್ತೆ ಕಾಮಗಾರಿಗಳ ಸ್ಥಳಗಳಿಗೆ ಭೇಟಿ ನೀಡಿದ ಅವರು, ಕಾಮಗಾರಿಗಳ ಗುಣಮಟ್ಟವನ್ನು ಪರಿಶೀಲಿಸಿದರು. ದೊಡ್ಡದಾಸೇನಹಳ್ಳಿಯ ಶಾಲಾ ಕಾಂಪೌಂಡ್ ನಿರ್ಮಾಣ ಮತ್ತು ಅನ್ನಪೂರ್ಣೇಶ್ವರಿ ಅಡುಗೆ ಕೋಣೆಯ ಕಾಮಗಾರಿಗಳನ್ನು ವೀಕ್ಷಿಸಿ, ನರೇಗಾ ಕಡತಗಳ ನಿರ್ವಹಣೆಗೆ ಸೂಕ್ತ ಸಲಹೆ ನೀಡಿದರು.
ಶಾಲಾ ಮಕ್ಕಳಿಗೆ ಆರೋಗ್ಯಕರ ಆಹಾರ ಒದಗಿಸುವಂತೆ ಮತ್ತು ನರೇಗಾ ಅಡಿಯಲ್ಲಿ ಕೈಗೊಳ್ಳುವ ವೈಯಕ್ತಿಕ ಯೋಜನೆಗಳನ್ನು ಫಲಾನುಭವಿಗಳು ಸಂಪೂರ್ಣವಾಗಿ ಬಳಸಿಕೊಳ್ಳುವಂತೆ ಸೂಚಿಸಿದರು. ದನದ ಕೊಟ್ಟಿಗೆ, ಬಚ್ಚಲು ಗುಂಡಿ, ಕೃಷಿ ಹೊಂಡ, ಕುರಿ ಮತ್ತು ಕೋಳಿಗಳ ಶೆಡ್ ನಿರ್ಮಾಣ ಸೇರಿದಂತೆ ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಕಾಮಗಾರಿಗಳಿಂದ ಹೆಚ್ಚು ಫಲಾನುಭವಿಗಳು ಲಾಭ ಪಡೆಯುವಂತೆ ಆಗಬೇಕು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಡಿಎಂಐಎಸ್ ಮಧು, ಎಡಿಪಿಸಿ ಹರೀಶ್, ತಾಂತ್ರಿಕ ಅಭಿಯಂತರ ನಾಗೇಂದ್ರ, ಇಂಜಿನಿಯರ್ ಬಾಬು, ಐಇಸಿ ಸಂಯೋಜಕ ಲೋಕೇಶ್ ಮತ್ತು ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಭಾಗವಹಿಸಿದ್ದರು.