Sidlaghatta : ಶಿಡ್ಲಘಟ್ಟ ತಾಲ್ಲೂಕಿನ ತಿಮ್ಮನಾಯಕನಹಳ್ಳಿ ಮತ್ತು ಆನೆಮಡುಗು ನಡುವೆ ಇರುವ ಶ್ರೀ ಅಗ್ರಹಾರ ಆಂಜನೇಯಸ್ವಾಮಿ ಮತ್ತು ಶ್ರೀ ಕೋದಂಡರಾಮಸ್ವಾಮಿ ಶ್ರೀಮತ್ಕಲ್ಯಾಣ ಬ್ರಹ್ಮರಥೋತ್ಸವವನ್ನು ಗುರುವಾರ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ತಹಶೀಲ್ದಾರ್ ಗಗನಸಿಂಧು ಮತ್ತು ಶಾಸಕ ಬಿ.ಎನ್.ರವಿಕುಮಾರ್ ರಥೋತ್ಸವಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಬಿ.ಎನ್.ರವಿಕುಮಾರ್, “ಪುರಾಣ ಪ್ರಸಿದ್ಧವಾದ ಶ್ರೀ ಅಗ್ರಹಾರ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ತಾಲ್ಲೂಕು ಆಡಳಿತ ಮತ್ತು ಶಾಸಕರ ಅನುದಾನದ ಮೂಲಕ ಸಹಕಾರ ನೀಡಲಾಗುವುದು” ಎಂದು ಹೇಳಿದರು.
ತಾಲ್ಲೂಕಿನ ಉತ್ತರ ದಿಕ್ಕಿನಲ್ಲಿ ಪಾಪಾಗ್ನಿ ನದಿ ತಟ್ಟದಲ್ಲಿ ನೆಲೆಸಿರುವ ಈ ಅಗ್ರಹಾರ ಆಂಜನೇಯಸ್ವಾಮಿ ದೇವಾಲಯದ ರಥೋತ್ಸವವು ಕಳೆದ ಕೆಲವು ವರ್ಷಗಳಿಂದ ನಡೆಯುತ್ತಿದ್ದು ನೆರೆಯ ಹಲವು ಗ್ರಾಮಗಳ ನೂರಾರು ಭಕ್ತರು ಸ್ವಾಮಿಯ ಪೂಜಾ ಕಾರ್ಯಕ್ಕೆ ಸಾಕ್ಷಿಯಾದರು.
ಭಕ್ತರು ಹಾಗೂ ದಾನಿಗಳ ನೆರವಿನಿಂದ ತೇರನ್ನು ನಿರ್ಮಿಸಿದ್ದು ಅದರಲ್ಲಿ ರಥೋತ್ಸವ ನಡೆಯಿತು. ಹೂಗಳಿಂದ ಅಲಂಕೃತವಾದ ತೇರಿನಲ್ಲಿ ಶ್ರೀಕೋದಂಡರಾಮ, ಸೀತೆ, ಲಕ್ಷ್ಮಣ ಸಮೇತ ಆಂಜನೇಯಸ್ವಾಮಿಯ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ನೆರೆದ ಭಕ್ತರೆಲ್ಲರೂ ತೇರಿನ ಹಗ್ಗವನ್ನು ಹಿಡಿದೆಳೆದು ಸ್ವಾಮಿಗೆ ಉಘೆ ಉಘೆ ಎಂದು ದೇವರ ನಾಮ ಸ್ಮರಣೆಯೊಂದಿಗೆ ತೇರನ್ನು ದೇವಾಲಯದ ಸುತ್ತಲೂ ಪ್ರದಕ್ಷಿಣೆ ಹಾಕಿಸಿದರು.
ತೇರಿನ ನಂತರ ದೇವಾಲಯದ ಆವರಣದಲ್ಲಿ ಮನ ರಂಜನಾ ಉಟ್ಟು ಮಹೋತ್ಸವ ನಡೆಯಿತು, ದೇವಸ್ಥಾನದ ಸಂಚಾಲಕ ರಾಮಲಿಂಗಾರೆಡ್ಡಿ, ತಿಮ್ಮನಾಯಕನಹಳ್ಳಿ ರಮೇಶ್, ಬಚ್ಚರೆಡ್ಡಿ, ಶಿವಕುಮಾರ್ ಬಾವರೆಡ್ಡಿ, ಮುನಿಯಪ್ಪ, ಮುರಳಿ, ಮಂಜುನಾಥ್, ದೇವರಾಜ್, ಆಗಮಿಕ ವಿ.ಎಸ್.ರಾಮಾನುಜ ಭಟ್ಟಾಚಾರ್ಯ, ಅರ್ಚಕ ವೆಂಕಟೇಶಮೂರ್ತಿ, ಆನೇಮಡುಗು, ತಿಮ್ಮನಾಯಕನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಹಾಜರಿದ್ದರು.








