ಶಿಡ್ಲಘಟ್ಟ ತಾಲ್ಲೂಕಿನ ಸರ್ಕಾರಿ ಶಾಲೆಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿರುವ ಕುಂದಲಗುರ್ಕಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಾದ ಕೆ.ವಿ.ತೇಜಸ್ (ಶೇ 96.48) ಮತ್ತು ಕೆ.ಸಿ.ಪಲ್ಲವಿ (ಶೇ 93.44) ಅವರ ಮನೆಗೆ ಗುರುವಾರ ತೆರಳಿ ಅಭಿನಂದಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಶ್ರೀನಿವಾಸ್ ಮಾತನಾಡಿದರು.
ಎಸ್ಸೆಸ್ಸೆಲ್ಸಿ ಪರೀಕ್ಷೆ ಕೊರೊನಾ ಕಾರಣದಿಂದ ನಡೆಯುತ್ತದೆಯೋ ಇಲ್ಲವೋ ಎಂಬ ಆತಂಕದಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರು ಇದ್ದರು. ಆದರೂ ಶಿಕ್ಷಣ ಇಲಾಖೆಯ ಸಾಂಘಿಕ ಪ್ರಯತ್ನದಿಂದ ಪರೀಕ್ಷೆಗಳು ಯಶಸ್ವಿಯಾಗಿ ನಡೆಯಿತಲ್ಲದೆ, ನಮ್ಮ ಜಿಲ್ಲೆ ಮೊದಲ ಸ್ಥಾನವನ್ನು ಪಡೆಯುವಂತಾಯಿತು. ನಮ್ಮ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮವಾಗಿ ಅಂಕಗಳನ್ನು ಗಳಿಸಿದ್ದಾರೆ ಎಂದು ಅವರು ತಿಳಿಸಿದರು.
ಹೆಚ್ಚು ಅಂಕ ಗಳಿಸಿರುವ ವಿದ್ಯಾರ್ಥಿಗಳು ಇತರರಿಗೆ ಪ್ರೇರಣೆಯಾಗಲಿ ಹಾಗೂ ಅವರನ್ನು ಬೆನ್ನು ತಟ್ಟಿ ಅಭಿನಂದಿಸುವ ಮೂಲಕ ಅವರು ಭವಿಷ್ಯದಲ್ಲಿ ಇನ್ನಷ್ಟು ಸಾಧನೆ ಮಾಡುವಂತಾಗಲಿ ಎಂಬುದು ಶಿಕ್ಷಣ ಇಲಾಖೆಯ ಆಶಯ. ಅದಕ್ಕಾಗಿ ಸಾಧಕ ವಿದ್ಯಾರ್ಥಿಯ ಮನೆಗೆ ತೆರಳಿ ವಿದ್ಯಾರ್ಥಿ, ಪೋಷಕರು ಹಾಗೂ ಶಿಕ್ಷಕರನ್ನು ಅಭಿನಂದಿಸುತ್ತಿರುವುದಾಗಿ ಹೇಳಿದರು.
ತಾಲ್ಲೂಕಿನ ಸರ್ಕಾರಿ ಶಾಲೆಗಳಲ್ಲಿ ಮೇಲೂರು, ಕುಂದಲಗುರ್ಕಿ, ಸಾದಲಿ ಮತ್ತು ಈ.ತಿಮ್ಮಸಂದ್ರ ಸರ್ಕಾರಿ ಪ್ರೌಢಶಾಲೆಗಳು ಹಾಗೂ ಕಿತ್ತೂರು ರಾಣಿ ಚನ್ನಮ್ಮ ಮತ್ತು ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ಶೇಕಡಾ ನೂರರಷ್ಟು ಫಲಿತಾಂಶ ದಾಖಲಿಸಿವೆ. ಇದು ಹೆಮ್ಮೆಯ ವಿಚಾರ ಎಂದರು.
ಶಿಕ್ಷಕರಾದ ಎಲ್.ವಿ.ವೆಂಕಟರೆಡ್ಡಿ, ಕೆ.ಎಂ.ರಮೇಶ್ ಕುಮಾರ್, ವಿ.ಮಂಜುನಾಥ್, ಕೆ.ಎ.ಮೋಹನ್, ಗ್ರಾಮದ ವೀರಣ್ಣ, ಚಂದ್ರಶೇಖರ್, ಕೆ.ಮುನಿಯಪ್ಪ, ಮುನಿರಾಜು, ಪ್ರಸನ್ನ ಹಾಜರಿದ್ದರು.