Home News ಬೀದಿ ನಾಯಿಗಳ ದಾಳಿ – 13 ವರ್ಷದ ಬಾಲಕನಿಗೆ ತೀವ್ರ ಗಾಯ

ಬೀದಿ ನಾಯಿಗಳ ದಾಳಿ – 13 ವರ್ಷದ ಬಾಲಕನಿಗೆ ತೀವ್ರ ಗಾಯ

0
Street dogs Bite Injured 13 year old boy

Sidlaghatta : ಶಿಡ್ಲಘಟ್ಟ ನಗರದ ನೆಹರು ಕ್ರೀಡಾಂಗಣದಲ್ಲಿ ಬೀದಿ ನಾಯಿಗಳು ದಾಳಿ ನಡೆಸಿದ್ದರಿಂದಾಗಿ 13 ವರ್ಷದ ಬಾಲಕನಿಗೆ ತೀವ್ರ ಗಾಯಗಳಾಗಿವೆ. ಚರಣ್ (13) ಎಂಬ ಬಾಲಕ ಸೋಮವಾರ ಕ್ರೀಡಾಂಗಣದಲ್ಲಿ ಆಟವಾಡುತ್ತಿದ್ದಾಗ, ಇದ್ದಕ್ಕಿದ್ದಂತೆ 15 ಕ್ಕೂ ಹೆಚ್ಚು ಬೀದಿ ನಾಯಿಗಳ ಹಿಂಡು ಆತನ ಮೇಲೆ ದಾಳಿ ಮಾಡಿ ಕಚ್ಚಿದೆ.

ಆಟದಲ್ಲಿ ತಲ್ಲೀನನಾಗಿದ್ದ ಬಾಲಕನ ಮೇಲೆ ಏಕಾಏಕಿ ಹಾವಳಿ ಮಾಡಿದ ನಾಯಿಗಳ ಹಿಂಡು, ಚರಣ್‌ ನ ಕಾಲು, ಕೈ ಮತ್ತು ಬೆನ್ನಿನ ಭಾಗಗಳಲ್ಲಿ ಆಳವಾದ ಗಾಯಗಳನ್ನು ಉಂಟುಮಾಡಿದೆ. ಬಾಲಕನ ಕಿರುಚಾಟ ಕೇಳಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಆಡುತ್ತಿದ್ದ ಯುವಕರು ಧಾವಿಸಿ ನಾಯಿಗಳನ್ನು ಓಡಿಸಿ ಬಾಲಕನನ್ನು ರಕ್ಷಿಸಿದ್ದಾರೆ. ತಕ್ಷಣವೇ ಗಾಯಾಳುವನ್ನು ಶಿಡ್ಲಘಟ್ಟ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲಾಗಿದ್ದು, ನಂತರ ಹೆಚ್ಚಿನ ಚಿಕಿತ್ಸೆಗೆ ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.

ಘಟನೆಯ ಮಾಹಿತಿ ತಿಳಿದ ತಕ್ಷಣ ಪೌರಾಯುಕ್ತೆ ಜಿ. ಅಮೃತ ಆಸ್ಪತ್ರೆಗೆ ಭೇಟಿ ನೀಡಿ ಬಾಲಕನ ಆರೋಗ್ಯ ವಿಚಾರಿಸಿದರು. ಬಳಿಕ ಮಾತನಾಡಿದ ಅವರು, “ನಗರದಲ್ಲಿ ನಿರ್ಬಂಧವಿಲ್ಲದೆ ಹೆಚ್ಚುತ್ತಿರುವ ಬೀದಿ ನಾಯಿಗಳ ನಿಯಂತ್ರಣಕ್ಕೆ ಈಗಾಗಲೇ ಟೆಂಡರ್ ಕರೆದಿದ್ದು, ಅತೀ ಶೀಘ್ರದಲ್ಲೇ ಕ್ರಮ ಜರುಗಿಸಲಾಗುತ್ತದೆ. ಜೊತೆಗೆ ಮಾಂಸಾಹಾರಿ ಅಂಗಡಿಗಳನ್ನು ಒಂದೇ ಪ್ರದೇಶಕ್ಕೆ ಒಗ್ಗೂಡಿಸಲು ಶಾಸಕರ ಜೊತೆ ಚರ್ಚೆ ನಡೆಯಲಿದೆ” ಎಂದು ಭರವಸೆ ನೀಡಿದರು.

ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೊಸದಿಲ್ಲ. ಕಳೆದ ಕೆಲ ತಿಂಗಳಲ್ಲೇ ಹಲವರು ಗಾಯಗೊಂಡಿದ್ದಾರೆ. ಆದರೂ ಸಮಸ್ಯೆ ಬಗೆಹರಿಯದೇ ಇರುವುದರಿಂದ ಸಾರ್ವಜನಿಕರಲ್ಲಿ ಭೀತಿ ಹೆಚ್ಚಾಗಿದೆ. ಸ್ಥಳೀಯರು ಮಾತನಾಡಿ, “ಅಧಿಕಾರಿಗಳು ಮಾತಿನ ಭರವಸೆ ನೀಡುವುದರಲ್ಲೇ ಸೀಮಿತವಾಗಿದ್ದಾರೆ. ಯಾವುದೇ ಸ್ಪಷ್ಟ ಕ್ರಮ ಗೋಚರಿಸುತ್ತಿಲ್ಲ. ಇದೇ ರೀತಿ ಮುಂದುವರೆದರೆ ಉಗ್ರ ಹೋರಾಟ ನಡೆಸುವುದು ಅನಿವಾರ್ಯ” ಎಂದು ಎಚ್ಚರಿಕೆ ನೀಡಿದ್ದಾರೆ.

ಸ್ಥಳೀಯರು ನಗರಸಭೆಯ ನಿರ್ಲಕ್ಷ್ಯ, ನಾಯಿಗಳಿಗೆ ಆಹಾರ ಒದಗಿಸುವ ಮಾಂಸ ಅಂಗಡಿಗಳ ನಿರ್ಬಂಧವಿಲ್ಲದಿರುವುದು ಮತ್ತು ನಾಯಿಗಳಿಗೆ ಸಮರ್ಪಕ ಶಸ್ತ್ರಚಿಕಿತ್ಸಾ ಕಾರ್ಯಕ್ರಮಗಳ ಕೊರತೆ ಪ್ರಮುಖ ಕಾರಣವೆಂದು ಆರೋಪಿಸುತ್ತಿದ್ದಾರೆ. ಈ ಘಟನೆ ಬಳಿಕ ನಗರದಲ್ಲಿ ಒಂದೆಡೆ ಭೀತಿ, ಆತಂಕ, ಮತ್ತೊಂದೆಡೆ ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತವಾಗಿದೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version