Sugaturu, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಸುಗುಟೂರಿನ ಕಮಲಮ್ಮ ಮತ್ತು ರಮೇಶ್ ದಂಪತಿಯ ತೋಟದಲ್ಲಿ ಅಪ್ರಕಟಿತ ಚೋಳರ ಕಾಲದ ಹಳಗನ್ನಡದ ವೀರಗಲ್ಲಿನೊಂದಿಗಿನ ಶಾಸನವನ್ನು ಶಾಸನತಜ್ಞರು ಪತ್ತೆ ಹಚ್ಚಿದ್ದಾರೆ.
ಹಿರಿಯ ಲಿಪಿ ಶಾಸನ ಸಂಶೋಧಕ ಡಾ.ಪಿ.ವಿ.ಕೃಷ್ಣಮೂರ್ತಿ, ಶಾಸನ ತಜ್ಞರಾದ ಪ್ರೊ.ಕೆ.ಆರ್.ನರಸಿಂಹನ್, ಶಶಿಧರ್ ಮತ್ತು ಡಿ.ಎನ್.ಸುದರ್ಶನರೆಡ್ಡಿ ಶನಿವಾರ ಸುಗುಟೂರಿನ ರಮೇಶ್ ಅವರ ಹಿಪ್ಪುನೇರಳೆ ಸೊಪ್ಪಿನ ತೋಟದಲ್ಲಿ ಸಂರಕ್ಷಿಸಿದ್ದ ವೀರಗಲ್ಲು ಒಳಗೊಂಡ ಶಾಸನದಲ್ಲಿನ ಪಠ್ಯವನ್ನು ಓದಿದರು.
ಹಿರಿಯ ಲಿಪಿ ಶಾಸನ ಸಂಶೋಧಕ ಡಾ.ಪಿ.ವಿ.ಕೃಷ್ಣಮೂರ್ತಿ ಅವರು ಮಾತನಾಡಿ, “ಇದು ಚೋಳರ ಕಾಲದ ಹಳಗನ್ನಡದ ಶಾಸನ. ಇದರ ಕಾಲ ಸುಮಾರು ಕ್ರಿ.ಶ. 1030. ರಾಜೇಂದ್ರ ಚೋಳನ ಹೆಸರು ಇಲ್ಲಿ ಪ್ರಸ್ತಾಪಿಸಲಾಗಿದೆ. ಆಗಿನ ಸುಗುಟೂರಿನ ಶಾಸನಗಳಲ್ಲಿ ಈ ಪ್ರಾಂತ್ಯವನ್ನು “ಅರುಮೊಳಿದೇವ ಚತುರ್ವೇದಿ ಮಂಗಲ” ವೆಂಬ ಅಗ್ರಹಾರವಾಗಿದ್ದಿತೆಂಬ ಸಂಗತಿ ತಿಳಿದುಬರುತ್ತದೆ. “ಅಗ್ರಹಾರ”ಗಳು ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ವಾಣಿಜ್ಯ ರಂಗದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕೇಂದ್ರಗಳಾಗಿದ್ದವು. ಅಯ್ಯಾವಳೆ ಐನೂರರು ಅಂದರೆ ವ್ಯಾಪಾರಿ ಸಂಘಟನೆಯವರ ಸೈನ್ಯದ ವೀರ ಹೋರಾಟವೊಂದರಲ್ಲಿ ಮಡಿದಾಗ ಅವನ ತಮ್ಮ ಈ ಕಲ್ಲನ್ನು ನೆಡಿಸಿದ್ದಾನೆ. ಆ ವೀರನ ಕುಟುಂಬಕ್ಕೆ ಸ್ವಲ್ಪ ಭೂಮಿಯನ್ನೂ ಅವನ ಮಾಲೀಕರು ನೀಡಿರುವ ಸಂಗತಿಯು ತಿಳಿದುಬರುತ್ತದೆ” ಎಂದು ಹೇಳಿದರು.
ಶಾಸನ ತಜ್ಞ ಪ್ರೊ.ಕೆ.ಆರ್.ನರಸಿಂಹನ್ ಮಾತನಾಡಿ, “ಇದುವರೆವಿಗೂ ನಮಗೆ ಸುಗುಟೂರಿನಲ್ಲಿ ತಮಿಳು ಶಾಸನಗಳು ಮಾತ್ರ ಗೋಚರವಾಗಿದ್ದವು. ಆದರೆ ಇದೀಗ ಶಾಸನ ತಜ್ಞರಾದ ಶಶಿಧರ್ ಮತ್ತು ಡಿ.ಎನ್.ಸುದರ್ಶನರೆಡ್ಡಿ ಅವರು ಹಳಗನ್ನಡದ ವೀರಗಲ್ಲಿನೊಂದಿಗಿನ ಶಾಸನ ಪತ್ತೆಮಾಡಿರುವರು. ಈ ಶಾಸನ ಮಹತ್ವವಾದ ಸಂಗತಿಗಳನ್ನು ಒಳಗೊಂಡಿದೆ. ಇದು ರಾಜೇಂದ್ರ ಚೋಳನ ಕಾಲದ್ದೆಂದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಅಯ್ಯಾವಳಿಗೆ ಸಂಭಂಧಪಟ್ಟ ಸಂಗತಿಯು ಈ ಶಾಸನದಿಂದ ತಿಳಿದುಬರುತ್ತದೆ. ಅಯ್ಯಾವಳೆ ಅಂದರೆ ದೊಡ್ಡ ವ್ಯಾಪಾರ ವಹಿವಾಟಿನ ಕೇಂದ್ರ ಎಂಬುದಾಗಿದೆ. ಶಿಡ್ಲಘಟ್ಟ ತಾಲ್ಲೂಕಿನ ಈ ಭಾಗವು ಒಂದು ಸಾವಿರ ವರ್ಷಗಳ ಹಿಂದೆ ಬಹುದೊಡ್ಡ ವ್ಯಾಪಾರಿ ಕೇಂದ್ರವಾಗಿತ್ತು ಎಂಬುದು ನಮಗೆ ತಿಳಿಯುತ್ತದೆ. ಅಯ್ಯಾವಳೆಗೆ ಸೇರಿರುವಂತಹವರು ದಾನವನ್ನು ನೀಡಿರುವ ವೀರಗಲ್ಲು ಶಾಸನವಿದು. ವ್ಯಾಪಾರ ವಹಿವಾಟನ್ನು ನಡೆಸುವಾಗ ಕಳ್ಳರು, ದರೋಡೆಕೋರರೊಂದಿಗೆ ಹೋರಾಡಿ ಮಡಿದ ವೀರನ ಅದ್ಭುತವಾದ ಶಿಲ್ಪವನ್ನು ಕೆತ್ತಲಾಗಿದೆ. ಸ್ವರ್ಗಾರೋಹಣದ ಚಿತ್ರಣವನ್ನೂ ಸಹ ಕೆತ್ತನೆಯಲ್ಲಿ ಕಾಣಬಹುದಾಗಿದೆ” ಎಂದು ವಿವರಿಸಿದರು.
ಕರ್ನಾಟಕ ಜಾನಪದ ಪರಿಷತ್ ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್ ಹಾಜರಿದ್ದರು.
ಐತಿಹಾಸಿಕ ಸುಗುಟೂರು
“ಕಲೆಗೆ ಪ್ರಸಿದ್ಧವಾದ ಅರಮನೆಗಳು, ಲತಾಮಂಟಪಗಳು, ಉದ್ಯಾನವನಗಳು, ಸುಂದರ ಗದ್ದೆಗಳ ದೃಶ್ಯಾವಳಿಗಳು ಹೊಂದಿರುವ ಸುಗಟೂರಿನಲ್ಲಿ ಉದಯ ಮಾರ್ತಾಂಡ ಬ್ರಹ್ಮಮಾರಾಯ ಎಂದೇ ಪ್ರಸಿದ್ಧನಾದ ನಲ್ಲೂರಿನ ಪ್ರಭು ಕುವಲೈ ತಂತಿರನ್ ತನ್ನ ಸಹೋದರನ ನೆನಪಿಗಾಗಿ ಸೋಮೇಶ್ವರ ದೇವಾಲಯವನ್ನು ಕಟ್ಟಿಸಿದನು” ಎಂದು ನಾಡನ್ನು ಮತ್ತು ಆಳಿದ ಪ್ರಭುಗಳನ್ನು ಪ್ರಶಂಸಿಸುವ ತಮಿಳು ಶಾಸನ ಕೂಡ ಸುಗಟೂರು ಗ್ರಾಮದ ತೋಟವೊಂದರಲ್ಲಿದೆ. ವಿಶೇಷವೆಂದರೆ ಹೆಣ್ಣುಮಕ್ಕಳು ಮುಡಿಯುವ ವಿವಿಧ ರೀತಿಯ ಹೂಗಳ ವರ್ಣನೆಯನ್ನೂ ಸಹ ಈ ಶಾನದಲ್ಲಿ ಕಾಣಬಹುದಾಗಿದೆ.
ಸುಗಟೂರು ಗ್ರಾಮವು ಚೋಳರ ಕಾಲಕ್ಕಾಗಲೇ ಪ್ರಮುಖ ನೆಲೆಯಾಗಿತ್ತು ಮತ್ತು ಸಮೃದ್ಧ ವೈಭವೋಪೇತ ನಗರವಾಗಿತ್ತು ಎಂಬುದು ಈ ಶಾಸನದಿಂದ ತಿಳಿದುಬರುತ್ತದೆ. ಸುಗಟೂರು ಪಾಳೇಪಟ್ಟು ಎಂದೇ ಇತಿಹಾಸದಲ್ಲಿ ದಾಖಲಾಗಿರುವ ಈ ಪ್ರದೇಶವನ್ನು ಆಳಿದ ಸುಗಟೂರು ಪಾಳೇಗಾರರು ಕೂಡ ಐತಿಹಾಸಿಕ ಸ್ಥಾನ ಪಡೆದಿದ್ದಾರೆ. ಅವರ ಆಳ್ವಕೆಗೆ ಕೋಲಾರ, ಮುಳಬಾಗಿಲು ಹಾಗೂ ಶಿಡ್ಲಘಟ್ಟ ತಾಲ್ಲೂಕುಗಳು ಒಳಪಟ್ಟಿತ್ತು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ಹುಟ್ಟಿಗೂ ಅವರೇ ಕಾರಣರು.