Home News ಸುಗಟೂರು ಸರ್ಕಾರಿ ಶಾಲೆಯ ಬೇಸಿಗೆ ಶಿಬಿರಕ್ಕೆ ZP CEO ಡಾ.ನವೀನ್‌ ಭಟ್ ಭೇಟಿ

ಸುಗಟೂರು ಸರ್ಕಾರಿ ಶಾಲೆಯ ಬೇಸಿಗೆ ಶಿಬಿರಕ್ಕೆ ZP CEO ಡಾ.ನವೀನ್‌ ಭಟ್ ಭೇಟಿ

0
Sugaturu Government school Summer Camp

Sugaturu, sidlaghatta : ಜಿಲ್ಲೆಯಾದ್ಯಂತ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಒದಗಿಸುವುದು, ಉತ್ತಮ ಸೌಲಭ್ಯಗಳನ್ನು ಒದಗಿಸುವ ಮೂಲಕ ಸಬಲೀಕರಣ ಮಾಡುವಲ್ಲಿ ಇಲಾಖೆಯು ಸದಾ ಸನ್ನದ್ಧವಾಗಿದೆ. ಈಗಾಗಲೇ ಅನೇಕ ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮ, ದ್ವಿಭಾಷಾ ಮಾಧ್ಯಮದಲ್ಲಿ ತರಗತಿಗಳನ್ನು ನಡೆಸಲಾಗುತ್ತಿದೆ ಎಂದು ಜಿಲ್ಲಾಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ.ನವೀನ್‌ಭಟ್ ತಿಳಿಸಿದರು.

ತಾಲ್ಲೂಕಿನ ಸುಗಟೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆಯುತ್ತಿರುವ ಬೇಸಿಗೆ ಶಿಬಿರಕ್ಕೆ ಭೇಟಿ ನೀಡಿ ಮಕ್ಕಳೊಂದಿಗೆ ಸಂವಾದ ನಡೆಸಿ ಅವರು ಮಾತನಾಡಿದರು.

ಶಾಲೆಗಳಲ್ಲಿ ದಾಖಲಾತಿಯನ್ನು ಹೆಚ್ಚಿಸಿಕೊಳ್ಳಲು ಈಗಾಗಲೇ ಜಿಲ್ಲೆಯಾದ್ಯಂತ ಬೇಸಿಗೆ ಶಿಬಿರಗಳನ್ನು ನಡೆಸಲಾಗುತ್ತಿದೆ. ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಈಗ ಕೇವಲ ಮೂರು ಶಾಲೆಗಳಲ್ಲಿ ಮಾತ್ರ ಬೇಸಿಗೆ ಶಿಬಿರವನ್ನು ನಡೆಸಲಾಗುತ್ತಿದ್ದು ಇನ್ನೂ ಹೆಚ್ಚಿನ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಶೀಘ್ರವೇ ಬೇಸಿಗೆ ಶಿಬಿರಗಳನ್ನು ಆರಂಭಿಸಬೇಕು. ಇದೇ ತಿಂಗಳ 22 ರಂದು ಜಿಲ್ಲೆಯಾದ್ಯಂತ ದಾಖಲಾತಿ ಆಂದೋಲನ ಮಾಡಲಾಗುತ್ತಿದ್ದು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾತಿ ಮಾಡಿಕೊಳ್ಳಲು ಶಾಲೆಗಳಿಗೆ ಸೂಚಿಸಲಾಗಿದೆ ಎಂದರು.

ಸುಗಟೂರು ಶಾಲೆಯಲ್ಲಿನ ಭೌತಿಕ ಸೌಲಭ್ಯಗಳನ್ನು ಖುದ್ದು ವೀಕ್ಷಿಸಿ, ಶೈಕ್ಷಣಿಕ ಚಟುವಟಿಕೆಗಳೆಲ್ಲದರ ಮಾಹಿತಿ ಪಡೆದು ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ಶೈಕ್ಷಣಿಕ ವರ್ಷಾರಂಭದಿಂದಲೇ ಎಲ್‌.ಕೆ.ಜಿ, ಯು.ಕೆ.ಜಿ ಆರಂಭಿಸಲು ಅನುಮತಿ ಕೊಡಿಸುವ ಭರವಸೆ ನೀಡಿದರು. ಶಾಲೆಯಲ್ಲಿ ಉತ್ತಮ ಗುಣಮಟ್ಟದ ಆಕರ್ಷಕ ಜಿರಾಫೆ ಡೆಸ್ಕ್, ಪ್ರಯೋಗಾಲಯನ್ನು ನೋಡಿ ಸಂತಸ ವ್ಯಕ್ತಪಡಿಸಿ ಮುಂದಿನ ಶೈಕ್ಷಣಿಕ ವರ್ಷದಿಂದ ಟಿವಿ, ಇಂಟರಾಕ್ಟೀವ್ ಬೋರ್ಡ್ ಗಳ ಮೂಲಕ ಬೋಧಿಸುವ ಶಿಕ್ಷಕರಿಗೆ ಒಂದೇ ರೀತಿಯ ವೀಡಿಯೋ, ವಿಷಯ ಬೋಧನೆಗೆ ಒಂದು ಸಾಮಾನ್ಯ ವೇಳಾಪಟ್ಟಿ ತಯಾರಿಸಲಾಗುವುದು ಎಂದರು.

ಮುಖ್ಯಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ಮಾತನಾಡಿ, ಬೇಸಿಗೆ ಶಿಬಿರದ ವೇಳೆ ಮಕ್ಕಳಲ್ಲಿ ಮೌಲ್ಯಗಳು, ವ್ಯಕ್ತಿತ್ವ ನಿರ್ಮಾಣ, ದೇಶಭಕ್ತಿ, ದೇಶಾಬಿಮಾನ ಮೂಡಿಸಲು ಪೂರಕವಾದ ಅನೇಕ ಚಟುವಟಿಕೆಗಳನ್ನು ರೂಪಿಸಿಕೊಳ್ಳಲಾಗಿದೆ ಎಂದರು.

ಶಿಬಿರದಲ್ಲಿ ಪಾಲ್ಗೊಂಡಿದ್ದ ಮಕ್ಕಳೊಂದಿಗೆ ಜಿಲ್ಲಾ ಪಂಚಾಯಿತಿ ಸಿಇಒ ಡಾ.ನವೀನ್‌ ಭಟ್ ಸಂವಾದ ನಡೆಸಿದರು. ಇಂಗ್ಲೀಷ್‌ ನಲ್ಲಿ ಭಾಷಣ, ವೇದಗಣಿತದ ಲೆಕ್ಕಗಳನ್ನು ಮಾಡಿಸಿದರು. ಕರ್ನಾಟಕ ಭೂಪಟದಲ್ಲಿ ವಿವಿಧ ಸ್ಥಳಗಳನ್ನು ಗುರುತಿಸಲು ಹೇಳಿದರು. ಮಕ್ಕಳಿಗೆ ಉಚಿತ ನೋಟ್‌ ಪುಸ್ತಕ, ಮೌಲ್ಯಶಿಕ್ಷಣದ ಕಿರು ಹೊತ್ತಿಗೆ, ಕರ್ನಾಟಕ ಮ್ಯಾಪ್‌ ಗಳನ್ನು ವಿತರಿಸಲಾಯಿತು.

ನಂತರ ಗ್ರಾಮದ ವಿವಿದೆಡೆ ಯೋಜನೆಗಳನ್ನು ಪರಿಶೀಲಿಸಿದರು. ಜೆ.ವೆಂಕಟಾಪುರ ಮತ್ತು ತೈಬಾನಗರ ಶಾಲೆಗಳಲ್ಲಿ ನಡೆಯುತ್ತಿರುವ ಬೇಸಿಗೆ ಶಿಬಿರಗಳಿಗೆ ಬೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಆರ್.ಹೇಮಾವತಿ, ಕ್ಷೇತ್ರಶಿಕ್ಷಣಾಧಿಕಾರಿ ಸಿ.ಎ.ನರೇಂದ್ರಕುಮಾರ್, ಕ್ಷೇತ್ರಸಮನ್ವಯಾಧಿಕಾರಿ ಕೆ.ಎಚ್.ಪ್ರಸನ್ನಕುಮಾರ್, ಬಿ.ಆರ್‌.ಪಿ ವೇಣುಮಾಧವಿ, ಸಂಪನ್ಮೂಲ ವ್ಯಕ್ತಿ ಭರತನಾಟ್ಯ ಕಲಾವಿದೆ ಅನನ್ಯ, ಪಿಡಿಒ ಮಮತಾ, ಎಸ್‌.ಡಿ.ಎಂ.ಸಿ ಅಧ್ಯಕ್ಷ ವೆಂಕಟೇಶ್, ಗ್ರಾಮಪಂಚಾಯಿತಿ ಮಾಜಿ ಸದಸ್ಯ ಸತೀಶ್, ಶಿವಶಂಕರಪ್ಪ, ದೇವರಾಜು, ನಾರಾಯಣಸ್ವಾಮಿ, ಮುಖಂಡ ಅಶೋಕ್, ನಾಗೇಶ್‌ ಗೌಡ, ಶಿಕ್ಷಕ ಎ.ಬಿ.ನಾಗರಾಜ, ಮಧು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version