ಸರ್ಕಾರ ನಿಗಧಿಪಡಿಸಿರುವ ಮಾನದಂಡವನ್ನು ಉಲ್ಲಂಘಿಸಿ ನಿಯಮಬಾಹಿರವಾಗಿ ಪಡೆದುಕೊಂಡಿರುವ ಬಿಪಿಎಲ್ ಹಾಗೂ ಎಎವೈ ಪಡಿತರ ಚೀಟಿಗಳನ್ನು ಪಡೆದುಕೊಂಡಿರುವವರು ಜೂನ್ 30 ರೊಳಗೆ ಪಡಿತರ ಚೀಟಿತನ್ನು ಆಹಾರ ಇಲಾಖೆಗೆ ಹಿಂದಿರುಗಿಸಬೇಕು ಎಂದು ತಹಶೀಲ್ದಾರ್ ಬಿ.ಎಸ್.ರಾಜೀವ್ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು ತಾಲ್ಲೂಕಿನಾದ್ಯಂತ ನಿಯಮಬಾಹಿರವಾಗಿ ಬಿಪಿಎಲ್ ಹಾಗೂ ಎಎವೈ ಪಡಿತರ ಚೀಟಿಗಳನ್ನು ಪಡೆದುಕೊಂಡಿರುವವರನ್ನು ಗುರುತಿಸಿ ರದ್ದುಪಡಿಸುವ ಕಾರ್ಯ ಈಗಾಗಲೇ ಚಾಲ್ತಿಯಲ್ಲಿದ್ದು ಅನಧಿಕೃತವಾಗಿ ಪಡಿತರ ಚೀಟಿ ಪಡೆದುಕೊಂಡಿರುವವರು ತಾವೇ ಸ್ವಯಂಪ್ರೇರಣೆಯಿಂದ ತಮ್ಮ ಪಡಿತರ ಚೀಟಿಗಳನ್ನು ಯಾವುದೇ ದಂಡವಿಲ್ಲದೇ ಹಿಂದಿರುಗಿಸಲು ಜೂನ್ 30 ರವರೆಗೂ ಕಾಲಾವಕಾಶ ಕಲ್ಪಿಸಲಾಗಿದೆ ಎಂದಿದ್ದಾರೆ.
ಆರ್ಥಿಕವಾಗಿ ಸದೃಡರಾಗಿರುವ ಕುಟುಂಬಗಳು ಸೇರಿದಂತೆ ಸಾರಿಗೆ, ಶಿಕ್ಷಣ, ವಿದ್ಯುತ್, ರೈಲ್ವೇ, ಪೊಲೀಸ್ ಹಾಗೂ ಅಂಚೆ ಇಲಾಖೆ ಸೇರಿದಂತೆ ಸರ್ಕಾರಿ ಹಾಗೂ ಅನುದಾನಿತ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರ ಹೆಸರುಗಳನ್ನು ಹೊರತುಪಡಿಸಿ ಕುಂಟುಂಬದ ಇತರ ಸದಸ್ಯರ ಹೆಸರಿನಲ್ಲಿ ಬಿಪಿಎಲ್ ಹಾಗೂ ಎಎವೈ ಪಡಿತರ ಚೀಟಿ ಪಡೆದಿರುತ್ತಾರೆ. ಇಂತಹವರು ಕೂಡಲೇ ತಮ್ಮ ಪಡಿತರ ಚೀಟಿಗಳನ್ನು ಹಿಂದಿರುಗಿಸಬೇಕು. ಇಲ್ಲವಾದಲ್ಲಿ ಅಂತಹ ಕುಟುಂಬಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕಾನೂನು ರೀತ್ಯಾ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ್ದಾರೆ.