ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಬುಧವಾರ ಔಷಧಿ ವ್ಯಾಪಾರಿಗಳು ಹಾಗೂ ಖಾಸಗಿ ವೈದ್ಯರೊಂದಿಗಿನ ಸಭೆಯಲ್ಲಿ ತಹಶೀಲ್ದಾರ್ ರಾಜೀವ್ ಮಾತನಾಡಿದರು.
ಔಷಧಿ ವ್ಯಾಪಾರಿಗಳು ಹಾಗೂ ಖಾಸಗಿ ವೈದ್ಯರು ಕೊರೊನಾ ವಿರುದ್ಧದ ಹೋರಾಟದಲ್ಲಿ ತಾಲ್ಲೂಕು ಆಡಳಿತದೊಂದಿಗೆ ಸಹಕರಿಸಬೇಕು. ಜ್ವರ, ಕೆಮ್ಮು, ನೆಗಡಿ ಎಂದು ಬರುವ ರೋಗಿಗಳಿಗೆ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಲು ಖಾಸಗಿ ವೈದ್ಯರು ತಿಳಿಹೇಳಬೇಕು. ವೈದ್ಯರ ಚೀಟಿಯಿಲ್ಲದ ರೋಗಿಗಳಿಗೆ ಔಷಧಿಗಳನ್ನು ಅಂಗಡಿಗಳಲ್ಲಿ ಕೊಡಬಾರದು ಎಂದು ಅವರು ತಿಳಿಸಿದರು.
ಜ್ವರ, ಕೆಮ್ಮು, ನೆಗಡಿ ಎಂದು ಬರುವ ಗ್ರಾಹಕರಿಗೆ ಔಷಧಿ ಅಂಗಡಿಗಳಲ್ಲಿ ಮಾತ್ರೆಗಳನ್ನು ಕೊಡಬೇಡಿ. ವೈದ್ಯರನ್ನು ಭೇಟಿಯಾಗುವಂತೆ ಹಾಗೂ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವಂತೆ ಮನವೊಲಿಸಿ. ನಗರದಲ್ಲಿ ಕೇವಲ 16% ಮಂದಿ ಮಾತ್ರ ಲಸಿಕೆ ಹಾಕಿಸಿಕೊಂಡಿದ್ದಾರೆ. ಜನರಲ್ಲಿ ತಿಳಿವಳಿಕೆ ಮೂಡಿಸುವ ಕೆಲಸ ಹೆಚ್ಚೆಚ್ಚು ಆಗಬೇಕಿದೆ. ಒಬ್ಬರಿಂದೊಬ್ಬರಿಗೆ ಹರಡುವ ಈ ಖಾಯಿಲೆಯನ್ನು ತಡೆಗಟ್ಟಲು ಹೆಚ್ಚೆಚ್ಚು ಕೋವಿಡ್ ಪರೀಕ್ಷೆಗಳು ನಡೆಯಬೇಕು ಮತ್ತು ಲಸಿಕೆ ಹಾಕಿಸಬೇಕು ಎಂದರು.
ಸರ್ಕಲ್ ಇನ್ಸ್ ಪೆಕ್ಟರ್ ಸುರೇಶ್ ಮಾತನಾಡಿ, ಯಾವುದೇ ಔಷಧಿ ಅಂಗಡಿಗಳ ಬಳಿ ಜನರು ಗುಂಪುಗೂಡಿರುವುದಾಗಲೀ, ವೈದ್ಯರ ಚೀಟಿಯಿಲ್ಲದೇ ಮಾತ್ರೆ ಕೊಡುವುದು ಕಂಡುಬಂದಲ್ಲಿ ಅವರ ವಿರುದ್ಧ ಕ್ರಮಕೈಗೊಳ್ಳುತ್ತೇವೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ನೀವೂ ನಿಮ್ಮ ಜವಾಬ್ದಾರಿಯನ್ನು ನಿರ್ವಹಿಸಿ ಎಂದರು.
ಹಿರಿಯ ವೈದ್ಯ ಡಾ.ಡಿ.ಟಿ.ಸತ್ಯನಾರಾಯಣರಾವ್ ಮಾತನಾಡಿ, ನಾವೀಗ ಜೈವಿಕ ಯುದ್ಧವನ್ನು ಎದುರಿಸುತ್ತಿದ್ದೇವೆ. ದೇಶಕ್ಕೇ ಒದಗಿದ ಆಪತ್ತಿನ ಸಮಯದಲ್ಲಿ ಹಣ ಮಾಡುವ ದುರಾಸೆಯನ್ನು ಬಿಡಬೇಕು. ಈ ರೋಗದಿಂದ ಸಮಾಜ ಮುಕ್ತವಾಗಲು ಔಷಧಿ ವ್ಯಾಪಾರಿಗಳು ಮತ್ತು ಎಲ್ಲಾ ಖಾಸಗಿ ವೈದ್ಯರು ಸಹಕರಿಸಬೇಕು. ಜನರಲ್ಲಿ ಅರಿವು ಮೂಡಿಸಬೇಕು. ಇದೊಂದು ರೀತಿಯಲ್ಲಿ ದೇಶಸೇವೆ ಎಂದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ ಮೂರ್ತಿ ಮಾತನಾಡಿ, ತಾಲ್ಲೂಕಿನಲ್ಲಿ ನಲವತ್ತೈದು ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುತ್ತಿದ್ದು, ಜನರ ಸ್ಪಂದನೆ ಆಶಾದಾಯಕವಾಗಿಲ್ಲ. ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಿ, ಲಸಿಕೆ ಹಾಕಿಸಿಕೊಳ್ಳಲು ಪ್ರೇರೇಪಿಸಿ ಎಂದು ನುಡಿದರು.
ಈ ಸಂದರ್ಭದಲ್ಲಿ ನಗರದ ಹಲವಾರು ಖಾಸಗಿ ವೈದ್ಯರು ಹಾಗೂ ಔಷಧಿ ಅಂಗಡಿಗಳ ಮಾಲೀಕರು ಹಾಜರಿದ್ದರು.