ಸ್ವಚ್ಛಭಾರತ ಮಿಷನ್ ಅಭಿಯಾನ ಯೋಜನೆಯಡಿ ಜಿಲ್ಲೆಯ ಪ್ರತಿಯೊಂದು ತಾಲ್ಲೂಕಿನಲ್ಲಿ ಆಗಸ್ಟ್ 15 ರೊಳಗೆ ಘನತ್ಯಾಜ್ಯ ವಿಲೇವಾರಿ ಘಟಕಗಳನ್ನು ಕಾರ್ಯಾರಂಭಗೊಳಿಸಲಾಗುವುದೆಂದು ಜಿಲ್ಲಾ ಪಂಚಾಯಿತಿ ಸಿಇಓ ಫೌಝೀಯಾ ತರುನ್ನುಮ್ ತಿಳಿಸಿದರು.
ನಗರದ ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಯ ಆವರಣದಲ್ಲಿರುವ ರೇಷ್ಮೆ ರೈತರ ಉತ್ಪಾದಕರ ಕಂಪನಿಗೆ ಭೇಟಿ ನೀಡಿ ನಂತರ ಅವರು ಮಾತನಾಡಿದರು. ನಗರದ ರೀತಿಯಲ್ಲಿ ಗ್ರಾಮೀಣ ಭಾಗಗಳಲ್ಲಿಯೂ ಪ್ರತಿನಿತ್ಯ ಕಸಕಡ್ಡಿಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಿ ಒಣ ಮತ್ತು ಹಸಿಕಸವನ್ನು ಪ್ರತ್ಯೇಕಗೊಳಿಸಿ, ಅದರಿಂದ ಗೊಬ್ಬರನ್ನು ತಯಾರು ಮಾಡಲು ಯೋಜನೆಯನ್ನು ರೂಪಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಪ್ರತಿಯೊಂದು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕಗಳನ್ನು ಪ್ರಾರಂಭಿಸಲು ಯೋಜನೆಯನ್ನು ರೂಪಿಸಲಾಯಿತು. ಆದರೇ ಕೆಲವೊಂದು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸರ್ಕಾರಿ ಜಾಗ ಲಭ್ಯವಿಲ್ಲ ಹೀಗಾಗಿ ಕನಿಷ್ಠ ಮೂರು ಗ್ರಾಮ ಪಂಚಾಯಿತಿಗಳಿಗೆ ಸಮೀಪದಲ್ಲಿರುವ ಸರ್ಕಾರಿ ಜಮೀನಿನಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕವನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ. ಮುಂಬುರುವ ಆಗಸ್ಟ್ ೧೫ ಅಂತ್ಯದೊಳಗೆ ಪ್ರತಿಯೊಂದು ತಾಲ್ಲೂಕಿನಲ್ಲಿ ಘಟಕಗಳು ಕಾರ್ಯಾರಂಭಗೊಳ್ಳಲಿದೆ ಎಂದರು.
ಕೋವಿಡ್ ನಿಯಂತ್ರಿಸಲು ಸಹಕರಿಸಿ: ಜಿಲ್ಲೆಯಲ್ಲಿ ಕೊರೊನಾ ಸೋಂಕು ನಿಯಂತ್ರಿಸಲು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದೇವೆ. ಸಾರ್ವಜನಿಕರು ಸಹ ಸರ್ಕಾರದೊಂದಿಗೆ ಕೈಜೋಡಿಸಬೇಕು. ವಿನಾಕಾರಣ ಮನೆಯಿಂದ ಹೊರಬರದೇ ಸ್ವಯಂ ನಿರ್ಭಂಧಿಸಿಕೊಳ್ಳಬೇಕು. ಅಗತ್ಯವಿದ್ದಾಗ ಮಾತ್ರ ಕೈಗಳಿಗೆ ಸ್ಯಾನಿಟೈಸರ್ ಬಳಸಿಕೊಂಡು ಅಂತರವನ್ನು ಕಾಯ್ದುಕೊಳ್ಳಬೇಕು. ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಗೆ ಬರುವ ರೇಷ್ಮೆ ಬೆಳೆಗಾರರಿಗೆ ಮತ್ತು ನೂಲು ಬಿಚ್ಚಾಣಿಕೆದಾರರಿಗೆ ವ್ಯಾಪಕವಾಗಿ ಅರಿವು ಮತ್ತು ಜಾಗೃತಿ ಮೂಡಿಸಬೇಕೆಂದರು.
ಜಿಲ್ಲೆಯಲ್ಲಿ ಏಕೈಕವಾಗಿರುವ ರೇಷ್ಮೆ ರೈತ ಉತ್ಪಾದಕರ ಕಂಪನಿಗೆ ಜಮೀನು ಮಂಜೂರು ಮಾಡಲು ಮತ್ತು ರೇಷ್ಮೆ ಬೆಳೆಗಾರರಿಗೆ ಮತ್ತಷ್ಟು ಸೌಲಭ್ಯ ಕಲ್ಪಿಸಲು, ಸಾಲ ಸೌಲಭ್ಯ ಒದಗಿಸಲು ಕಂಪನಿಯ ನಿರ್ದೇಶಕರ ಮನವಿಯನ್ನು ಸ್ವೀಕರಿಸಿದ್ದೇವೆ. ಅದನ್ನು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತೇನೆ. ರೇಷ್ಮೆ ರೈತ ಉತ್ಪಾದಕರ ಕಂಪನಿಯಿಂದ ಹಿಪ್ಪುನೇರಳೆ ಸಸಿಗಳ ನರ್ಸರಿ ಮಾಡಿ, ಕಚ್ಚಾ ರೇಷ್ಮೆ ವ್ಯಾಪಾರವನ್ನು ಮಾಡಿ, ಅಗತ್ಯ ಬ್ಯಾಂಕುಗಳಿಂದ ನೆರವನ್ನು ಕೊಡಿಸುವುದಾಗಿ ಭರವಸೆ ನೀಡಿದರು.
ರೇಷ್ಮೆ ಬೆಳೆಗಾರರು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಸದುಪಯೋಗ ಮಾಡಿಕೊಂಡು ಇನ್ನೂ ಹೆಚ್ಚಿನ ರೇಷ್ಮೆಯನ್ನು ಉತ್ಪಾದಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ರೇಷ್ಮೆ ಉಪನಿರ್ದೇಶಕ ಬೈರಪ್ಪ, ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಯ ಉಪನಿರ್ದೇಶಕ ಸುಭಾಷ್ ಸಾತೇನಹಳ್ಳಿ, ರೇಷ್ಮೆ ಸಹಾಯಕ ನಿರ್ದೇಶಕರಾದ ರಾಮಕುಮಾರ್, ನರಸಿಂಹಮೂರ್ತಿ, ರಾಮಕೃಷ್ಣಪ್ಪ, ರೇಷ್ಮೆ ವಿಸ್ತರಣಾಧಿಕಾರಿ ಕಾಂತರಾಜ್, ರೇಷ್ಮೆ ರೈತ ಉತ್ಪಾದಕರ ಕಂಪನಿಯ ಅಧ್ಯಕ್ಷ ವೆಂಕಟಸ್ವಾಮಿರೆಡ್ಡಿ, ಸಿಇಓ ಜನಾರ್ಧನ್‌ಮೂರ್ತಿ, ನಿರ್ದೇಶಕರಾದ ಎಚ್.ಕೆ.ಸುರೇಶ್, ಶ್ರೀನಿವಾಸ್, ದೇವರಾಜು, ಮೊಹ್ಮದ್ ಅನ್ವರ್, ರೆಹಮಾನ್, ಅನ್ಸರ್‌ಖಾನ್ ಹಾಜರಿದ್ದರು.
- Advertisement -
- Advertisement -
- Advertisement -