ಮಾನವ ಹಕ್ಕುಗಳ ಉಲ್ಲಂಘನೆ ತಡೆಯುವುದರ ಜೊತೆ ಜೊತೆಗೆ ಸಂವಿಧಾನ ಬದ್ದವಾದ ಮೂಲಭೂತ ಹಕ್ಕುಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಜಾಗೃತಿ ಸಮಿತಿ ಪದಾಧಿಕಾರಿಗಳು ಪ್ರಾಮಾಣಿಕವಾಗಿ ಮಾಡಬೇಕು ಎಂದು ಮಾನವ ಹಕ್ಕುಗಳ ಜಾಗೃತಿ ಸಮಿತಿ ರಾಜ್ಯಾಧ್ಯಕ್ಷ ಸಮೇತನಹಳ್ಳಿ ಲಕ್ಷ್ಮಣ್ಸಿಂಗ್ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ತಾಲೂಕು ಮಾನವ ಹಕ್ಕುಗಳ ಜಾಗೃತಿ ಸಮಿತಿಯ ಪದಾಧಿಕಾರಿಗಳ ಸಭೆಯಲ್ಲಿ ನೂತನ ಅಧ್ಯಕ್ಷರ ಆಯ್ಕೆ ಮಾಡಿ ಮಾತನಾಡಿದರು.
ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ, ದಬ್ಬಾಳಿಕೆ, ಬಾಲ್ಯವಿವಾಹದಂತಹ ಪಿಡುಗುಗಳನ್ನು ತೊಲಗಿಸಿ ಉತ್ತಮ ಸಮಾಜವನ್ನು ನಿರ್ಮಾಣ ಮಾಡಬೇಕಾದಂತಹ ಹೊಣೆಗಾರಿಕೆ ಪ್ರತಿಯೊಬ್ಬ ನಾಗರೀಕರ ಮೇಲಿದೆ. ಮಾನವ ಹಕ್ಕುಗಳ ಬಗ್ಗೆ ನಾಗರೀಕರಿಗೆ ನಿಖರವಾದ ಮಾಹಿತಿಯಿಲ್ಲದ ಕಾರಣ ಮಕ್ಕಳು, ಮಹಿಳೆಯರ ಮೇಲೆ ನಿರಂತರವಾಗಿ ದೌರ್ಜನ್ಯಗಳು ನಡೆಯುತ್ತಿದ್ದು ಈ ಬಗ್ಗೆ ಜಾಗೃತಿ ಸಮಿತಿಯ ಪದಾಧಿಕಾರಿಗಳು ನಾಗರೀಕರಲ್ಲಿ ಮನವರಿಕೆ ಮಾಡಿಕೊಡುವ ಕೆಲಸ ಮಾಡಬೇಕು.
ಪ್ರತಿಯೊಂದು ಮಗುವಿಗೂ ಉತ್ತಮ ಶಿಕ್ಷಣ ಸಿಗಬೇಕು ಆಗ ಮಾತ್ರ ಸಮಾಜದಲ್ಲಿ ಪರಿವರ್ತನೆ ಕಾಣಲು ಸಾಧ್ಯ. ತಾಲೂಕು ಮಾನವ ಹಕ್ಕುಗಳ ಜಾಗೃತಿ ಸಮಿತಿಯ ಸಂಘಟನೆ ಜನಪರವಾಗಿ ಕೆಲಸ ಮಾಡಬೇಕು ಎಂದರು.
ಮಾನವ ಹಕ್ಕುಗಳ ಜಾಗೃತಿ ಸಮಿತಿ ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ ಮಾತನಾಡಿ ಮಾನವ ಹಕ್ಕುಗಳ ಜಾಗೃತಿ ಸಮಿತಿ ಪದಾಧಿಕಾರಿಗಳು ಸ್ಥಳೀಯವಾಗಿ ಇರುವ ಮೂಲಭೂತ ಸಮಸ್ಯೆಗಳು ಸೇರಿದಂತೆ ಆಡಳಿತ ಯಂತ್ರವನ್ನು ಚುರುಕೊಗೊಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು. ಯಾವುದೇ ಆಸೆ ಆಮಿಷಗಳಿಗೆ ಒಳಗಾಗಿ ಯಾರ ಮೇಲೂ ಒತ್ತಡಗಳನ್ನು ಹೇರದಂತೆ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದರು.
ತಾಲೂಕು ನೂತನ ಅಧ್ಯಕ್ಷ ವಿಜಯ್.ಎನ್. ಕಾರ್ಯದರ್ಶಿ ಸುರೇಶ್, ಯುವ ಘಟಕದ ಅಧ್ಯಕ್ಷ ರಂಜಿತ್, ಕಾರ್ಮಿಕ ವಿಭಾಗದ ಅಧ್ಯಕ್ಷ ಪ್ರದೀಪ್ (ದೀಪು) ಮತ್ತಿತರರು ಹಾಜರಿದ್ದರು.
- Advertisement -
- Advertisement -
- Advertisement -