ತಾಲ್ಲೂಕಿನ ಬಹುತೇಕ ರೈತರು ಬೆಳೆಯುವ ಹಣ್ಣು ಹಾಗು ತರಕಾರಿಯನ್ನು ಮಾರಾಟ ಮಾಡಬೇಕಾದರೆ ನೆರೆಯ ಚಿಕ್ಕಬಳ್ಳಾಪುರಕ್ಕೆ ಹೋಗಬೇಕು. ಹಾಗಾಗಿ ತಾಲ್ಲೂಕು ಕೇಂದ್ರ ಸ್ಥಾನದ ಸಮೀಪ ಎಪಿಎಂಸಿ ಮಾರುಕಟ್ಟೆ ನಿರ್ಮಾಣ ಮಾಡಲು ಸ್ಥಳ ಗುರುತಿಸಿ ಕೊಡಬೇಕು ಎಂದು ರೈತರು ಒತ್ತಾಯಿಸಿದರು.
ತಾಲ್ಲೂಕಿನ ಬೆಳ್ಳೂಟಿಯ ಶ್ರೀ ಗುಟ್ಟಾಂಜನೇಯ ಕಲ್ಯಾಣ ಮಂಟಪದಲ್ಲಿ ಜಿಲ್ಲಾಧಿಕಾರಿ ದೀಪ್ತಿ ಆದಿತ್ಯಾ ಕಾನಡೆ ಅಧ್ಯಕ್ಷತೆಯಲ್ಲಿ ಶನಿವಾರ ಏರ್ಪಡಿಸಲಾಗಿದ್ದ ರೈತರ ಕುಂದುಕೊರತೆ ಸಭೆಯಲ್ಲಿ ವಿವಿಧ ರೈತ ಮುಖಂಡರು ಮಾತನಾಡಿ ತಾಲ್ಲೂಕಿನ ರೈತರ ಸಮಸ್ಯೆಗಳನ್ನು ವಿವರಿಸಿದರು.
ತಾಲ್ಲೂಕಿನಾಧ್ಯಂತ ಇರುವ ಕೆರೆ ಒತ್ತುವರಿ ತೆರವುಗೊಳಿಸಬೇಕು. ರಾಜಕಾಲುವೆ ತೆರವು ಹಾಗು ಕೆರೆಗಳಲ್ಲಿ ಹಾಕಿರುವ ಜಾಲಿ ಮರಗಳನ್ನು ಕೂಡಲೇ ತೆರವುಗೊಳಿಸಲು ಜಿಲ್ಲಾಡಳಿತ ಹಾಗು ತಾಲ್ಲೂಕು ಆಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದರು.
ಅಕ್ರಮ ಸಕ್ರಮ ಯೋಜನೆಯಡಿ ಬೆಸ್ಕಾಂ ಇಲಾಖೆಗೆ ೧೮ ಸಾವಿರ ಹಣ ಕಟ್ಟಿ ಎರಡು ವರ್ಷವಾದರೂ ಈವರೆಗೂ ವಿದ್ಯುತ್ ಪರಿವರ್ತಕಗಳನ್ನು ನೀಡಿಲ್ಲ. ಬೇರೆ ತಾಲ್ಲೂಕುಗಳಲ್ಲಿ ದಿನಕ್ಕೆ ೬-೭ ತಾಸು ವಿದ್ಯುತ್ ನೀಡುತ್ತಾರೆ ಆದರೆ ನಮ್ಮ ತಾಲ್ಲೂಕಿನಲ್ಲಿ ಕನಿಷ್ಟ ನಾಲ್ಕು ತಾಸು ಸಹ ನೀಡುವುದಿಲ್ಲ. ಅಧಿಕಾರಿಗಳನ್ನು ಈ ಬಗ್ಗೆ ಸಂಪರ್ಕಿಸಿದರೆ ಸೌಜನ್ಯವಾಗಿ ವರ್ತಿಸುವುದಿಲ್ಲ ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.
ತಾಲ್ಲೂಕಿನ ದ್ರಾಕ್ಷಿ ಬೆಳೆಗಾರರ ನೋವು ವಿವರಿಸಲಾಗದು. ವರ್ಷವೆಲ್ಲಾ ಕಷ್ಟಪಟ್ಟು ದುಡಿದು ಬೆಳೆದ ದ್ರಾಕ್ಷಿಯನ್ನು ಮಾರಾಟ ಮಾಡಬೇಕಾದರೆ ಖಾಸಗಿಯವರ ಮೊರೆಹೋಗಬೇಕು. ಅವರು ನೀಡಿದ ಬಿಳಿ ಹಾಳೆಯನ್ನು ಇಟ್ಟುಕೊಂಡು ತಿಂಗಳುಗಟ್ಟಲೇ ಅಲೆಯಬೇಕು. ಈ ವ್ಯವಸ್ಥೆಯ ಬಗ್ಗೆ ಅಧಿಕಾರಿಗಳಿಗೆ ಗೊತ್ತಿದ್ದರೂ ಮೌನವಾಗಿರುವುದು ರೈತರಿಗೆ ಮಾಡುತ್ತಿರುವ ಅನ್ಯಾಯ ಎಂದರು.
ರೈತರು ಬೆಳೆದ ದ್ರಾಕ್ಷಿ ಖರೀದಿಸಲು ಸರ್ಕಾರದಿಂದಲೇ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲು ಮುಂದಾಗಬೇಕು.
ಪ್ರತಿನಿತ್ಯ ಲಕ್ಷಾಂತರ ರೂ ತೆರಿಗೆ ವಸೂಲಾಗುವ ನಗರದ ರೇಷ್ಮೆ ಗೂಡು ಮಾರುಕಟ್ಟೆಯಲ್ಲಿರುವ ಸಣ್ಣ ಪುಟ್ಟ ನ್ಯೂನತೆಗಳನ್ನು ಸರಿಪಡಿಸಿ ಮಾರುಕಟ್ಟೆ ಆವರಣದೊಳಗೆ ಬ್ಯಾಂಕ್ ಶಾಖೆಯೊಂದನ್ನು ನಿರ್ಮಿಸದಲ್ಲಿ ರೇಷ್ಮೆ ಬೆಳೆಗಾರರು ಸೇರಿದಂತೆ ರೀಲರ್‌ಗಳಿಗೆ ಅನುಕೂಲವಾಗುತ್ತದೆ.
ತಾಲ್ಲೂಕಿನ ಪಲಿಚೇರ್ಲು ಗ್ರಾಮದಲ್ಲಿ ನಿರ್ಮಿಸಲಾಗಿರುವ ಸಾರ್ವಜನಿಕ ಆಸ್ಪತ್ರೆ ಈವರೆಗೂ ಉದ್ಘಾಟನೆ ಭಾಗ್ಯ ಕಂಡಿಲ್ಲ. ಇನ್ನು ತಾಲ್ಲೂಕಿನ ಬಹುತೇಕ ಕಡೆ ಶುದ್ಧ ನೀರಿನ ಘಟಕಗಳನ್ನು ನಿರ್ಮಿಸಿದ್ದು ಈವರೆಗೂ ಉದ್ಘಾಟನೆಯಾಗಿಲ್ಲ.
ನಗರದ ಕೇಂದ್ರ ಸ್ಥಾನದಲ್ಲಿರುವ ತಾಲ್ಲೂಕು ಕಚೇರಿಯಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ಜಿಲ್ಲಾಡಳಿತ ಗಮನ ಹರಿಸಬೇಕು. ಬಡ ರೈತನೋರ್ವ ತಮ್ಮ ಸಣ್ಣ ಕೆಲಸವೊಂದನ್ನು ಮಾಡಿಸಿಕೊಳ್ಳಬೇಕಾದರೆ ವರ್ಷಗಟ್ಟಲೇ ಕಚೇರಿಗೆ ಅಲೆಯಬೇಕಿದೆ. ಆದರೆ ರಿಯಲ್ ಎಸ್ಟೇಟ್ ಉದ್ಯಮಿಗಳು ತಮ್ಮ ಕೆಲಸಗಳನ್ನು ಕೆಲವೇ ಕ್ಷಣಗಳಲ್ಲಿ ಮುಗಿಸಿಕೊಂಡು ಹೋಗುತ್ತಾರೆ. ದಯವಿಟ್ಟು ತಾಲೂಕು ಕಚೇರಿಯ ರೆಕಾರ್ಡ್ ರೂಂ ಸೇರಿದಂತೆ ಕಂಪ್ಯೂಟರ್ ರೂಂ ಗೆ ಸಿಸಿ ಕೆಮೆರಾ ಅಳವಡಿಸಿದಲ್ಲಿ ಅಕ್ರಮಗಳು ಕಡಿಮೆಯಾಗಬಹುದು ಎಂದರು.
ತಾಲ್ಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಮರಳು ದಂಧೆಯನ್ನು ತಡೆಗಟ್ಟುವಲ್ಲಿ ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಸಂಪೂರ್ಣ ವಿಫಲವಾಗಿದ್ದಾರೆ ಎಂಬ ರೈತರ ಮಾತಿಗೆ ಉತ್ತರಿಸಿದ ಜಿಲ್ಲಾಧಿಕಾರಿ ಜಿಲ್ಲಾದ್ಯಂತ ಅಕ್ರಮ ಮರಳು ಸಾಗಾಣಿಕೆ ತಡೆಯಲು ಈಗಾಗಲೇ ಉಪವಿಭಾಗಾಧಿಕಾರಿ ಅಧ್ಯಕ್ಷತೆಯಲ್ಲಿ ಎಲ್ಲಾ ತಾಲ್ಲೂಕುಗಳಲ್ಲಿಯೂ ಸಭೆ ಕರೆದು ಎಲ್ಲಾ ಅಧಿಕಾರಿಗಳಿಗೂ ಸೂಚಿಸಲಾಗಿದೆ. ಜಿಲ್ಲಾದ್ಯಂತ ಅಕ್ರಮ ಮರಳು ಗಣಿಗಾರಿಕೆಯನ್ನು ಸಂಪೂರ್ಣವಾಗಿ ತಡೆಗಟ್ಟಲಾಗುವುದು. ಜನರು ಮನೆ ಕಟ್ಟಿಕೊಳ್ಳಲು ಎಂ ಸ್ಯಾಂಡ್ ಬಳಸಲು ಮುಂದಾಗಬೇಕು ಎಂದರು.
ಈಗಾಗಲೇ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಿರುವ ಹಿನ್ನಲೆಯಲ್ಲಿ ಜಿಲ್ಲೆಯ ಯಾವುದೇ ರೈತರ ಕೃಷಿ ಹಾಗು ಕೃಷಿಯೇತರ ಸಾಲವನ್ನು ಬಲವಂತವಾಗಿ ವಸೂಲಿ ಮಾಡುವುದನ್ನು ಬ್ಯಾಂಕ್ ಅಧಿಕಾರಿಗಳು ಕೈ ಬಿಡಬೇಕು. ರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆ ನಿಗಧಿ ಪಡಿಸುವುದು ಸೇರಿದಂತೆ ಬೆಳೆ ಹಾನಿಯಾದ ರೈತರಿಗೆ ಎಕರೆಗೆ ೨೦ ಸಾವಿರದಂತೆ ಪರಿಹಾರ ಧನ ನೀಡಲು ಸರ್ಕಾರಕ್ಕೆ ಜಿಲ್ಲಾಡಳಿತ ಮನವರಿಕೆ ಮಾಡಿಕೊಡಬೇಕು. ತಾಲ್ಲೂಕಿನಲ್ಲಿ ರೈತ ಭವನ ನಿರ್ಮಿಸಲು ಸ್ಥಳ ಗುರುತಿಸಿಕೊಡಬೇಕು. ಒಟ್ಟಾರೆಯಾಗಿ ಅಧಿಕಾರಿಗಳು ರೈತರನ್ನು ಗೌರವಯುತವಾಗಿ ಕಾಣುವ ಮನೋಭಾವ ಬೆಳೆಸಿಕೊಂಡಲ್ಲಿ ರೈತ ದೇಶದ ಬೆನ್ನೆಲುಬು ಎಂಬ ಮಾತಿಗೆ ಅರ್ಥ ಸಿಗುತ್ತದೆ ಎಂಬುದಾಗಿ ರೈತರು ತಿಳಿಸಿದರು.
ಜಿಲ್ಲಾಧಿಕಾರಿ ದೀಪ್ತಿ ಆದಿತ್ಯ ಕಾನಡೆ ಮಾತನಾಡಿ, ‘ಸರ್ಕಾರದ ಆಧೇಶದ ಪ್ರಕಾರ ಹೋಬಳಿಗೊಂದರಂತೆ ಮೇವು ಬ್ಯಾಂಕ್ ನಿರ್ಮಿಸಿ ರೈತರಿಗೆ ಒಣ ಮೇವು ಪೂರೈಸಲಾಗುತ್ತಿದೆ. ಆದರೆ ಈ ಭಾಗದಲ್ಲಿ ಬಹುತೇಕ ಸೀಮೆಹಸುಗಳಿರುವುದರಿಂದ ಒಣ ಮೇವು ಅಷ್ಟಾಗಿ ಬಳಕೆಯಾಗುತ್ತಿಲ್ಲ. ಹಾಗಾಗಿ ಕೆಎಂಎಫ್ ಮತ್ತು ಪಶು ವೈದ್ಯ ಇಲಾಖೆಯ ಸಹಯೋಗದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಮೂಲಕ ಬಿತ್ತನೆ ಬೀಜ ವಿತರಿಸಲಾಗುತ್ತಿದೆ. ಇನ್ನು ತಾಲ್ಲೂಕಿನಲ್ಲಿ ಎಪಿಎಂಸಿ ಮಾರುಕಟ್ಟೆ ನಿರ್ಮಾಣ ಮಾಡಲು ಸ್ಥಳ ಗುರುತಿಸಲು ತಹಸೀಲ್ದಾರರಿಗೆ ಸೂಚಿಸಲಾಗಿದೆ. ಇನ್ನುಳಿದಂತೆ ರೈತರು ಸೂಚಿಸಿರುವ ಎಲ್ಲಾ ಸಮಸ್ಯೆಗಳನ್ನು ಆದಷ್ಟು ಬೇಗ ಪರಿಹರಿಸಲು ಸಂಬಂದಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸಿಇಓ ಜೆ.ಮಂಜುನಾಥ್, ಉಪವಿಭಾಗಾಧಿಕಾರಿ ಶಿವಸ್ವಾಮಿ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಕೆ.ಎಸ್.ಎನ್.ಭಟ್, ತಹಸೀಲ್ದಾರ್ ಎಸ್.ಅಜಿತ್‌ಕುಮಾರ್ ರೈ, ತಾಲ್ಲೂಕು ಪಂಚಾಯಿತಿ ಇಓ ವೆಂಕಟೇಶ್, ತೋಟಗಾರಿಕೆ ಉಪನಿರ್ದೇಶಕ ರಘು, ಆಹಾರ ಇಲಾಖೆಯ ಉಪನಿರ್ದೇಶಕ ನಾಗೇಂದ್ರಪ್ಪ, ರೇಷ್ಮೆ ಗೂಡು ಮಾರುಕಟ್ಟೆ ಉಪನಿರ್ದೇಶಕ ರತ್ನಯ್ಯಶೆಟ್ಟಿ, ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸುಷ್ಮಾ ಶ್ರೀನಿವಾಸ್, ತಾಲ್ಲೂಕು ಅಧ್ಯಕ್ಷರಾದ ತಾದೂರು ಮಂಜುನಾಥ್, ಎಸ್.ಎಂ.ರವಿಪ್ರಕಾಶ್, ಜೆ.ವಿ.ವೆಂಕಟಸ್ವಾಮಿ, ರೈತ ಮುಖಂಡರಾದ ಎಚ್.ಜಿ.ಗೋಪಾಲಗೌಡ, ವೀರಕೆಂಪಣ್ಣ, ಎಸ್.ಎಂ.ನಾರಾಯಣಸ್ವಾಮಿ, ಭಾಸ್ಕರರೆಡ್ಡಿ, ಎಸ್.ವೆಂಕಟೇಶ್, ಸಂತೋಷ್, ರಾಜಶೇಖರ್, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -