ಜಿಲ್ಲಾ ರೈತ ಹೋರಾಟಗಾರ ಶಿಡ್ಲಘಟ್ಟ ತಾಲ್ಲೂಕಿನ ಸೊಣ್ಣೇನಹಳ್ಳಿ ಎಸ್.ಎಂ.ನಾರಾಯಣಸ್ವಾಮಿ(76) ಮಂಗಳವಾರ ಸಂಜೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ, ಮಂಡಲ್ ಅಧ್ಯಕ್ಷರಾಗಿದ್ದ ಇವರು ಹಲವಾರು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಆಗಿದ್ದರು. ಪ್ರಗತಿ ಮಾನಸಿಕ ಅಸ್ವಸ್ಥರ ಚಿಕಿತ್ಸಾ ಕೇಂದ್ರದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ಮೃತರು ಇಬ್ಬರು ಪತ್ನಿಯರು, ಒಂದು ಗಂಡು 5 ಹೆಣ್ಣು ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಸ್ವಗ್ರಾಮ ಸೊಣ್ಣೇನಹಳ್ಳಿಯಲ್ಲಿ ಬುಧವಾರ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.
ಎಸ್.ಎಂ.ನಾರಾಯಣಸ್ವಾಮಿ ಅವರು 1987 ರಲ್ಲಿ ಕುಂದಲಗುರ್ಕಿ ಮಂಡಲ್ ಅಧ್ಯಕ್ಷರಾಗಿ, ನಂತರ ಶಿಡ್ಲಘಟ್ಟ ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷರಾಗಿ, 2002 ರಲ್ಲಿ ಚಿಕ್ಕಬಳ್ಳಾಪುರ ಎಪಿಎಮ್‌ಸಿ ಅಧ್ಯಕ್ಷರಾಗಿ, 2010 ರಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಹಾಗೂ ಕನ್ನಡಪರ ಸಂಘಟನೆಗಳು, ಹಿಂದೂಪರ ಸಂಘಟನೆಗಳಲ್ಲಿ ತೊಡಗಿಸಿಕೊಂಡು ಸಮಾಜ ಮುಖಿ ಕೆಲಸ ಮಾಡಿದ್ದರು. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗೌರವಾಧ್ಯಕ್ಷ ಹಾಗೂ ಮಾನಸಿಕ ರೋಗಿಗಳಿಗೆ ಉಚಿತ ಚಿಕಿತ್ಸೆ ಹಾಗೂ ಔಷಧಿ ನೀಡುವ ರಿಚ್ಮಂಡ್ ಫೆಲೋಶಿಪ್ ಅಧ್ಯಕ್ಷರಾಗಿ ಸಮಾಜ ಮುಖಿ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
ಅಂತ್ಯ ಸಂಸ್ಕಾರದಲ್ಲಿ ಮಾಜಿ ಲೋಕಸಭಾ ಸಚಿವ ಕೆ.ಎಚ್.ಮುನಿಯಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯ ಮುನೇಗೌಡ, ಜೆಡಿಎಸ್ ಮುಖಂಡ ಮೇಲೂರು ಬಿ.ಎನ್.ರವಿಕುಮಾರ್, ಪಿ.ಎನ್.ರಘುನಾಥರೆಡ್ಡಿ, ಕೋಚಿಮುಲ್ ನಿರ್ದೇಶಕ ಆರ್.ಶ್ರೀನಿವಾಸ್, ರೈತ ಮುಖಂಡರು ಪಾಲ್ಗೊಂಡು ಮೃತರ ಆತ್ಮಕ್ಕೆ ಶಾಂತಿಕೋರಿ ಕುಟುಂಬದವರಿಗೆ ಸಾಂತ್ವಾನ ಹೇಳಿದರು.