ಜನವರಿ, ಫೆಬ್ರುವರಿ ಮತ್ತು ಮಾರ್ಚ್ ತಿಂಗಳಲ್ಲಿ ಈ ಮರದ ತುಂಬೆಲ್ಲಾ ಬರೀ ಹಣ್ಣುಗಳೇ. ಹಳದಿ ಮತ್ತು ಕೆಂಬಣ್ಣದ ಹಣ್ಣುಗಳು ಎಲ್ಲೋ ಅಪರೂಪಕ್ಕೆಂಬತಿರುವ ಹಸಿರೆಲೆಗಳನ್ನು ಮರೆಮಾಡಿರುತ್ತವೆ. ತಾಲ್ಲೂಕಿನಲ್ಲಿ ಅಲ್ಲಲ್ಲಿ ಹರಡಿರುವ ಈ ಮರಗಳು ಪಕ್ಷಿಗಳಿಗೆ ಉಚಿತ ಭೋಜನಶಾಲೆಯಿದ್ದಂತೆ.
ಅಂದಹಾಗೆ, ಇದರ ಹೆಸರು ‘ಗೋಣಿ ಮರ’. ಸಸ್ಯ ವಿಜ್ಞಾನಿಗಳು ಇದನ್ನು ಫೈಕಸ್ ಡ್ರುಪೇಸಿಯಾ ಎಂದು ಕರೆದು ಮೊರೇಸಿ ಸಸ್ಯ ಕುಟುಂಬಕ್ಕೆ ಸೇರಿಸಿದ್ದಾರೆ. ಸುಮಾರು 25 ಮೀಟರ್ ಎತ್ತರಕ್ಕೆ ಬೆಳೆಯುವ ಈ ಮರಗಳನ್ನು ತಾಲ್ಲೂಕಿನ ಹನುಮಂತಪುರ, ಚೌಡಸಂದ್ರ, ಸಾದಲಿ, ಅಬ್ಲೂಡು ಮುಂತಾದೆಡೆ ಕಾಣಬಹುದು.
ಮಾಗಿದ ಈ ಮರದ ಹಣ್ಣುಗಳನ್ನು ಸವಿಯಲು ಪಕ್ಷಿ ಸಂಕುಲದ ಜಾತ್ರೆಯೇ ನೆರೆಯುತ್ತದೆ. ಅವುಗಳ ವೈವಿಧ್ಯಮಯ ಧ್ವನಿಯು ಎಲ್ಲೆಡೆ ಅನುರಣಿಸುತ್ತದೆ.
ಈ ಹಣ್ಣನರಸಿ ಬರುವ ಪಕ್ಷಿ-ಗಳು ಅದೆಷ್ಟೋ… ಮನಿಯಾಡಲು, ಗಿಳಿ, ಕೋಗಿಲೆ, ಕಂಚು ಕುಟಿಗ, ಹಸಿರು ಕುಟುರ, ಮೈನಾ, ಬೆಳ್ಗಣ್ಣು, ಪಿಕಳಾರಗಳು ಅಲ್ಲದೆ ಅಳಿಲೂ ಬಂದು ಈ ಹಣ್ಣುಗಳನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತವೆ.
ಈ ಹಣ್ಣು ಪಕ್ಷಿ- ಪ್ರಾಣಿಗಳ ಹೊಟ್ಟೆ ಸೇರಿ ಜಿರ್ಣಕ್ರಿಯೆ ನಡೆದಾದ ಅಲ್ಲಿಯ ಆಮ್ಲದ ಜೊತೆಗೂಡಿ ಬೀಜೋಪಚಾರ ನಡೆದು ಅವು ಹಾಕುವ ಹಿಕ್ಕೆ ನೆಲಕ್ಕೆ ಬೀಳುತ್ತದೆ. ಅದರ ಮೇಲೆ ವರುಣನ ಸಿಂಚನ. ನಂತರ ಭೂ ತಾಯಿಯ ಒಡಲಿನಿಂದ ಅದರ ವಂಶಾಭಿವೃದ್ಧಿ. ಹೀಗೆ ಮರ ಮತ್ತು ಪಕ್ಷಿ-ಪ್ರಾಣಿಗಳ ನಂಟು ಯುಗ ಯುಗಗಳಿಂದ ಸಾಗಿದೆ.
ಈ ಮರದ ಇನ್ನೊಂದು ವಿಚಿತ್ರವೆಂದರೆ, ಹಳದಿಯಿಂದ ಕೆಂಪು ವರ್ಣಕ್ಕೆ ತಿರುಗಿ ಹಣ್ಣಿನಂತೆ ಕಾಣುವ ಇವು ಹಣ್ಣಲ್ಲ, ‘ಹೈಪ್ಯಾನ್ ತೋಡಿಯಂ’ ಎಂಬ ವಿಶಿಷ್ಟ ಬಗೆಯ ಹೂಗೊಂಚಲು! ಇದರೊಳಗೆ ಗಂಡು ಹೂವು, ಹೆಣ್ಣು ಹೂವು ಹಾಗೂ ಸ್ಟರೈಲ್ಗಳೆಂಬ ಮೂರು ಬಗೆಗಳಿವೆ. ಅವುಗಳ ತುದಿಯಲ್ಲಿರುವ ಸಣ್ಣ ರಂಧ್ರದ ಮೂಲಕ ಪರಾಗಸ್ಪರ್ಶ ಕ್ರಿಯೆ ನಡೆದು, ಒಳಾವರಣದಲ್ಲಿ ಬೀಜಗಳು ಮೂಡುತ್ತವೆ.
‘ಕೇವಲ ಒಂದು ಮರ ಎಷ್ಟೊಂದು ಪ್ರಾಣಿ ಪಕ್ಷಿಗಳಿಗೆ ಆಶ್ರಯದಾತನಾಗಿ, ಆಹಾರ ಮತ್ತು ಆಮ್ಲಜನಕ ನೀಡುತ್ತದೆಂಬುದನ್ನು ಮನಗಂಡರೆ, ಅವುಗಳ ಪ್ರಾಮುಖ್ಯತೆ ತಿಳಿಯುತ್ತದೆ. ಅದಕ್ಕಾಗಿಯೇ ಪ್ರತಿಯೊಬ್ಬರೂ ಮರಗಿಡಗಳನ್ನು ನೆಟ್ಟು ಪ್ರಕೃತಿಯ ಉಸಿರಾದ ಹಸಿರನ್ನು ಕಾಪಾಡಬೇಕು’ ಎನ್ನುತ್ತಾರೆ ಹನುಮಂತಪುರದ ನಾಗಭೂಷಣ್.
– ಡಿ.ಜಿ.ಮಲ್ಲಿಕಾರ್ಜುನ
- Advertisement -
- Advertisement -
- Advertisement -
- Advertisement -