ನಮ್ಮೂರಿನ ಜುರಾಸಿಕ್ ಪಾರ್ಕ್

“ಇದಿ ಮುನಿಯಪ್ಪ ವಾಳ್ಳು ಇಲ್ಲು ಕಟ್ಟತಉಂಡೆದಂಟ್ರ… ” , “ಕಾದ್ರ ರೇಯ್, ಏಮೋ ಸ್ಮಶಾನಮು ಅನಿ ಅಂಟಾ ಉಂಡ್ರಿ…” ಬಗೆ ಬಗೆಯ ಮಾತುಗಳು ಶಿಡ್ಲಘಟ್ಟ – ಚಿಂತಾಮಣಿ ಮಾರ್ಗವಾಗಿ ಓಡಾಡುತ್ತಿದ್ದ ಜನರ ಬಾಯಲ್ಲಿ ಕೇಳಿಬರುತ್ತಿತ್ತು. ಸಮರೋಪಾದಿಯಲ್ಲಿ ರಾತ್ರಿಯ ಸೋಡಿಯಂ ವೇಪರ್ ಬೆಳಕಿನ ಅಡಿಯಲ್ಲಿ ಜೆ ಸಿ ಬಿ ಗಿಡಗಂಟಿಗಳನ್ನು, ಅರ್ಧ ಮೇಲೆ ಇನ್ನರ್ಧ ನೆಲದಡಿಯಲ್ಲಿ ಅವಿತಿದ್ದ ಬಂಡೆಗಳನ್ನು ಕಿತ್ತೊಗೆಯುವುದನ್ನು ಕಾಣುತ್ತಿದ್ದ ಜನರಿಗೆ ಇಷ್ಟು ಆತುರದಲ್ಲಿ ಏನು ಕಟ್ಟುತ್ತಿದ್ದಾರೆ ಎಂಬ ಕುತೂಹಲ, ಅದರ ಬಗ್ಗೆ ತಿಳಿಯುವ ಕಾತುರತೆ ಎರಡೂ ಸಾಮಾನ್ಯವಾಗಿತ್ತು. ಇವೆಲ್ಲದಕ್ಕೂ ಉತ್ತರವೆಂಬಂತೆ ಕೆಲವೇ ದಿನಗಳಲ್ಲಿ “ನಮ್ಮೂರಿನ ಪಾರ್ಕ್” ಪಂಪ್ ಹೌಸಿನ ಬದಿಯಲ್ಲಿ ಸಿದ್ಧವಾಗಿ ನಿಂತಿತ್ತು.
ಆಗ ತಾನೇ ಹದಗೊಂಡಿದ್ದ ಕೆಂಪು ನೆಲ, ಕಾಲು ದಾರಿಯ ಇಬ್ಬದಿಯಲ್ಲಿ ದಿನಗಳ ಹಿಂದ ನೆಟ್ಟಿದ್ದ ಚಿಗುರೆಲೆಯ ಗಿಡಗಳು, ಕಡಿಯದೆ ಹಾಗೆ ಉಳಿಸಿಕೊಂಡಿದ್ದ ಬಹು ವರ್ಷಗಳಿಂದ ಬಾವಲಿಗಳ ತಾಣವಾಗಿದ್ದ ಮರಗಳು, ಚಿಕ್ಕ ಚಿಕ್ಕ ತಿಳಿನೀರಿನ ಕೊಳಗಳು, ಕೂರಲು ಕಬ್ಬಿಣದ ಬೆಂಚು, ರಂಜನೆಗೆ ನೀರಿನ ಕಾರಂಜಿ, ಮಕ್ಕಳಿಗೆ ಜಾರು ಬಂಡೆ-ಉಯ್ಯಾಲೆಯಿದ್ದರೆ, ಭಕ್ತರಿಗೆ ನಾಗರ ಕಲ್ಲು ಗಣಪತಿ ವಿಗ್ರಹಗಳನೊಳಗೊಂಡು, ಕಬ್ಬಿಣದ ಬೇಲಿಯನ್ನು ಹೊದ್ದ “ನಮ್ಮೂರಿನ ಪಾರ್ಕ್” ಅನ್ನು ನೋಡಲು, ಮನ ತುಂಬಿಕೊಳ್ಳಲು ಜನರ ಆಗಮನ ಶುರುವಾಗಿತ್ತು.
ಬೆಳಗ್ಗಿನ ಚುಮು ಚುಮು ಚಳಿಯಲ್ಲಿ ಸ್ವೇಟರ್ ಮೇಲೆ ಶಾಲು ಹೊದ್ದು, ತಲೆಯನ್ನು ಮಂಕಿ-ಟೋಪಿ ಯಲ್ಲಿ ತೂರಿಸಿಕೊಂಡು, ಕೈಯಲ್ಲಿ ಕೋಲು ಹಿಡಿದು ಹಿರಿಯರು ಆರೋಗ್ಯ ವೃದ್ಧಿಸಿಕೊಳ್ಳಲು walking ಹೊರಟರೆ, ಮಧ್ಯಾಹ್ನದ ಊಟ ಮುಗಿಸಿ ಮಕ್ಕಳನ್ನು, ಮಡದಿಯನ್ನು ಕರೆದುಕೊಂಡು ಬರುತ್ತಿದ್ದವರು ಕೆಲವರು. ಊರಿನಿಂದ ಬರುತ್ತಿದ್ದ ತಮ್ಮ ನೆಂಟರಿಷ್ಟರನ್ನು ಕರೆತರಯುವ ಸಂಭ್ರಮ ಕೆಲವರದಾದರೆ, ಅಲ್ಲೇ ಕೂತು ಮಲಗಿ ದಣಿವಾರಿಸಿಕೊಳ್ಳುತ್ತಿದ್ದವರು ಹಲವರು. ಇನ್ನು ಯುವ ಪ್ರೇಮಿಗಳ ಕಥೆಯಂತೂ ಹೇಳುವುದೇ ಬೇಡ. ಯಾವುದೇ ಸಮಯದ ಎಗ್ಗಿಲ್ಲದೆ, ಎಲ್ಲ ಬೆಂಚುಗಳ ಮೇಲೂ ಮರಗಳ ಮೇಲೂ ತಮ್ಮ ಪ್ರೀತಿಯ ಕುರುಹನ್ನು ಕೆತ್ತುವುದರಲ್ಲಿ ಮಗ್ನರಾಗಿರುತ್ತಿದ್ದರು.
ಕೆಲವೇ ದಿನಗಳಲ್ಲಿ ಬಹುಜನರ ಇಚ್ಚೆಯ ತಾಣವಾಗಿ ನಮ್ಮೂರಿನ ಪಾರ್ಕ್ ಗುರುತಿಸಿಕೊಂಡಿತ್ತು. ಜನರೂ ಹೆಚ್ಚಿದ್ದರಿಂದ ತಳ್ಳು ಬಂಡಿಯಲ್ಲಿ ತಿಂಡಿ ತಿನಿಸುಗಳನ್ನು, ಕಾಫಿ ಟೀ ಮಾರುವವರು ಉದ್ಯಾನದ ಮುಂದೆ ತಮ್ಮ part time ವ್ಯಾಪಾರವನ್ನು ಶುರುವಿಟ್ಟುಕೊಂಡಿದ್ದರು. ಕೆಲವೇ ದಿನಗಳಲ್ಲಿ ಎಲ್ಲರನ್ನೂ ತನ್ನತ್ತ ಸೆಳೆಯುವಷ್ಟೇ ಅಲ್ಲದೆ ತನ್ನೊಳಗೆ ಹಿತವನ್ನೂ ನೀಡುವಲ್ಲಿ ನಮ್ಮೂರಿನ ಪಾರ್ಕ್ ಯಶಸ್ವಿಯಾಗಿತ್ತು. ಎಲ್ಲರ ದೈನಂದಿನ ಚಟುವಟಿಕೆಗಳಲ್ಲಿ ಯಾವುದಾದರೊಂದು ಸಮಯದ ಸಾಕ್ಷಿಯಾಗಿದ್ದ ನಮ್ಮೂರಿನ ಉದ್ಯಾನವನ ನಿಧಾನವಾಗಿ ತನ್ನ ಚೈತನ್ಯ ಕಳೆದುಕೊಳ್ಳತೊಡಗಿತು. ಅದರಲ್ಲಿ ಉದ್ಯಾನದ್ದೇನು ತಪ್ಪಿಲ್ಲವಾದರೂ ನಿರ್ವಾಹಕರ ನಿರ್ಲಕ್ಷ್ಯ ಪಾರ್ಕಿಗೆ ಅಕಾಲಿಕ ಮುಪ್ಪನ್ನು ತಂದೊಡ್ಡಿತ್ತು. ಶುಚಿಗೊಳಿಸದ ನೆಲ, ರಾಕ್ಷಸರಂತೆ ಬೆಳೆದಿದ್ದ ಗಿಡಗಳು, ಕೆಲ ಕಡೆ ಮುರಿದು ಇನ್ನು ಕೆಲ ಕಡೆ ತುಕ್ಕು ಹಿಡಿದಿದ್ದ ಕಬ್ಬಿಣದ ಬೆಂಚುಗಳು, ಸರಪಳಿಗಳು ತುಂಡಾಗಿ ಒಂದನ್ನೊಂದು ಸುತ್ತುಹಾಕಿಕೊಂಡಿದ್ದ ಜೋಕಾಲಿ, ಜಾರಿದವರು ಅಡಿ ಸೇರುವ ಮೊದಲೇ ನೆಲ ಸೇರುವಂತಿದ್ದ ಜಾರುವ ಬಂಡೆಯ ದೊಡ್ಡ ರಂದ್ರ, ಸೊಳ್ಳೆಗಳ ಸಂತಾನೋತ್ಪತ್ತಿ ಕೇಂದ್ರವಾಗಿದ್ದ ನೀರಿನ ಕೊಳಗಳು, ಯಾವುದೇ ರಂಧ್ರದಲ್ಲೂ ನೀರು ಬಾರದೆ ಕೆಟ್ಟು ಕೂತಿದ್ದ ಕಾರಂಜಿ, ಗಿಡಗಳ ಮಧ್ಯೆ ಕಳೆದು ಹೋಗಿದ್ದ ನಾಗಕಲ್ಲುಗಳು, ಇವೆಲ್ಲದಕ್ಕೂ ಸಾಕ್ಷಿಯಾಗಿ ಮರದ ಕೆಳಗೆ ಹಕ್ಕಿಯ ಹಿಕ್ಕೆಗಳನ್ನು ಹೊದ್ದು ಕೂತಿದ್ದ ಗಣಪನ ವಿಗ್ರಹ ಉದ್ಯಾನದ ಅವಸಾನವನ್ನು ಸಾರುವಂತಿತ್ತು. ಇದರ ಜೊತೆಯಲ್ಲೇ ಕೇಳಿಬಂದ ಕಳ್ಳತನ, ದರೋಡೆಯ ಸುದ್ದಿಗಳು, ಆಗಾಗ ಕಾಣಿಸುತ್ತಿದ್ದ ವಿವಿಧ ಬ್ರಾಂಡ್ನ ಖಾಲಿ ಬಾಟಲಿಗಳು ಜನರನ್ನು ಉದ್ಯಾನದಿಂದ ದೂರಮಾಡತೊಡಗಿತ್ತು. ಅದಕ್ಕೆ ಪೂರಕವಾಗಿ ನಮ್ಮೂರಿನ ಪಾರ್ಕ್ ಗೆ ಜೂರಸ್ಸಿಕ್ ಪಾರ್ಕ್ ಎಂಬ ಬಿರುದು ಜನರೇ ಕೊಟ್ಟು ಆಗಿತ್ತು.
ಈಗ ನಮ್ಮೊರಿನ ಪಾರ್ಕ್ ಪ್ರಾರಂಭವಾಗಿ ಹದಿನೈದು ವರ್ಷಗಳೇ ಕಳೆದಿದೆ. ಇತ್ತೀಚೆಗೆ ನಗರ ಸಭೆಯ ಸಿಬ್ಬಂದಿ ಉದ್ಯಾವನವನವನ್ನು ಪುನಶ್ಚೇತನಗೊಳಿಸಲು ಮುಂದಾಗಿದ್ದಾರೆ ಎಂಬ ಸುದ್ದಿ ತಿಳಿದು ಮತ್ತೆ ನೋಡಿ ಬರೋಣ ಎಂದು ಅದೇ ಶಿಡ್ಲಘಟ್ಟ – ಚಿಂತಾಮಣಿ ಮಾರ್ಗವಾಗಿ ಹೊರಟೆ. ಈಗ ರಸ್ತೆ ಅಗಲವಾಗಿ ತನ್ನ ಭುಜವನ್ನು ಪಾರ್ಕ್ ನ ಬಾಯಿಯ ಗೇಟಿಗೆ ತುರುಕಿದಂತಿದೆ. ಒಳ ನಡೆದರೆ ಗತ ಕಾಲದಂತೆ ಹಸನಾದ ನೆಲ, ಹಾದಿಯ ಬದಿಯ ಚಿಗುರೆಲೆಯ ಗಿಡಗಳು, ಹೊಸ ಹಸಿರು ಬಣ್ಣ ಬಳಿದುಕೊಂಡು ಹಸನಾಗಿರುವ ಬೆಂಚುಗಳು, ನೀರಿಲ್ಲದ ಆದರೂ ಶುಚಿಯಾದ ಕೊಳಗಳು, ಜಾರುವ ಬಂಡೆ – ಉಯ್ಯಾಲೆಯ ಜೊತೆಗೆ ಈಗ ಮಕ್ಕಳಿಗೆ ಮತ್ತಷ್ಟು ಆಡುವ ಸಲಕರಣೆಗಳು, ಹಳೆಯ ಪ್ರೇಮಿಗಳ ಕುರುಹಾಗಿ ನಿಂತಿರುವ ಮಾಗಿದ ಗಾಯಗಳ ಮರಗಳು, ಭಕ್ತರಿಗಾಗಿ ಕಾದಿರುವ ನಾಗರ ಕಲ್ಲುಗಳು, ಸುಣ್ಣ ಬಳಿದುಕೊಂಡು ಸಜ್ಜಾಗಿರುವ ಗುಡಿಗಳು, ಅದೇ ದೊಡ್ಡ ಮರದ ಅಡಿಯಲ್ಲಿ ಟಿಪ್ ಟಾಪ್ ಆಗಿ ಕುಳಿತಿರುವ ಗಣಪ.
ಹೇಳುವುದಕ್ಕೆ ಇನ್ನಿರುವುದೊಂದೇ…
ಜುರಾಸಿಕ್ ಪಾರ್ಕ ಭಾಗ ೨ ಬಿಡುಗಡೆಯಾಗಿದೆ… ಅನುಭವಿಸಿ… ಆನಂದಿಸಿ.
– ಸಂದೀಪ್ ಜಗದೀಶ್ವರ್

Tags:

Leave a Reply

Your email address will not be published. Required fields are marked *

error: Content is protected !!