ಬೆಳ್ಳಿಪರದೆಯ ಮೇಲೆ ಕಾಣುವ ಕನಸಿನ ಲೋಕದಲ್ಲಿ ವಿಹರಿಸಿ ಬರುವುದೇ ಒಂದು ಕಾಲದ ಪ್ರಮುಖ ಮನರಂಜನೆಯಾಗಿತ್ತು. ಆದ್ಯತೆಗಳು ಬದಲಾಗುತ್ತಿದ್ದಂತೆ ಜನರ ಮನರಂಜನಾ ಮೂಲವಾಗಿದ್ದ ಚಿತ್ರಮಂದಿರಗಳು ತೆರೆಮರೆಗೆ ಸರಿಯುತ್ತಿವೆ. ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಮಾಲೀಕರಿಗೆ ಸರಿಯಾದ ಆದಾಯ ತರದ ಹಿನ್ನಲೆಯಲ್ಲಿ ನಗರಗಳಲ್ಲಿ ಒಂದೊಂದೇ ಚಿತ್ರಮಂದಿರಗಳು ಬಾಗಿಲು ಮುಚ್ಚುತ್ತಿವೆ. ತಾಲ್ಲೂಕು ಕೇಂದ್ರಗಳಲ್ಲೂ ಚಿತ್ರಮಂದಿರ ಮುಚ್ಚುತ್ತಿರುವುದು ಕಾಲದ ವಿಪರ್ಯಾಸವಾಗಿದೆ.
ಶಿಡ್ಲಘಟ್ಟದ ಮೊಟ್ಟಮೊದಲ ಚಿತ್ರಮಂದಿರವಾಗಿದ್ದ ವಿಜಯಲಕ್ಷ್ಮಿ ಚಿತ್ರಮಂದಿರ ತನ್ನ ಆಟ ಮುಗಿಸಿದೆ. ಸುಮಾರು ಆರೂವರೆ ದಶಕಗಳ ಕಾಲ ತಾಲ್ಲೂಕಿನ ಜನರನ್ನು ಕನಸಿನ ಲೋಕದಲ್ಲಿ ನೆಚ್ಚಿನ ತಾರೆಯರೊಂದಿಗೆ ವಿಹರಿಸುವಂತೆ ಮಾಡಿದ್ದ ಚಿತ್ರಮಂದಿರ ಇತಿಹಾಸಕ್ಕೆ ಸೇರಿದೆ. ತಾಲ್ಲೂಕಿನ ಮೇಲೂರು, ಮಳ್ಳೂರು, ದಿಬ್ಬೂರಹಳ್ಳಿ ಮತ್ತು ಎಚ್.ಕ್ರಾಸ್‌ನಲ್ಲಿದ್ದ ಚಿತ್ರಮಂದಿರಗಳು ಈಗಾಗಲೇ ಇತಿಹಾಸ ಸೇರಿವೆ. ಟೀವಿ, ಕೇಬಲ್ ನೆಟ್‌ವರ್ಕ್, ಸೆಟಲೈಟ್ ಚಾನಲ್, ಡಿವಿಡಿ, ಮೊಬೈಲ್, ಇಂಟರ್‌ನೆಟ್ ಮುಂತಾದ ತಾಂತ್ರಿಕ ಪ್ರಗತಿಯಿಂದಾಗಿ ಈಗ ಮನೆಯಲ್ಲೇ ಕುಳಿತು, ಅಂಗೈನಲ್ಲೇ ಚಿತ್ರವನ್ನು ವೀಕ್ಷಿಸುವಂತಾಗಿದೆ. ಬದಲಾದ ಜನರ ಅಭಿರುಚಿ ಹಾಗೂ ಸಿಕ್ಕ ಅನುಕೂಲಗಳು ಚಿತ್ರಮಂದಿರದ ಅವಸಾನಕ್ಕೆ ಕಾರಣವೆನ್ನುತ್ತಾರೆ ಹಿರಿಯರು.
ಶಿಡ್ಲಘಟ್ಟದಲ್ಲಿ ಇರುವುದು ಮೂರೇ ಚಿತ್ರಮಂದಿರಗಳು. ವಿಜಯಲಕ್ಷ್ಮಿ, ಮಯೂರ ಮತ್ತು ವೆಂಕಟೇಶ್ವರ. ಪಟ್ಟಣದ ಮೊಟ್ಟ ಮೊದಲ ಚಿತ್ರಮಂದಿರ ಎಂಬ ಹೆಗ್ಗಳಿಕೆ ಹೊಂದಿದ್ದ ವಿಜಯಲಕ್ಷ್ಮಿ ಚಿತ್ರಮಂದಿರದ ಮೊದಲ ಹೆಸರು ‘ಶಂಕರ್ ಟಾಕೀಸ್’. ದೇಶಕ್ಕೆ ಸ್ವಾತಂತ್ರ್ಯ ಬಂದ ಸುಮಾರಿನಲ್ಲಿ ಎಂ.ಎಸ್. ಶಂಕರಪ್ಪ ಅದನ್ನು ಕಟ್ಟಿಸಿ ತಮ್ಮ ಹೆಸರನ್ನೇ ಇಟ್ಟಿದ್ದರು. ಅವರ ನಂತರ ಗೌಡನಹಳ್ಳಿ ಸೊಣ್ಣಪ್ಪ, ಸೀತಾರಾಮಯ್ಯ, ಆರ್.ಆರ್. ರಾಜಣ್ಣ, ದೊಡ್ಡಬಳ್ಳಾಪುರದ ವಿಶ್ವನಾಥ್ ಮುಂತಾದವರ ಕೈ ಬದಲಾಯಿಸಿತು. ಬದಲಾದ ಕಾಲಮಾನಕ್ಕೆ ತಕ್ಕಂತೆ ಚಿತ್ರಮಂದಿರವೂ ಬದಲಾಗುತ್ತಾ ಶಂಕರ್ ಟಾಕೀಸ್ ಎಂಬ ಹೆಸರು ಕೂಡ ಎಪ್ಪತ್ತರ ದಶಕದಲ್ಲಿ ಸೀತಾರಾಮಯ್ಯ ಅವರ ಮಾಲೀಕತ್ವದಲ್ಲಿ ವಿಜಯಲಕ್ಷ್ಮಿ ಚಿತ್ರಮಂದಿರ ಎಂಬ ಹೆಸರಾಯಿತು. ಚಿತ್ರಮಂದಿರದಿಂದಾಗಿ ಹತ್ತಿರದ ವೃತ್ತವನ್ನು ವಿಜಯಲಕ್ಷ್ಮಿ ವೃತ್ತವೆಂದು ಕರೆದರೆ, ಆ ರಸ್ತೆಯನ್ನು ವಿಜಯಲಕ್ಷ್ಮಿ ಟಾಕೀಸ್ ರಸ್ತೆಯೆಂದೇ ಕರೆಯುವರು.
ಮಯೂರ ಚಿತ್ರಮಂದಿರದ ಮಾಲೀಕರಾದ 85 ವರ್ಷದ ಎನ್.ವೆಂಕಟನಾರಾಯಣಯ್ಯ ಅವರು ತಮ್ಮ ಚಿತ್ರಮಂದಿರ ಕಟ್ಟುವ ಮುನ್ನ ಕೆಲ ಕಾಲ ವಿಜಯಲಕ್ಷ್ಮಿ ಚಿತ್ರಮಂದಿರದ ಮಾಲೀಕರಾಗಿದ್ದರು. ತಮ್ಮ ಕಾಲದಲ್ಲಿ ಲವಕುಶ, ಅಡವಿರಾಮುಡು, ವೇಟಗಾಡು, ಆರಾಧನಾ ಮುಂತಾದ ಚಿತ್ರಗಳು 50ಕ್ಕೂ ಹೆಚ್ಚು ದಿನಗಳು ಪ್ರದರ್ಶನಗೊಂಡಿದ್ದವು. ಜನರು ಎತ್ತಿನ ಗಾಡಿಗಳನ್ನು ಮಾಡಿಕೊಂಡು ಹಳ್ಳಿಗಳಿಂದೆಲ್ಲಾ ಬರುತ್ತಿದ್ದರು ಎಂದು ನೆನಪಿಸಿಕೊಳ್ಳುತ್ತಾರೆ.
‘ನಾನು ಆರು ವರ್ಷದ ಬಾಲಕನಿದ್ದಾಗ ವಿಜಯಲಕ್ಷ್ಮಿ ಚಿತ್ರಮಂದಿರದಲ್ಲಿ ಭಕ್ತ ಸಿರಿಯಾಳ ಚಿತ್ರವನ್ನು ಚಿತ್ರಮಂದಿರ ಭರ್ತಿಯಾಗಿದ್ದರಿಂದ ಪರದೆಯ ಮುಂದಿನ ಕಟ್ಟೆಯ ಮೇಲೆ ಕುಳಿತು ನೋಡಿದ್ದೆ. ಚಿತ್ರ ಪ್ರಾರಂಭವಾಗುವ ಮುನ್ನ ದೇವರ ಸ್ತೋತ್ರದ ಹಿನ್ನೆಲೆಯಲ್ಲಿ ನಿಧಾನವಾಗಿ ಮೇಲಕ್ಕೇರುವ ಪರದೆ ಇನ್ನೂ ನನ್ನ ಕಣ್ಣಮುಂದಿದೆ’ ಎಂದು ಶಿಕ್ಷಕ ನಾಗಭೂಷಣ್ ನೆನಪಿಸಿಕೊಂಡರೆ, ‘ನಾವು ಓದುತ್ತಿದ್ದ ಶಾಲೆಯ ಎಲ್ಲಾ ವಿದ್ಯಾರ್ಥಿಗಳನ್ನು ಕರೆದುಕೊಂಡು ಬಂದು ವಿಜಯಲಕ್ಷ್ಮಿ ಚಿತ್ರಮಂದಿರದಲ್ಲಿ ಮಕ್ಕಳರಾಜ್ಯ ಚಿತ್ರವನ್ನು ತೋರಿಸಿದ್ದರು. ಒಂದೊಂದು ಕುರ್ಚಿಯಲ್ಲಿ ಮೂವರು ಕುಳಿತು ನೋಡಿದ್ದೆವು’ ಎಂದು ಅಬ್ಲೂಡಿನ ಆರ್.ದೇವರಾಜ್ ನೆನಪಿಸಿಕೊಳ್ಳುತ್ತಾರೆ.
‘ರೈಲಿನಲ್ಲಿ ಚಿಂತಾಮಣಿ ಕಡೆಯಿಂದ ಬಂದಾಗ ಶಂಕರ್ ಟಾಕೀಸ್ ಕಂಡೊಡನೆ ನಮಗೆ ಶಿಡ್ಲಘಟ್ಟ ತಲುಪಿದೆವೆಂದು ತಿಳಿಯುತ್ತಿದ್ದೆವು. ಆಗಿನ ಹಿರಿಯರು ಶಂಕರ್ ಟಾಕೀಸ್ ಮುಂದಿದ್ದ ಚಂದ್ರಭವನ್ ಹೋಟೆಲಿನಲ್ಲಿ ಮಸಾಲೆ ದೋಸೆ ತಿಂದು ಪಿಚ್ಚರ್ ನೋಡಿ ಬರುತ್ತಿದ್ದರು. ನಾಲ್ಕಾಣೆಗೆ ಮುಂದಿನ ಬೆಂಚುಗಳು, ಐವತ್ತು ಪೈಸೆಗೆ ಹಿಂದಿನ ಸೀಟುಗಳು. ಅದಕ್ಕೂ ಹಿಂದೆ ಮಹಿಳೆಯರಿಗಾಗಿಯೇ ಮೀಸಲಿದ್ದ ಸ್ಥಳವಿತ್ತು. ಅದರ ಹಿಂದೆ ಎರಡು ಮೂರು ಖುರ್ಚಿಗಳಿದ್ದ ಬಾಲ್ಕನಿ ಬಾಕ್ಸ್‌ಗಳಿದ್ದವು. ಆಗೆಲ್ಲಾ ಜನ ಒರಟು. ಕ್ಯೂ ನಿಲ್ಲುತ್ತಿರಲಿಲ್ಲ. ಎಲ್ಲೆಂದರಲ್ಲಿ ಉಗಿಯುತ್ತಿದ್ದರು. ಶಂಕರ್ ಟಾಕೀಸ್ ಮ್ಯಾನೇಜರಾಗಿದ್ದ ಸಂಜೀವಪ್ಪ ಎಲ್ಲರನ್ನೂ ಸುಧಾರಿಸುತ್ತಿದ್ದರು. ಅವರು ಅತ್ಯಂತ ನಿಷ್ಠುರ ಹಾಗೂ ಧಾರಾಳ ವ್ಯಕ್ತಿತ್ವವುಳ್ಳವರಾಗಿದ್ದರು’ ಎಂದು ಹೇಳುತ್ತಾರೆ ಕುಚ್ಚಣ್ಣನವರ ಮುರಳೀಧರ್.
’ಈ ಚಿತ್ರಮಂದಿರದಲ್ಲಿ ಎಲ್ಲಾ ಭಾಷೆಗಳ ಚಿತ್ರಗಳನ್ನೂ ಪ್ರದರ್ಶಿಸುತ್ತಿದ್ದರು. 60 ರ ದಶಕದಲ್ಲಿ ಮಲ್ಲಿಮದುವೆ, ಸಾಕುಮಗಳು, ಕನ್ಯಾರತ್ನ ಕನ್ನಡ ಚಿತ್ರಗಳು, ಹರ್ಕ್ಯುಲಸ್ ಅನ್‌ಚೈನ್ಡ್ ಎಂಬ ಆಂಗ್ಲ ಚಿತ್ರ, ರಾಜ್‌ಕಪೂರ್, ಧಾರಾಸಿಂಗ್, ದಿಲೀಪ್‌ಕುಮಾರ್, ಮನೋಜ್‌ಕುಮಾರ್ ಅವರ ಹಿಂದಿ ಚಿತ್ರಗಳು, ಎಂ.ಜಿ.ಆರ್, ಶಿವಾಜಿಗಣೇಶನ್ ರ ತಮಿಳು, ಎನ್.ಟಿ.ಆರ್, ನಾಗೇಶ್ವರರಾವ್ ಅವರ ತೆಲುಗು ಎಲ್ಲವೂ ಮನಸ್ಸಿನಲ್ಲಿ ಹಸಿರಾಗಿವೆ. ಹಬ್ಬಗಳಿಗಾಗಿ ಹೊಸ ಚಿತ್ರಗಳು ಪ್ರದರ್ಶಿಸುತ್ತಿದ್ದರು. ಶಿವರಾತ್ರಿಯಂದು ಮಧ್ಯರಾತ್ರಿಯ ವಿಶೇಷ ಪ್ರದರ್ಶನವನ್ನು ನೋಡಿಕೊಂಡು ನಾವು ಜಾಗರಣೆ ಮುಗಿಸುತ್ತಿದ್ದೆವು. ಶಾಲಾ ವಿದ್ಯಾರ್ಥಿಗಳಿಗಾಗಿ ಮಧ್ಯಾನ್ಹದ ವೇಳೆ ಹಲವಾರು ಡಾಕ್ಯುಮೆಂಟರಿಗಳನ್ನು ತೋರಿಸುತ್ತಿದ್ದರು. ಸಂಜೆ ‘ನಮೋ ವೆಂಕಟೇಶ’ ಹಾಡು ಕೇಳಿಸಿದೊಡನೆ ಶಾಲೆಯ ಬೆಲ್ ಹೊಡೆದಂತೆ ಇನ್ನು ಅರ್ಧ ಗಂಟೆಯಲ್ಲಿ ಫಸ್ಟ್ ಶೋ ಪ್ರಾರಂಭವಾಗುತ್ತದೆಂಬುದು ಎಲ್ಲರಿಗೂ ತಿಳಿಯುತ್ತಿತ್ತು’ ಎಂದು ಅವರು ತಮ್ಮ ನೆನಪಿನ ರೀಲನ್ನು ಬಿಚ್ಚಿಟ್ಟರು.
– ಡಿ.ಜಿ.ಮಲ್ಲಿಕಾರ್ಜುನ
- Advertisement -
- Advertisement -
- Advertisement -
- Advertisement -