34.2 C
Sidlaghatta
Friday, April 19, 2024

ಬೆಟ್ಟ – ಸೀಮೆಯ ದಾಟಿ, ಭವ್ಯ ಸಾಗರದೆಡೆಗೆ

- Advertisement -
- Advertisement -

ಊರಿನುದ್ದಕ್ಕೂ ಒಂದು ಕಂಬದಿಂದಿನ್ನೊಂದು ಕಂಬಕ್ಕೆ ಕಟ್ಟಿರುತ್ತಿದ್ದ ಬಣ್ಣದ ಕಾಗದದ ತೋರಣಗಳು, ಕೆಲ ಸಮಯದ ಹಿಂದೆಯಷ್ಟೇ ನೀರು ಹಾಯ್ದು ಶುಚಿಗೊಂಡ ರಸ್ತೆಗಳು, ಪ್ರತಿ ಮನೆಯ ಮುಂಬಾಗಿಲಿನ ಮುಂದೆಯ ರಸ್ತೆಯಮೇಲೆ ಬಣ್ಣ ಬಣ್ಣದ ರಂಗೋಲೆಯಿಡುತ್ತಿದ್ದ ತಾಯಂದಿರು, ಹಿಂದಿನ ದಿನ ಪ್ರತಿ ಗಲ್ಲಿಗಳಲ್ಲಿ ತಮಟೆ ಹೊಡೆಯುವವ ಎಚ್ಚರಿಸಿದ್ದ ಸಮಯ ಇನ್ನೇನು ಹತ್ತಿರವಾಗಿ ಲಘು ಬಗೆಯಿಂದ ಹಣ್ಣು ಕಾಯಿ ಬಾಳೆಹಣ್ಣುಗಳೊಂದಿಗೆ ಮಂಗಳಾರತಿಯ ತಟ್ಟೆಯನ್ನು ಸಿದ್ಧಗೊಳಿಸುತ್ತಿದ್ದ ಹೆಣ್ಣು ಮಕ್ಕಳು. ದೂರದ ಮಂಗಳವಾದ್ಯ ಹತ್ತಿರವಾಗತೊಡಗುತ್ತಿದ್ದಂತೆ ವಿದ್ಯುತ್ ತಂತಿಗಳನ್ನು ಹಿಡಿದೆತ್ತಿದ ಕೋಲುಗಳಡಿಯಿಂದ ಸಾಗಿಬರುತ್ತಿದ್ದ ಭವ್ಯವಾಗಿ ಅಲಂಕೃತಗೊಂಡ ಬೃಹದಾಕಾರದ ರಥ. ರಥದ ಮುಂಬಾಗದ ಎರಡು ತುದಿಗಳಿಗೆ ಕಟ್ಟಿರುತ್ತಿದ್ದ ಹಗ್ಗಗಳನ್ನು ರಸ್ತೆಯ ಉದ್ದಕ್ಕೂ ಹಿಡಿದೆಳೆದು ಜಗ್ಗಿ, ಹಿರಿ-ಕಿರಿಯರೆನ್ನದೆ ಊರ ದೇವರಾದ ವೇಣುಗೋಪಾಲಸ್ವಾಮಿಯನ್ನು ಮುನ್ನೆಡೆಸಿಕೊಂಡು ಬರುತ್ತಿದ್ದ ಊರಿನ ಜನರನ್ನು ನೋಡುವುದೇ ಒಂದು ಸುಗ್ಗಿ. ಪ್ರತಿ ಮನೆಯ ಮುಂದೆ ರಥದ ಆಳೆತ್ತರದ ಚಕ್ರಗಳಿಗೆ ಅಡ್ಡ ಕೊಟ್ಟು ನಿಲಿಸಿ, ಕಾಯಿ ಹಡೆದು, ಹೂ ಸುರಿದು, ಮಂಗಳಾರತಿ ಬೆಳಗಿ, ಬಾಳೆಯ ಹಣ್ಣನ್ನು ರಥದ ಕಳಸಕ್ಕೆ ಗುರಿ ಮಾಡಿ ಎಸೆದು ತನ್ನ ಮನದ ಕಾಮನೆಯನ್ನು ದೇವರಲ್ಲಿ ಕೋರಿಕೊಂಡು ಪ್ರಸಾದ ಪಡೆಯುವುದು ಪ್ರತೀತಿ. ಪ್ರತಿ ದೇವಾಲಯಗಳಲ್ಲಿ, ಮನೆಗಳಲ್ಲಿ ವಿಶೇಷ ಪೂಜೆ, ನೆಂಟರಿಷ್ಟರಿಗೆ, ಸ್ನೇಹಿತರಿಗೆ, ನೆರೆ-ಹೊರೆಯವರಿಗೆ ಪ್ರಸಾದವನ್ನು ಹಂಚುವುದು ಆಚರಣೆ.
ಇದೇ ಊರಿನಲ್ಲಿ ಹುಟ್ಟಿ ಬೆಳೆದು, ಕಣ್ಣ ಮುಂದೆಯೇ ಬದಲಾಗುವ ಊರಿನ ಪ್ರತಿಯೊಂದು ಹಂತವನ್ನು ಗಮನಿದ್ದ ನಮಗೆ ಬಾಲ್ಯದ ನೆನಪುಗಳು ಸದಾ ಹಸಿರು. ಡಿಸೇಂಬರ್ 31 ರ ರಾತ್ರಿ ಊರಿನ ಎರಡು ಪ್ರಮುಖ ಬೀದಿಗಳಲ್ಲಿ 7 ಬಾರಿ ನಡೆದು ಕಡೆಗೊಂದು ಕಡೆ ಕುಳಿತು ನಮ್ಮ ಹಿಂದಿನ ದಿನಗಳನ್ನು, ಆ ದಿನ ರಾತ್ರಿ ಮುಂದಿನ ಹೊಸವರ್ಷದ ಮೊದಲ ದಿನಕ್ಕೆ ಅಣಿಯಾಗುತ್ತಿದ್ದ ಊರಿನ ಜನರ ಹುರುಪನ್ನು ನಮ್ಮ ಸಂಭಾಷಣೆಯಲ್ಲಿ ಸವಿಯತೊಡಗಿದ್ದೆವು.
“ನ್ಯೂ ಇಯರ್ ಸಂಭ್ರಮ ಎಷ್ಟು ಗ್ರಾಂಡ್ ಆಗಿ ಇದೆ ಅಲ್ವ ಈಗ. ನಾವು ಓದುವಾಗ ಇಷ್ಟು ಗ್ರಾಂಡ್ ಆಗಿ ಸೆಲೆಬ್ರೇಟ್ ಆಗ್ತಿರ್ಲಿಲ್ಲ ಆಲ್ವಾ ?” ನಾವು ಕುಳಿತಲ್ಲಿನಿಂದ ನಮ್ಮ ಕಣ್ಣಿಗೆ ಎಟುಕುವ ದೂರದಲ್ಲಿ ಬಣ್ಣ ಬಣ್ಣದ ಲೈಟುಗಳನ್ನು ಬೆಳಗಿಸಿಕೊಂಡು ನಿಂತಿದ್ದ ದೊಡ್ಡ ಬೇಕರಿಯಲ್ಲಿ ಸರಾಸರಿ 6 ನಿಮಿಷಕ್ಕೊಂದರಂತೆ ಖಾಲಿಯಾಗುತ್ತಿದ್ದ ಕೇಕನ್ನು ಎಣಿಸುತ್ತಿದ್ದ ನಮ್ಮ ಸ್ನೇಹಿತರ ದಂಡಿನಲ್ಲೊಬ್ಬ ಕರೆಂಟು ಬಂದೊಡನೆ ಒಮ್ಮೆಲೇ ಪುಳಕ್ಕನೆ ಹತ್ತಿದ ಬಲ್ಬಿನ ಹಾಗೆ ಕೇಳಿದ.
ಹೌದು.. ವಾರದ ಹಿಂದೆಯಿಂದಲೇ ಸ್ನೇಹಿತರೆಲ್ಲರಿಗೂ ಕೊಡಬಹುದಾದ Greeting Cardಗಳನ್ನ ಅಂಗಡಿಗಳಲ್ಲಿ ಹುಡುಕಿ, ಯಾರಿಗೆ ಯಾವುದು ಕೊಡಬೇಕೆಂದು ತೀರ್ಮಾನಿಸಿ, to, from ಜೊತೆಗೆ “Wish You Happy New Year” ಬರೆದು ಸಿದ್ಧಮಾಡಿಟ್ಟುಕೊಂಡು, 1 ನೇ ತಾರೀಖಿನ ದಿನ ಬೆಳಗೆದ್ದು, ಅಮ್ಮ ಒಗೆದು ಚೊಕ್ಕವಾಗಿಟ್ಟಿರುತ್ತಿದ್ದ ಬಟ್ಟೆಗಳನ್ನು ಧರಿಸಿ, ಶಾಲೆಗೆ ಹೋಗಿ ಕಾರ್ಡು ಕೈಗಿತ್ತು ಶುಭಾಶಯಗಳನ್ನು ತಿಳಿಸಿ, ಮೇಷ್ಟ್ರು ಪಾಠ ಮಾಡದಂತೆ ಬೋರ್ಡಿನ ತುದಿಯಿಂದ ತುದಿಯವರೆಗೂ ಚಿತ್ರಗಳನ್ನು ಬಗೆ ಬಗೆಯ ಬಣ್ಣಗಳೊಂದಿಗೆ ಗೀಚಿ, ಶಾಲೆ ಮುಗಿಯುವ ವರೆಗೂ ಪಾಠ ಒಂದನ್ನು ಬಿಟ್ಟು ಮತ್ತೆಲ್ಲವನ್ನು ಚರ್ಚಿಸಿ ಮನೆಗೆ ಹಿಂದಿರುಗಿದರೆ ಹೊಸ ವರ್ಷದ programme ಮುಗಿದಂತೆ. ಹೈ ಸ್ಕೂಲು ಮುಗಿಯುವ ಹೊತ್ತಿಗೆ ಒಂದು ಬಾರಿ ಸ್ನೇಹಿತರೆಲ್ಲರೂ ದುಡ್ಡು ಹಾಕಿ ಬೇಕರಿಯಲ್ಲಿ ಹೇಳಿ ಮಾಡಿಸಿ ಒಂದು ಕೇಕು ತಂದು ಕತ್ತರಿಸಿ ತಿಂದದ್ದು ನೆನಪಿದೆಯಾದರೂ, ಇಷ್ಟು ವೈಭವವಾಗಿ ನಾವೆಂದೂ ಆಚರಿಸಿಯೇ ಇರಲಿಲ್ಲ.
ನಾವೆಲ್ಲಾ ಒಟ್ಟಿಗೆ ಸೇರಿ ಆಚರಿಸುತ್ತಿದುದೆಂದರೆ ಊರ ದೇವರಾದ ವೇಣುಗೋಪಾಲ ಸ್ವಾಮಿಯ ರಥೋತ್ಸವ ಮತ್ತು ಶ್ರೀ ರಾಮ ನವಮಿಯ ಉಟ್ಲು ಪರಿಷೆ. ಶ್ರೀರಾಮನವಮಿಯಂದು ಎಲ್ಲರೂ ತಮ್ಮ ಮನೆಗಳಲ್ಲಿ ಪೂಜೆ ಮಾಡಿ ಹೆಸರುಬೇಳೆ, ಪಾನಕವನ್ನು ತಮ್ಮ ಬಂದುಗಳು, ಸ್ನೇಹಿತರೊಡನೆ ಹಂಚಿಕೊಳ್ಳುವುದು ವಾಡಿಕೆ. ಇದು ಮನೆಗಳಿಗೆ ಮಾತ್ರ ಸೀಮಿತವಾಗದೆ ಪ್ರತಿ ಕಚೇರಿ, ದೇವಸ್ಥಾನ, ಸಾರ್ವಜನಿಕ ಸ್ಥಳಗಳಲ್ಲಿಯೂ ಹೆಸರುಬೇಳೆ ಪಾನಕದ ಸೇವೆ ಸಂಜೆಯವರೆಗೂ ಸಾಗುತ್ತಿತ್ತು. ಇನ್ನು ಸಂಜೆಗೆ ಚಿಂತಾಮಣಿ ರಸ್ತೆಯ ಶ್ರೀ ರಾಮನ ದೇವಸ್ಥಾನದ ಮುಂದಿನ ಗರಡಿ ಮನೆಯ ಮುಂಬಾಗದಲ್ಲಿ ನೆಟ್ಟಿದ್ದ ಉಟ್ಲು ಕಂಬವ ಹತ್ತಿ ರಾಟೆಯ ಒಳಹೊಕ್ಕ ಜನರು ಅದನ್ನು ತಿರುಗಿಸಿದರೆ, ಕೆಳಗೆ ಉದ್ದನೆಯ ಕೋಲು ಹಿಡಿದು ನಿಂತವರು ತಮ್ಮೆಡೆಗೆ ತೂರಿಬರುತ್ತಿದ್ದ ನೀರನ್ನು ತಪ್ಪಿಸಿಕೊಂಡು ರಾಟೆಯ ಸಹಾಯದಿಂದ ತಿರುಗುವ ತೆಂಗಿನಕಾಯಿಗಳನ್ನು ಒಡೆಯುವುದನ್ನು ಬಹಳಷ್ಟು ಬಾರಿ ಜನರ ಸಂದಣಿಯ ಮಧ್ಯೆ ನೋಡಲಾಗದೆ ನನ್ನ ಅಪ್ಪನ ಭುಜದ ಮೇಲೆ ಕೂತು ಕಂಡದ್ದಿದೆ.
ಊರ ಜನರೆಲ್ಲರೂ ಒಂದು ಕಡೆ ಸೇರಿ ಸಂಭ್ರಮಿಸುತ್ತಿದ್ದ ಆಚರಣೆಗಳೇ ಸೊಗಸು. ಬ್ಯಾಟರಾಯನ ಗುಡಿಯ ಜಾತ್ರೆಯ ಬತಾಸು, ಕಡಲೆಪುರಿಯ ಸವಿ ಒಂದು ಕಡೆಯಾದರೆ, ಸಂಕ್ರಾಂತಿಯ ದಿನದಂದು ಎಲ್ಲರ ಮನೆಯ ಮುಂದಿನ ವಿಧವಿಧವಾದ ರಂಗೋಲಿಗಳನ್ನು ಕಂಡು, ಎತ್ತುಗಳಿಗೆ ಪೂಜೆ ಮಾಡಿ ಬೆಲ್ಲ, ಕಡಲೆಯನ್ನು ತಿನ್ನಿಸಿ, ರಾತ್ರಿಗೆ ಉಲ್ಲೂರುಪೇಟೆಯ ಭಜನೆ ಮನೆಯಿಂದ ಹೊರಡುವ ಅಲಂಕಾರಗೊಂಡ ರಾಸುಗಳ ಮೆರವಣಿಗೆಯನ್ನು ನೋಡುವ ಸಂಭ್ರಮ ಇನ್ನೊಂದು ಕಡೆ.
“Where are those days? ಎಷ್ಟು ಬದಲಾಗಿದೆ ಅಲ್ವ?” ಸ್ನೇಹಿತನೊಬ್ಬ ಸಣ್ಣ ದನಿಯಲ್ಲಿ ಆಲೋಚನೆಯನ್ನು ಪದಗಳಲ್ಲಿ ಹೊರಗೆಳೆದ. ಮೊದಲಿಗೆ ಒಬ್ಬ “ಏನು ಬದಲಾಗಿದೆ? ಇವೆಲ್ಲಾ ಈಗಲೂ ಮಾಡ್ತಾ ಇದೀವಲ್ವಾ?” ಎಂದು ತರ್ಕಕ್ಕೆ ಹೊಂದುವ ಅನಿಸಿಕೆಯನ್ನು ಹೊರಹಾಕಿದನಾದರೂ, ಇನ್ನೊಂದೇ ನಿಮಿಷದಲ್ಲಿ ಅವನಿಗೆ ಆ ಪ್ರಶ್ನೆಯ ಆಳ ಮನ ಮುಟ್ಟಿತು… “ಹೌದಲ್ವಾ. ಆಚರಣೆಗಳಿವೆ ಆದರೆ ಸಂಭ್ರವಿಲ್ಲ”.
ನಿಧಾನವಾಗಿ ನಮ್ಮ ಪ್ರಶ್ನೆ ನಾವು ಒಟ್ಟಾಗಿ ಆಚರಿಸುತ್ತಿದ್ದ ಹಬ್ಬಗಳಲ್ಲಿ ಈಗೇಕೆ ಸಂಭ್ರಮ ಕಡಿಮೆಯಾಗಿದೆ ಎನ್ನುವ ಕಡೆ ಹರಿದಿತ್ತು. ಕಾಲ ಘಟ್ಟಗಳು, ಅದರಲ್ಲಾದ ಬದಲಾವಣೆಗಳು ನಮ್ಮ ಮಾತುಕತೆಯ ತಿರುಳಾಗತೊಡಗಿತ್ತು.
ಹಿಂದೆ ಮುಂಜಾನೆ 4.30ಕ್ಕೆ ” ಗಜಮುಖನೆ ಗಣಪತಿಯೇ ನಿನಗೆ ವಂದನೆ…” ಎಂದು ಪ್ರಾರಂಭವಾಗುತ್ತಿದ್ದ ದೇವಸ್ಥಾನಗಳ ಸ್ಪೀಕರ್ಗಳು ಈಗ ಕಡಿಮೆಯಾಗಿವೆ. ಇನ್ನು ಈ ಹಾಡು ಈಗ ಗಣೇಶನ ಹಬ್ಬಕ್ಕೆ ಮಾತ್ರ ಸೀಮಿತವಾಗಿದೆ. ಮೊದಲಿನಂತೆ ಸೋಮವಾರದಿಂದ – ಭಾನುವಾರವವೆರೆಗೆ ದಿನಕ್ಕೊಂದು ದೇವರ ಸ್ಥಾನಗಳಿಗೆ ಪೂಜೆ ಸಲ್ಲಿಸುತ್ತಿದ್ದ ಜನರೂ ಕಡಿಮೆಯಾಗಿದ್ದಾರೆ. ಮುಂಜಾನೆ ಹೊತ್ತಿನಲ್ಲಿ ಒಂದು ಸ್ಪೀಕರ್ನಲ್ಲಿ ಕೇಳಿಬರುತ್ತಿದ್ದ ಅಜಾನ್ ಈಗ ಎಲ್ಲಾ ದಿಕ್ಕುಗಳಿಂದ ಕೇಳಿಬರತೊಡಗಿವೆ. ಊರಿನ ಎರಡು ತುದಿಗಳಲ್ಲಿ ಎರಡು ಚರ್ಚುಗಳಾಗಿವೆ.
ನಮಗೆಲ್ಲಾ ಓದುವ ಸಮಯದಲ್ಲಿ ನಮ್ಮ ಜಾತಿಗಳ ವೈಭವೀಕರಣದ ಅವಶ್ಯಕತೆ ಇರಲಿಲ್ಲ. ಈಗಲೂ ಯಾರು ಯಾವ ಜಾತಿಗೆ ಸೇರಿದವೆರೆಂಬ ಯೋಚನೆಯೂ ನಮ್ಮಲ್ಲಿಲ್ಲ. ನಮ್ಮ ಬಾಲ್ಯದಲ್ಲಿ ಹಿರಿಯರು ಸೋಮವಾರ ನಗರೇಶ್ವರನಿಂದ ಶನಿವಾರ ಆಂಜನೇಯಸ್ವಾಮಿಯವರೆಗೂ ದಿನಂಪ್ರತಿ ಒಬ್ಬ ದೇವರನ್ನು ಪೂಜಿಸಿ ಬರುತ್ತಿದ್ದುದರಿಂದ ನಮಗೆ ದೇವರುಗಳು ದಿನಗಳಿಗೆ ಸೀಮಿತಗೊಂಡಿದ್ದು ಅರಿವಾಗುತ್ತಿತ್ತಾದರೂ… ಜಾತಿ, ಮತ, ಕುಲದ ವಿಭಜನೆಗಳೊಂದಿಗೆ ದೇವರುಗಳು, ದೇವಸ್ಥಾನಗಳು ಹಾಗೂ ಆಚರಣೆಗಳು ಗುರುತಿಸಲ್ಪಡತೊಡಗಿದ ಅರಿವಾಗತೊಡಗಿದ್ದು ಇತ್ತೀಚೆಗಷ್ಟೇ.
ನಮ್ಮೆಲ್ಲಾ ಆಚರಣೆಗಳ ಮೂಲ ಎಲ್ಲರೊಂದಿಗೆ ಒಗ್ಗೂಡಿ, ಹಂಚಿಕೊಂಡು ಆಚರಿಸುವುದಾದರೂ ಕಾಲ ಬದಲಾದಂತೆ ಈಗ ದೇವಸ್ಥಾನಗಳ ಪರಿಚಯವೂ ಜಾತಿಗಳ ಬಣ್ಣಗಳಲ್ಲಿ ತೇಲತೊಡಗಿವೆ. ಲಿಂಗಾಯಿತರ ಬಸವಣ್ಣ ದೇವಸ್ಥಾನ, ನಗರ್ತರ ನಗರೇಶ್ವರ, ಯಾದವರ ಶ್ರೀಕೃಷ್ಣ ದೇವಸ್ಥಾನ, ಬ್ರಾಹ್ಮಣರ ರಾಯರ ಮಠ, ಬಲಿಜರು ಚಿಂತಾಮಣಿ ರಸ್ತೆಯ ಶ್ರೀರಾಮನ ಪೂಜಿಸಿದರೆ, ಶ್ರೀರಾಮನ ಭಕ್ತ ವೀರಾಂಜನೇಯ ಉಲ್ಲೂರುಪೇಟೆಯಲ್ಲಿ ಪದ್ಮಶಾಲಿಗರಿಗೆ ಸೀಮಿತ. ಇವೆಲ್ಲವುದರ ಜೊತೆಗೆ ದೇವಸ್ಥಾನಗಳಿಗೆ ರಾಜಕೀಯ ಬಣ್ಣಗಳೂ ಸೇರಿಕೊಳ್ಳುತ್ತಿರುವುದು ಇತ್ತೀಚಿನ ದಿನಗಳ ಬೆಳವಣಿಗೆ.
ಇವು ದೇವಾಲಾಯಗಳ ಕೆಲವು ಉದಾಹರಣೆಗಳಾದರೆ, ಉತ್ಸವಗಳ ಸ್ವಾರಸ್ಯವೇ ಬೇರೆ.
ವಾಸವಿ ಜಯಂತಿ ಆರ್ಯವೈಶ್ಯರು ಆಚರಿಸಿದರೆ, ಭಾವನಾ ಮಹರ್ಷಿ ಜಯಂತಿ ಪದ್ಮಶಾಲಿಗರು, ಕನಕದಾಸ ಜಯಂತಿ ಕುರುಬ ಸಮುದಾಯ, ಕೆಂಪೇಗೌಡ ಜಯಂತಿ ಒಕ್ಕಲಿಗರು, ಶಂಕರ ಜಯಂತಿ ಬ್ರಾಹ್ಮಣರು, ಬಸವ ಜಯಂತಿ ಲಿಂಗಾಯಿತರು-ನಗರ್ತರು ಆಚರಿಸುತ್ತಾರೆ. ಮೊದಲಿಗೆ ನಗರ್ತರು, ಲಿಂಗಾಯಿತರು ಕೂಡಿ ಆಚರಿಸುತ್ತಿದ್ದರಾದರೂ ಈಗ ಬಸವಣ್ಣನ ದೇವಸ್ಥಾನದಲ್ಲಿ ಲಿಂಗಾಯಿತರು, ನಗರೇಶ್ವರನ ದೇವಾಲಯದಲ್ಲಿ ನಗರ್ತರು ಒಂದೇ ಉತ್ಸವವನ್ನು ಬೇರೆ ಬೇರೆಯಾಗಿ ಆಚರಿಸುತ್ತಾರೆ. ಹೀಗೆ ಮಾನವ ಕುಲವೊಂದೇ ಎಂದು ಸಾರಿದ ಮಾಹಾನುಭಾವರನ್ನು ಜಾತಿಗೊಬ್ಬರಂತೆ ಗುರುತಿಸಿಕೊಂಡು, ಅವರ ಜಯಂತಿಯ ಆಚರಣೆಯಂದು ತಮ್ಮ ಜಾತಿಯೊಂದಿಗೆ ಗುರುತಿಸಿಕೊಂಡ ದೇವಸ್ಥಾನದ ಲೌಡ್ ಸ್ಪೀಕರ್ಗಳಲ್ಲಿ ಆ ಕುಲದ ಭಕ್ತ ಮಹಾಶಯರಲ್ಲಿ ಮಾತ್ರ ವಿನಂತಿಸಿಕೊಂಡು ಆಹ್ವಾನಿಸಿ, ಅಲ್ಲಿಗೆ ಮುಖ್ಯ ಅತಿಥಿಯಾಗಿ ಬಂದ ಪ್ರತಿಯೊಬ್ಬ ಗಣ್ಯವ್ಯಕ್ತಿಯು ತನ್ನ ಭಾಷಣದಲ್ಲಿ ” ಇವರು ಯಾವುದೇ ಒಂದು ಜನಾಂಗಕ್ಕೆ ಸಂಬಂಧಪಟ್ಟವರಲ್ಲ. ಇಂತಹ ಮಹಾನ್ ಪುರುಷರ ಜಯಂತಿಯನ್ನು ಎಲ್ಲಾ ಸಮುದಾಯದವರು ಆಚರಿಸುವಂತಾಗಬೇಕು” ಎಂದು ಉಲಿಯುತ್ತಿದ್ದರೆ, ಬದುಕು ಧನ್ಯ.
ಹೀಗಿದ್ದರೂ ಕೆಲ ಆಚರಣೆಗಳು ತಮ್ಮ ಸತ್ವವನ್ನು ಹಾಗೆಯೇ ಉಳಿಸಿಕೊಂಡು ಮುನ್ನಡೆಯುತ್ತಿವೆ. ಶ್ರೀ ರಾಮ ನವಮಿಯಂದು ಊರಿನ ಪ್ರತಿ ದಿಕ್ಕಿನಲ್ಲೂ ಪ್ರತಿ ಗುಡಿ, ಕಚೇರಿಗಳ ಜೊತೆಗೆ ಅಲ್ಲಲ್ಲಿ ಪೆಂಡಾಲುಗಳ ಅಡಿಯಲ್ಲಿ ಹೆಸರುಬೇಳೆ, ಪಾನಕದ ವಿತರಣೆಯಾಗಿ ಅದರ ಸವಿ ಪ್ರತಿಯೊಬ್ಬನ ನ್ಯಾಲಿಗೆ, ಮನಸ್ಸಿಗೂ ತಲುಪುತ್ತದೆ. ವೇಣುಗೋಪಾಲ ಸ್ವಾಮಿಯ ರಥೋತ್ಸವ, ಬ್ಯಾಟರಾಯನಗುಡಿಯ ರಥೋತ್ಸವಗಳು ಪ್ರತಿವರ್ಷ ನಡೆಯುತ್ತಿವೆಯಾದರೂ ಸಂಭ್ರಮ ಕಡಿಮೆಯಾಗಿದೆ, ಉಲ್ಲೂರುಪೇಟೆಯ ಭಜನೆಮನೆಯ ಸಂಕ್ರಾಂತಿ ಮೆರವಣಿಗೆಯಲ್ಲಿ ವರ್ಷ ಕಳೆದಂತೆ ರಾಸುಗಳ ಸಂಖ್ಯೆ ಕಡಿಮೆಯಾದರೂ ಪ್ರತೀತಿ ಮುಂದುವರೆದಿದೆ. ಪೂಜಮ್ಮ, ಕರಾಗದಮ್ಮ ದೇವರುಗಳು ಕಾಲೋಚಿತವಾಗಿ ವರ್ಷಕ್ಕೊಮ್ಮೆ ಕರಗದ ಸಮಯದಲ್ಲಿ ನೆನೆಸಿಕೊಳ್ಳಲ್ಪಡುತ್ತರಾದರೂ, ಎಲ್ಲಮ್ಮ ದೇವಿ ಕರಗದ ಜೊತೆಗೆ ವಿವಿಧ ಹಬ್ಬಗಳಿಗೆ ತಕ್ಕಂತೆ ವಿಧವಿಧವಾಗಿ ಅಲಂಕೃತಗೊಂಡು ಎಲ್ಲರಿಗೂ ದರ್ಶನ ನೀಡುತ್ತಾಳೆ. ಮುಖ್ಯ ರಸ್ತೆಯ ದ್ವಿಮುಖ ಗಣಪ ಸಂಕಷ್ಟ ಚತುರ್ಥಿಯಂದು ಎಲ್ಲರ ಸಂಕಷ್ಟವನ್ನು ಹರಸುತ್ತಾನೆ, ಕೋಟೆಯ ಆಂಜನೇಯ ನಿತ್ಯ ಸಂಜೆಯ ಪೂಜೆಯ ಜೊತೆಗೆ ಎಲ್ಲ ಹೊಸ ವಾಹನಗಳನ್ನು ಆಶೀರ್ವದಿಸುತ್ತಾನೆ, ಕಾಶಿ ವಿಶ್ವನಾಥ ಡಿಸೇಂಬರ್ – ಜನವರಿಯಲ್ಲಿ ಅಯ್ಯಪ್ಪ ಸ್ವಾಮಿ ಭಕ್ತರ ಭಜನೆಗಳಲ್ಲಿ ಮಿಂದಿರುತ್ತಾನೆ. ಗಂಗಮ್ಮ ತಾಯಿಯು ಜನರ ಎಲ್ಲಾ ಖಾಯಿಲೆಗಳನ್ನು ಕಾಲ ಕಾಲಕ್ಕೆ ಹೋಗಲಾಡಿಸುತ್ತಳಾದರೂ, ಜನರು ವರ್ಷಕ್ಕೊಂದು ಬಾರಿ ಬೇಸಿಗೆ ಮುಗಿಯುವ ವೇಳೆಗೆ ಮಳೆಯ ಆಗಮನಕ್ಕಾಗಿ ಆಗಲೇ ಮೇವಿಲ್ಲದೆ ಸೊರಗಿರುತ್ತಿದ್ದ ಪ್ರಾಣಿಗಳನ್ನು ಕಡಿದು ನೆಂಟರಿಗೆ – ಇಷ್ಟರಿಗೆ ಬಡಿಸಿ, ಜಾತ್ರೆ ಮಾಡಿ ದೇವಿಯನ್ನು ಪೂಜಿಸುತ್ತಾರೆ.
ಇನ್ನು ಜಾನುವಾರುಗಳಿಗೆ ಈ ಜಾತಿ, ಕುಲಗಳ ಭಯವಿಲ್ಲ. ದ್ಯಾವಪ್ಪನ ಗುಡಿಯ ದ್ಯಾವಪ್ಪ ತಾತ ಇಲ್ಲಿಯವರೆಗೂ ಎಲ್ಲಾ ಕುರಿ, ಮೇಕೆ, ಎತ್ತು, ಹೋರಿಗಳನ್ನು, ದೇಸಿ ಹಾಗೂ ಜೆರ್ಸಿ ತಳಿಗಳ ರಾಸುಗಳನ್ನು ಒಟ್ಟಿಗೆ ಸಲಹಿದ್ದಾನೆ.
ಹೊಸ ವರ್ಷಾಚರಣೆಗೆ ಏಕಿಷ್ಟು ಸಂಭ್ರಮ ಎಂದು ಹುಡುಕ ಹೊರಟಿದ್ದ ನಮ್ಮ ಆಲೋಚನೆಗಳು ಮಾತುಗಳಲ್ಲಿ ಬಹಳ ದೂರ ಮುಟ್ತಿತ್ತು. ಮೊದಲಿಗೆ ಇದೊಂದು ಪಾಶ್ಟಾತ್ಯ ಸಂಪ್ರದಾಯದ ಅನುಕರಣೆ ಎಂದೆನಿಸಿದರೂ.. ಅದರ ಕಾರಣವಾದರೂ ಏನು? ಇಷ್ಟೆಲ್ಲಾ ವೈಶಿಷ್ಟ್ಯಗಳು ನಮ್ಮಲ್ಲಿಯೇ ಇರಬೇಕಾದರೆ ಅನುಕರಣೆಯ ಅಥವಾ ಅದರ ಆಚರಣೆಯ ಪ್ರಮೇಯವಾದರೂ ಏನಿದ್ದೀತು? ಪ್ರಶ್ನೆಗಳ ಭಾರ ಹೆಚ್ಚು ಎನಿಸಿದರೂ, ಉತ್ತರ ಸರಳವೆನಿಸತೊಡಗಿತ್ತು.
ಮನುಷ್ಯ ಸಂಘ ಜೀವಿ. ಎಷ್ಟೋ ಕಾರಣಗಳು ಅವನನ್ನು ಸೀಮಿತಗೊಳಿಸಿದರೂ ಅವನ ಚೇತನ ಜಾತಿ, ಕುಲ, ಮತ, ಧರ್ಮ ಎಲ್ಲವುಗಳನ್ನು ದಾಟಿ ಅನ್ಯರೊಡನೆ ಬೆರೆಯುವ ಸರಳ ದಾರಿಯನ್ನು ಹುಡುಕಿಯೇಬಿಡುತ್ತದೆ.
ಚೇತನ ಹರಿವ ಜಲದಂತೆ.
ಅಡ್ಡಿಯಾದೊಡೆ ಬದಲಿ ಹರಿವುದು,
ಹೊಳ್ಳವಾದರೆ ತುಂಬಿ ಹರಿವುದು.
ಬೆಟ್ಟ – ಸೀಮೆಯ ದಾಟಿ,
ಕೊಳ – ಕೆರೆಗಳ ತುಂಬಿ,
ಝರಿಯಾಗಿ, ನದಿಯಾಗಿ ಸೇರಿಬಿಡುವುದೆನ್ನ ಗಮ್ಯವ,
ಭುವಿಯಾಚೆ ಭವ್ಯ ಸಾಗರವ.

– ಸಂದೀಪ್ ಜಗದೀಶ್ವರ್

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!