ಪ್ರತಿಯೊಂದು ನಗರ, ಊರು, ಹಳ್ಳಿಗೂ ಇತಿಹಾಸವಿರುತ್ತದೆ. ಸಾಧಕರಿರುತ್ತಾರೆ. ವಿಶೇಷ ಆಚರಣೆ, ಘಟನೆ, ಸ್ಥಳ ಹಾಗೂ ಸವಿನೆನಪುಗಳಿರುತ್ತವೆ. ಇಂಥಹ ಅಪರೂಪದ ಸಂಗತಿಗಳನ್ನು ನೆನಪಿಸಿಕೊಳ್ಳುವವರು ವಿರಳ. ಆದರೆ ತಾಲ್ಲೂಕಿನ ಮೇಲೂರು ಗ್ರಾಮದಲ್ಲಿ ಇಂಥಹ ಸಿಂಹಾವಲೋಕನವನ್ನು ನಡೆಸಲಾಗುತ್ತಿದೆ. ‘ಮೇಲೂರು ವೈಭವ’ ಎಂಬ ಹೆಸರಿನಲ್ಲಿ ಹಳೆಯ ಛಾಯಾಚಿತ್ರಗಳನ್ನು ಪ್ರದರ್ಶಿಸುವ ಮೂಲಕ ಮೇಲೂರಿನ ಎಂ.ಆರ್.ಪ್ರಭಾಕರ್, ಮೇಲೂರು ಗ್ರಾಮದ ಇತಿಹಾಸ, ಕಲೆ, ಸಾಂಸ್ಕೃತಿಕ ಪರಂಪರೆ, ಮೇಲೂರಿಗೆ ಭೇಟಿ ನೀಡಿರುವ ಗಣ್ಯರು ಮತ್ತು ಮೇಲೂರಿನ ಪ್ರಸಿದ್ಧರ ಕುರಿತಂತೆ ಜನರು ಮೆಲುಕು ಹಾಕುವಂತೆ ಮಾಡಿದ್ದಾರೆ.
ಮೇಲೂರಿನ ಸರ್ಕಾರಿ ಶಾಲಾ ಆವರಣದ ಸಮುದಾಯಭವನದಲ್ಲಿ ಶನಿವಾರ ಮತ್ತು ಭಾನುವಾರ ಎರಡು ದಿನಗಳ ಕಾಲ ಪ್ರದರ್ಶನವನ್ನು ಏರ್ಪಡಿಸಿದ್ದು, ಮೇಲೂರಿನ ಇತಿಹಾಸದ ಇಣುಕು ನೋಟದೊಂದಿಗೆ ತಾಲ್ಲೂಕಿನ ಕಪ್ಪುಬಿಳುಪಿನ ಕಾಲದ ಘಟನಾವಳಿಗಳ ಚಿತ್ರಣವನ್ನು ನೋಡಬಹುದಾಗಿದೆ.
ಮೇಲೂರಿನ ಸಾಂಸ್ಕೃತಿಕ ವೈಭವ, ನಾಟಕ, ಕಲೆ, ಭಕ್ತಿಪಂಥ, ಸಾಧಕರು, ಪ್ರಸಿದ್ಧ ವ್ಯಕ್ತಿಗಳ ಆಗಮನ, ಭಜನೆ, ಹರಿಕಥೆ ಮುಂತಾದ ಹಲವು ವಿಭಾಗಗಳನ್ನಾಗಿಸಿ ಛಾಯಾಚಿತ್ರಗಳನ್ನು ಪ್ರದರ್ಶಿಸಿದ್ದಾರೆ.
೧೯೫೨ರಲ್ಲಿ ಕಿಸಾನ್ ಸಿಲ್ಕ್ ಇಂಡಸ್ಟ್ರಿ ಎಂಬ ರೇಷ್ಮೆಯ ಕಾರ್ಖಾನೆಯನ್ನು ಉದ್ಘಾಟಿಸಲು ಆಗಮಿಸಿದ್ದ ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ, ಮೈಸೂರು ದಿವಾನರಾಗಿದ್ದ ರಾಮಸ್ವಾಮಿ ಮೊದಲಿಯಾರ್,ಮಿರ್ಜಾ ಇಸ್ಮಾಯಿಲ್, ಕೆಂಗಲ್ ಹನುಮಂತಯ್ಯ, ದೇವರಾಜ ಅರಸು, ವೀರೇಂದ್ರ ಹೆಗಡೆ, ಹರಿಕಥಾ ವಿದ್ವಾನ್ ಮಾಲೂರು ಸೊಣ್ಣಪ್ಪ, ಮೇಲೂರಿನವರು ಹೋಗಿ ಭೇಟಿ ಮಾಡಿದ್ದ ರಾಷ್ಟ್ರಪತಿಗಳಾದ ಫಕೃದ್ದೀನ್ ಅಲಿ ಅಹಮದ್, ವಿ.ವಿ.ಗಿರಿ, ರಾಚಯ್ಯ, ಕಪಿಲ್ ದೇವ್, ಜವಾಹರಲಾಲ್ ನೆಹರೂ, ರಾಜೀವ್ ಗಾಂಧಿ, ಡಾ.ರಾಜ್‌ಕುಮಾರ್, ರಜನಿಕಾಂತ್, ದಾಸರಿ ನಾರಾಯಣರಾವ್, ರಾಕೇಶ್ ಶರ್ಮ, ಸಂತೋಶ್ ಹೆಗಡೆ, ಎಂ.ವಿ.ಕೃಷ್ಣಪ್ಪ, ಅಬ್ದುಲ್ ಕಲಾಂ ಮುಂತಾದವರೊಂದಿಗಿನ ಗ್ರಾಮಸ್ಥರ ಚಿತ್ರಗಳು ಹತ್ತು ಹಲವು ಸಂಗತಿಗಳನ್ನು ನೆನಪಿಗೆ ತಂದಿಟ್ಟಿದ್ದವು.
ಮೇಲೂರಿವರಾದ ರಾಜ್ಯಸಭಾ ಸದಸ್ಯರಾಗಿದ್ದ ಕೆ.ಎಮ.ನಂಜುಡಪ್ಪ, ಕೆ.ಎಸ್.ಚನ್ನಪ್ಪ, ಐ.ಎ.ಎಸ್ ಅಧಿಕಾರಿ ವೆಂಕಟರಾಮೇಗೌಡ, ಸ್ವಾತಂತ್ರ್ಯ ಹೋರಾಟಗಾರರಾದ ಸಂಜೀವಪ್ಪ, ಮುನಿಶಾಮಯ್ಯ, ಎಂ.ಎಸ್.ವೀರಪ್ಪ , ವಿದೇಶಕ್ಕೆ ಹೋಗಿದ್ದ ಬಿ.ಶ್ರೀರಾಮರೆಡ್ಡಿ, ಗ್ರಾಮದ ಹಳೆಯ ತಲೆಮಾರಿನವರಾದ ಪಟೇಲ್ ಪಿಳ್ಳೇಗೌಡರು, ಮಲ್ಲಿಕಾರ್ಜುನಪ್ಪ, ಸೈಕಲ್‌ನಲ್ಲಿ ಕರ್ನಾಟಕವನ್ನು ಸುತ್ತಿಬಂದ ಎಂ.ರಾಮಯ್ಯ ಮತ್ತು ಪ್ರಭಾಕರ್, ಮ.ಮು.ಸ್ವಾಮಿ ಅವರ ಗಂಗಾದೇವಿ ನಾಟಕ ಮಂಡಳಿ ಮುಂತಾದವರ ಅಪರೂಪದ ಚಿತ್ರಗಳನ್ನು ಪ್ರದರ್ಶಿಸಲಾಗಿದೆ.
‘ನಾನು ಹುಟ್ಟಿದ ಊರಿನ ಕಲೆ, ಸಂಸ್ಕೃತಿ, ಇತಿಹಾಸ, ಹಳೆ ತಲೆಮಾರಿನ ಜನರ ಚಿತ್ರಗಳನ್ನು ಸಂಗ್ರಹಿಸುತ್ತಾ ಬಂದಂತೆ ಬಹಳ ಹೆಮ್ಮೆ ಎನಿಸುತ್ತಿತ್ತು. ನಮ್ಮ ಮುಂದಿನ ಪೀಳಿಗೆಗೆ ನಮ್ಮ ಜನರ ಸಾಧನೆಗಳ ಬಗ್ಗೆ ಪರಿಚಯ ಮಾಡಿ ಗ್ರಾಮದ ಹಾಗೂ ನಮ್ಮ ಸುತ್ತಲಿನ ಜನರ ಬಗ್ಗೆ ಅವರಲ್ಲಿ ಗೌರವ, ಆದರ, ಪ್ರೀತಿ ಮೂಡಿಸುವುದು ಈ ಪ್ರದರ್ಶನದ ಉದ್ದೇಶ. ಇತಿಹಾಸವನ್ನು ಮರೆತವರಿಗೆ ಉಜ್ವಲ ಭವಿಷ್ಯವಿಲ್ಲ. ನಮ್ಮ ಹಿಂದಿನವರ ಆದರ್ಶ, ಸಾಧನೆ ಮುಂದಿನವರಿಗೆ ಮಾರ್ಗದರ್ಶನವಾಗುತ್ತದೆ. ಒಂದು ಎಚ್ಚರಿಕೆಯ ಕರೆಗಂಟೆಯಾಗುತ್ತದೆ’ ಎಂದು ಎಂ.ಆರ್.ಪ್ರಭಾಕರ್ ತಿಳಿಸಿದರು.
–ಡಿ.ಜಿ.ಮಲ್ಲಿಕಾರ್ಜುನ.
- Advertisement -
- Advertisement -
- Advertisement -
- Advertisement -