30.1 C
Sidlaghatta
Wednesday, August 17, 2022

ವಿಜಿಪುರ – ದೇವ್ನಳ್ಳಿ – ಮಾರ್ಕೆಟ್… ಮಾರ್ಕೆಟ್… ಮಾರ್ಕೆಟ್

- Advertisement -
- Advertisement -

“ಬಲಗಾಲಿಟ್ಟು ಒಳಗೆ ನಡಿಯಣ್ಣಾ… ” ಬೆಳಗಿನ ಚುಚ್ಚುವ ಚಳಿಯಲ್ಲಿ ಚಾ ಹೀರುತ್ತಾ ಕಲ್ಲಿನ ಬೆಂಚಿನ ತುದಿಯಲ್ಲಿ ಕೂತು ನಾನು ಹತ್ತುವುದನ್ನು ಗಮನಿಸುತ್ತಿದ್ದ ಬಸ್ Loader ತನ್ನ ಶುದ್ಧ ಸೌಮ್ಯ ಕಂಠದಲ್ಲಿ ಕೂಗಿದ… ನವ ವಧುವನ್ನು ಗಂಡನ ಮನೆಗೆ ಬರಮಾಡಿಕೊಳ್ಳುವಾಗ ಮಾತ್ರ ಈ ಪದಗಳನ್ನು ಕೇಳಿದ್ದ ನನಗೆ ಆವ ಹೇಳಿದ್ದು ಹೊಸದಾಗಿ ಕಂಡರೂ ಏನು ಪ್ರತೀತಿಯೂ ಎಂದುಕೊಂಡು “ಅಕ್ಕಿಯನ್ನು ಒದಿಬೇಕಾ ಮಾರಾಯಾ?” ಎಂದೆ. ನನ್ನ ಮಾತುಗಳನ್ನು ಮನದಲ್ಲೇ ಅಳೆದ ಅವನು ಟೀ ಹೀರುವ ಮೊದಲು ಶುಚಿಕೊಳಿಸಿದ್ದ ತನ್ನ ಹಲ್ಲುಗಳನ್ನು ಆಚೆಗೆ ಚಾಚಿ, “ಇಲ್ಲಣ್ಣ… ನೀನೆ ಪಷ್ಟ್ ಹತ್ತತಾ ಇರೋದು ಬಸ್ ನ ಅದ್ಕೆ ಹೇಳ್ದೆ” ಎಂದ. ಆ ದಿನ ಅವನ ಕಂಠದಿಂದ ಹೊರಬಂದ ಮೊದಲ ಪದಗಳಿರಬೇಕು ಅವು. ಶಿಡ್ಲಘಟ್ಟ – ಬೆಂಗಳೂರು ಮಾರ್ಗದಲ್ಲಿ ದಿನಪೂರ್ತಿ ಈ ಆಂಚಿನಿಂದ ಆ ಅಂಚಿನವರೆಗೆ ಎಲ್ಲಾ ಸ್ಟಾಪ್ ಗಳ ಹೆಸರುಗಳನ್ನು, ಹೋಲ್ಡಾಯ್ನ್ … ರೈಟ್, ರೈಟ್, ರೈಟ್ಗಳನ್ನು … ಅರಚಿ ಅರಚಿ, ಮೆಲುದನಿಯಲ್ಲಿ ಮಾತನಾಡಿದರೂ ಬಸ್ ನ ತುದಿಯವರೆಗೂ ಕೇಳುವಂತಾಗಿರುತ್ತದೆ. ಅಂತೂ ಅವನು ಹೇಳಿದಂತೆ ಬಲಗಾಲಿಟ್ಟು ಖಾಲಿ ಇದ್ದ ಬಸ್ ಹತ್ತಿದೆ.
ಈ ಬೆಂಗಳೂರು ಮಾರ್ಗವಾಗಿ ಚಲಿಸುವ ಖಾಸಗೀ ಬಸ್ ಗಳ ಕಥೆಯೇ ವಿಶೇಷವಾದುದು. ಕಾಮನಬಿಲ್ಲಿನ ಎಲ್ಲಾ ಬಣ್ಣಗಳ ಬಗೆಬಗೆಯ ಶೇಡ್ ಗಳನ್ನು ಹೊರಮೈಗೆ ಬಳಿಸಿಕೊಂಡು, ಒಳಮೈಗೆ ಲಕ ಲಕ ಬೆಳಗುವ ಬಗೆಬಗೆಯ ಲೈಟುಗಳನ್ನು ತಗುಲಿಸಿಕೊಂಡು, ಎರಡು – ನಾಲ್ಕು ಟಿವಿ ಗಳು, ಒಂದು ಡಿವಿಡಿ ಪ್ಲೇಯರ್ ಅನ್ನು ತೂರಿಸಿಕೊಂಡು ಕೆರೆಯ ಪಕ್ಕದ ರಸ್ತೆಯಲ್ಲಿ ರೆಡಿಯಾಗಿ ನಿಂತರೆ ಸಾಕು, ಹೊಸ ಮದುವೆಯ ಒಡವೆಗಳನ್ನ ಧರಿಸಿ ಶಿಡ್ಲಘಟ್ಟ ಸಂತೆಗೆ ಹೊರಟ ಸೊಣ್ಣೇನಹಳ್ಳಿಯ ನವ ವಧುವಿನಂತೆ ಕಾಣುತ್ತದೆ.
ಬಸ್ ಹತ್ತಿದ ನಾನು ನನಗೆ ಸರಿ ಹೊಂದುವಂತ ಸೀಟ್ ಅನ್ನು ಹುಡುಕತೊಡಗಿದೆ. ಮೂವರು ಕೂರಬಹುದಾದ ಸೀಟ್ ನಲ್ಲಿ ಮೂವರು ತೂರದ ಇಬ್ಬರಿಗೆನ್ನುವ ಸೀಟ್ ನಲ್ಲಿ ಇಬ್ಬರು ಹಿಡಿಯದ ಕಥೆ ಖಾಸಗಿ ಬಸ್ಗಳಲ್ಲಿ ಮಾಮೂಲು. ಕಿಟಕಿಯ ಕಡೆ ಕೂತರೆ ಮೊಣಕಾಲು ಮುಂದಿನ ಸೀಟಿಗೆ ಅವುಚಿ ಪ್ರತಿ ಹಳ್ಳ ಇಳಿದತ್ತಿದಾಗಲೂ ಮೊಣಕಾಲು ಚಿಪ್ಪು ಪುಡಿಯಾಗುವುದೆಂಬ ಭಯ ಬರದೇ ಇರಲಾರದು, ಸೀಟಿನ ಇನ್ನೊಂದು ಬದಿ ಕೂತರೆ ನಿಂತ ಪ್ರಯಾಣಿಕರು ತಮ್ಮ ಬ್ಯಾಗು, ಮಗು ಕೆಲವೊಮ್ಮೆ ತಮ್ಮನ್ನೂ ಮೇಲೆ ಕೂಡಿಸಿಬಿಡುವ ಭೀತಿ, ಇನ್ನು ಅಪ್ಪಿ ತಪ್ಪಿ 3 ಸೀಟರ್ ನ ಮಧ್ಯದಲ್ಲಿ ಕೂತರೆ ಚಪಾತಿ ಹಿಟ್ಟಿನಂತೆ ಕಲಿಸಿ, ಲಟ್ಟಿಸಿ, ಬೆಂದು ಬಳಲಾಗುವುದು ಖಂಡಿತ. ಎಲ್ಲಕ್ಕೂ safe ಎಂಬಂತೆ 2 ಸೀಟರ್ ನ ಕಿಟಕಿಯ ಕಡೆ ಕುಳಿತೆ. ಹೋರಾಡಲು ಸಿಧ್ದವಾದ ರೇಸರ್ ಕಾರಿನಂತೆ ರೊಯ್ಯ್ಯ್ ರೊಯ್ಯ್ಯ್ ಎಂದು ಇಂಜಿನ್ನನ್ನು ಹುರಿದುಂಬಿಸತೊಡಗಿದ್ದ ಡ್ರೈವರ್. ಲೋಡರ್ ಹೀರಿದ್ದ ಟೀ ಯ ಶಕ್ತಿಯಷ್ಟನ್ನು ತನ್ನ ಕಂಠಕ್ಕೆ ತೂರಿಸಿ ವಿಜಿಪುರ – ದೇವ್ನಳ್ಳಿ – ಮಾರ್ಕೆಟ್… ಮಾರ್ಕೆಟ್… ಮಾರ್ಕೆಟ್ ಕೂಗಲಾರಂಭಿಸಿದ. ದೂರದ ಬೇಕರಿಯ ಕಡೆಯಿಂದ ನಡೆದು ಬರುತ್ತಿದ್ದ ಜನ ಲೋಡರ್ ನ ಕೂಗು ಕೇಳಿ ಲಘು- ಬಗೆಯಿಂದ ಹೆಜ್ಜೆ ಹಾಕಲಾರಂಭಿಸಿದ್ದರು. ಅವರಲ್ಲಿ ಓರ್ವ ಮಹಿಳೆಯೊಬ್ಬಳು ಆಗದಿದ್ದರೂ ಇನ್ನೇನು ಬಸ್ ಹೊರಟೇಬಿಡುವುದೆಂಬ ಭಯದಿಂದ ನೋವಲ್ಲಿ ಮಿಂದೆದ್ದೆದ್ದಿದ್ದ ಕಾಲನ್ನು ತನ್ನ ಆಯಾಸಗೊಂಡ ದೇಹದ ಜೊತೆಗೆ ಒಗ್ಗೂಡಿಸಿಕೊಂಡು ಎಂಜಿನ್ನಿಂದ ಹೋಗೆ ಬಂದಂತೆ ಏದುಸಿರು ಬಿಡುತ್ತ ಓಡಿಬರತೊಡಗಿದರು. ಅಂತೂ ಇಂತೂ ಬಂದು ಕಾಲು ಎತ್ತಲಾಗದೆ ಫುಟ್ ಬೋರ್ಡ್ ನ ಮೇಲಿಟ್ಟು ಆಸರೆಗೆಂದಿದ್ದ ರಾಡನ್ನು ಜಗ್ಗಿ ತನ್ನ ಮೈಯನ್ನು ತೂರಲು, ಜಗ್ಗಿದ ಬಲ, ತೂರಿದ ಶಕ್ತಿ ಎರಡು ಸಾಲದೇ ಮತ್ತೆ ನೆಲಕ್ಕೆ ವಾಪಸ್ಸಾದರು. “ಏನಪ್ಪಾ ಇದನ್ನು ಇನ್ನು ಕೆಳಕ್ಕೆ ಮಾಡ್ಸಬಾರ್ದ? ವಯಸ್ಸಾದವರು ಹೇಗೆ ಹತ್ತೋದು?” ಎಂದು ತನ್ನ ಅಸಹಾಯಕತೆಯನ್ನು ಲೋಡರ್ನ ಮುಖಕ್ಕೆ ಎರಚಿದರು. “ಆದಂಗೆ ಬರೋದು ಅಕ್ಕೋವ್… ನಾವೇನ್ ಮಾಡಾಂಗಿಲ್ಲ… ಆಗಾಲ್ಲಾಂದ್ರೆ ಗವರ್ನಮೆಂಟ್ ಬಸ್ ಬರತೈತೆ ಅದ್ರಾಗ್ ಬನ್ನಿ ” ಮೊದಲೇ ಗೊತ್ತಿದ್ದ ಪ್ರಶ್ನೆಗೆ ಸಿದ್ಧನಾಗಿ ಬಂದು ಪ್ರಶ್ನೆಯನ್ನು ಓದದೇ ಉತ್ತರ ಬರೆಯತೊಡಗಿದ ಎಂಜಿನಿಯರಿಂಗ್ ವಿದ್ಯಾರ್ಥಿಯಂತೆ ಬಸ್ ನ ಲೋಡರ್ ಠಕ್ ಎಂದು ಉತ್ತರ ಕೊಟ್ಟ. ಇನ್ನೂ ಬಾರದ, ಬಂದರೂ ಸಮಯಕ್ಕೆ ಸರಿಯಾಗಿ ತಲುಪದ ಸರ್ಕಾರೀ ಬಸ್ ಗೆ ಕಾಯುವುದು ಥರವಲ್ಲವೆಂದು ಮನದಲ್ಲೇ ಅಳೆದ ಆ ಹೆಂಗಸು ತನ್ನ ಮೈಯಲ್ಲಿ ಉಳಿದಿದ್ದ ಚೈತನ್ಯವನ್ನೆಲ್ಲಾ ತೂರಿ, ಬಾಯಿಂದ “ರಾಮ.. ರಾಮಾ” ನಾಮವ ಉಸಿರಿ ಕಡೆಗೂ ಪುಟಿದೆದ್ದು ಬಸ್ ನ ಫುಟ್ಬೋರ್ಡಿಗೆ ತನ್ನ ಎರಡನೇ ಕಾಲನ್ನು ತಂದು ನಿಲ್ಲಿಸುವುದರಷ್ಟಟಲ್ಲಿ ಇನ್ನೊಂದು ಬಾರಿ ನೀರಲ್ಲಿ ಮಿಂದೆದ್ದ ಹಾಗಾಗಿತ್ತು. ಅಂತೂ ಇಂತೂ ತನ್ನೆಲ್ಲ ಸಾಮರ್ಥ್ಯದಿಂದ ಸಮರವನ್ನು ಜಯಿಸಿ ಬಂದ ಆ ಹೆಂಗಸು ತನ್ನ ಸೀರೆಯ ಸೆರಗಿನಿಂದ ಬೆವರನ್ನು ಒರೆಸಿಕೊಂಡು “ಉಸ್ಸಾಪ್ಪಾ…. ” ಎಂದು ಉದ್ಘಾರಿಸಿ ತಲೆಎತ್ತಿ ನೋಡಲು ಅವರ ಮುಖದ ಮೇಲಿದ್ದ ವಿಜಯದ ನಗು ಸಣ್ಣಗೆ ಮಾಸಿತು. ಇನ್ನೊಂದು ಬಾಗಿಲಿನಿಂದ ಹತ್ತಿದ್ದ ಜನ ಆಗಲೇ ಎಲ್ಲಾ ಸೀಟುಗಳ ಮೇಲೆ ಆಸೀನರಾಗಿದ್ದರು. ವಿಧಿ ಎಷ್ಟು ಕ್ರೂರ ಎಂದುಕೊಂಡರೋ ಏನೋ, “ಏನಪ್ಪಾ ಸೀಟಿಲ್ವಾ?” ಕೇಳಿದರು. ಆ ಪ್ರಶ್ನೆಗೂ ಸಿದ್ಧವಿದ್ದವನಂತೆ “ಬಾರಾಕ್ಕೋವ್ ಕೊಡಸ್ತೀನಿ, ಮಾರ್ಕೆಟ್ ನಾಗೆ ಎಲ್ಲಾ ಖಾಲಿ ಆಗೊತಾರೆ… ” loader ಹೇಳಿದ. “ಮಾರ್ಕೆಟ್ಟಲ್ಲಿ ನೀನೇನ್ ಕೊಡ್ಸೋದು? ನಾನು ದೇವನಹಳ್ಳೀಲೇ ಇಳಿದುಬಿಡ್ತೀನಿ” ಹತಾಶೆಯ ಜೊತೆಯಲ್ಲಿ ಸಿಟ್ಟು ಬೆರೆತಿದ್ದು ಧ್ವನಿಯಲ್ಲಿ ಕೇಳುತ್ತಿತ್ತು. ಇವರ ಸಂಭಾಷಣೆಯನ್ನು ಕೇಳುತ್ತಿದ್ದ ನನಗೆ ನಗು ಬಂದರೂ ತಡೆ ಹಿಡಿದೆ. ಅಷ್ಟರಲ್ಲಿ ಯಾರಿಗೋ ಕಾಯುತ್ತಿದ್ದ ವ್ಯಕ್ತಿ ತನ್ನ ಸಂಗಾತಿ ಸಮಯಕ್ಕೆ ಬಾರದ ಕಾರಣ ಮುಂದಿನ ಬಸ್ ನಲ್ಲಿ ಬರುವುದಾಗಿ ಇಳಿದ.. ಆಂಟಿಗೆ ಅಂತೂ ಇಂತೂ ಸೀಟ್ ಗ್ಯಾರಂಟಿ.
ಈ ಬಸ್ ಗಳ ಸಂಗತಿಯೇ ಸ್ವಾರಸ್ಯಕರ. ಪ್ರತಿ ಬಸ್ ಗಳಿಗೂ ಕೆಲವರು ಪರ್ಮನೆಂಟ್ ಗಿರಾಕಿಗಳಿರುತ್ತಾರೆ ಅವರಿಗೆ ಬೇರೆ ಪ್ರಯಾಣಿಕರಿಗೆ ಹೋಲಿಸಿದರೆ ಟಿಕೆಟ್ ದರ ೫-೧೦ ರೂ ಕಡಿಮೆ. ಬಹಳಷ್ಟು ಸಾರಿ ಅವರನ್ನು ಹೇರಿಕೊಳ್ಳದೆ ಬಸ್ ಬಿಡುವುದೂ ಇಲ್ಲ. ಇನ್ನು ೧-೨ ನಿಮಿಷ ತಡವಾದರೂ ಮುಂದಿನ ಬಸ್ ನ ಡ್ರೈವರ್ ಹಾಗೂ ಲೋಡರ್ ತನ್ನ ಆಸ್ತಿ ಕಿತ್ತುಕೊಂಡಂತೆ ಬಸ್ ನ ಹಾರ್ನ್ ಜೊತೆ ಅವರ ಗಂಟಲನ್ನು ಹೊಯ್ದುಕೊಳ್ಳುವುದೂ ಮಾಮೂಲು. ಜನರನ್ನು ಹತ್ತಿಸಿಕೊಂಡು ಹೊರಟು ಹಂಡಿಗನಾಳ ತಲುಪುವಷ್ಟರಲ್ಲಿ ಮೊದಲೇ ಬಾಯೊಳಗೆ ತುರುಕಿಕೊಂಡ DVD Player ಅನ್ನು ಚಾಲು ಮಾಡಿದರೆ ಅಂದಿನ ಮಾರ್ನಿಂಗ್ ಶೋ ಶುರು. ಶಿಡ್ಲಘಟ್ಟದಿಂದ ಮಾರ್ಕೆಟ್ ತಲುಪುವಷ್ಟರಲ್ಲಿ ಅರ್ಧ ಸಿನಿಮಾ ಮುಗಿದರೆ ಇನ್ನು ಅಲ್ಲಿಂದ ಹೊರಟು ಬರುವಾಗ ಇನ್ನರ್ಧ ಶೋ. ಮುಂಜಾನೆ ಹೋರಾಟ ಜನ ಸಂಜೆ ಕೆಲಸ ಮುಗಿಸಿ ಬರುವಾಗ ಅಪ್ಪಿ ತಪ್ಪಿ ಅದೇ ಬಸ್ ತನ್ನ ಕಡೆಯ ಟ್ರಿಪ್ ಹೊಡೆಯುತ್ತಿದ್ದರೆ ಅವರಿಗೆ ಪೂರ್ತಿ ಸಿನಿಮಾ ನೋಡುವ ಭಾಗ್ಯ. ಇನ್ನು ಆ ಸಿನಿಮಾಗಳು ಬಹಳಷ್ಟು ಸಾರಿ ಲೋಡರ್ ಅಥವಾ ಕಂಡಕ್ಟರ್ ನ ಮೆಚ್ಚಿನ ನಟನದ್ದಾಗಿರುವುದರಿಂದ ಆ ನಟನ ಮುಂದಿನ ಸಿನಿಮಾ ಬರುವ ವರೆಗೂ ಆದೆ ಸಿನಿಮಾ ನೋಡುವ ದೌರ್ಭಾಗ್ಯ ನಿತ್ಯದ ಪ್ರಯಾಣಿಕರಿಗೆ. ಹೀಗೆ ನಾನು Aarya 2 ಸಿನಿಮಾವನ್ನು 19 ಬಾರಿ ನೋಡಿ ರೋಸಿಹೋಗಿ ಕಡೆಗೂ ಕೇಳಿಯೇ ಬಿಟ್ಟಿದ್ದೆ “ಬೇರೆ ಯಾವುದು ಇಲ್ವಾ ಮಾರಾಯ? ನಾನು ೧೯ ಸರಿ ಇದನ್ನೇ ನೋಡಿದ್ದೇನೆ” ಎಂದರೆ.. “ಇನ್ನೊಂದು 6 ಸರಿ ನೋಡಿಬಿಡಣ್ಣ.. ಸಿಲ್ವರ ಜೂಬಿಲಿ ಆಗ್ಬಿಡ್ತೈತೆ ನಮ್ ಹೀರೊ ದು” ಎನ್ನುವ ಉತ್ತರ ಕಾದಿತ್ತು. ಇದು ನನ್ನ ಪಾಡಾದರೆ, ಹೊಸ ಪ್ರಯಾಣಿಕರು “ನಿಮ್ಮ ತಲೆ ಸ್ವಲ್ಪ ಪಕ್ಕಕ್ಕೆ ಇಟ್ಕೊಳಿ, ಕೈ ತಗಿರಿ, ಸ್ವಲ್ಪ ಸೌಂಡು ಜಾಸ್ತಿ ಮಾಡಿ” ಎಂದು ನವ ಹುರುಪಿನಲ್ಲಿ ಸಿನಿಮಾ ನೋಡುತ್ತಿದ್ದರು. ಇನ್ನು ಕಂಬಗಳಿಗೆ ಒರಗಿ ನಿಂತು, ಹ್ಯಾಂಡಲ್ ಗಳಿಗೆ ಜೋತು ಬಿದ್ದು ಸಿನಿಮಾ ನೋಡುವವರ ಮತಿ ಯಾವ ಮಟ್ಟಿಗೆ ಕಳೆದಿರುತ್ತಿತ್ತೆಂದರೆ ಇತರರಿಗೆ ಅಡ್ಡಲಾಗಿ, ಸ್ಟಾಪುಗಳು ಬಂದಾಗ ಕೆಲವೊಮ್ಮೆ ಇಳಿದು ಹತ್ತುವುದಕ್ಕೂ ಪ್ರಯಾಣಿಕರಿಗೆ ಘಾಸಿಯಾಗುತ್ತಿತ್ತು. ಬರಬರುತ್ತಾ ಇದರ ತೀವ್ರತೆ ಕಂಡಕ್ಟರ್, ಲೋಡರ್ ಗಳಿಗೆ ತಗುಲಿ ಸಿನಿಮಾ ಬದಲಾಗಿ ಹಾಡುಗಳ ಮೊರೆಹೋಗುವ ನಿರ್ಧಾರಕ್ಕೆ ಬಂದರು. ತಮ್ಮ ನೆಚ್ಚಿನ ನಟನನ್ನು ದಿನಪೂರ್ತಿ ನೋಡಲಾಗದ ಲೋಡರ್ ಸಪ್ಪಗೆ ಕಂಡರೂ, ಬಸ್ಸನ್ನು ತುಂಬಿಸುವ ಹುರುಪಿನಲ್ಲಿ ಅದನ್ನು ನಿಧಾನವಾಗಿ ಮರೆಯಲಾರಂಭಿಸಿದ್ದ.
ಪ್ರತಿ ದಿನವೂ ಅದೇ ಬಸ್ನಲ್ಲಿ ಅದೇ ಸಮಯದಲ್ಲಿ ಪ್ರಯಾಣ ಮಾಡುತ್ತಿದ್ದುದರಿಂದ ನನಗೆ ಕಂಡಕ್ಟರ್, ಲೋಡರ್ ಗಳ ಸಖ್ಯ ಬೆಳೆದಿತ್ತು. ಕಂಡಕ್ಟರ್ ಹಾಲವು ಬಾರಿ ಬಂದು “ನೀವೇ ಪರಷ್ಟು ಟಿಕೀಟು ತಗೋಳಿ ಸಾರ್, ಬೋಣಿ ಚೆನ್ನಾಗಿ ಆಗತೈತೆ” ಎಂದು ಹೇಳಿದಾಗಲೆಲ್ಲಾ, “ನಿಮಗಾ? ಅಥವಾ ಓನರ್ ಗಾ?” ಎಂದು ರೇಗಿಸಿ ಕಳುಹಿಸಿದ್ದೆ. ಡೀಸಲ್ ಬೆಲೆ ಏರಿದಾಗಲೆಲ್ಲಾ ಟಿಕೆಟ್ ಬೆಲೆಯನ್ನು ಜಾಸ್ತಿ ಮಾಡಿ, ಡೀಸೆಲ್ ಬೆಲೆ ಕಡಿಮೆ ಆದಾಗ ಅದರ ಸೂಕ್ಷ್ಮವೂ ತಿಳಿಯದ ಹಾಗೆ ಇದ್ದುಬಿಡುತ್ತಿದ್ದ ಅವರನ್ನು “ಯಾಕ್ರೀ, ಕಡಿಮೆ ಆದಾಗ ಕಡಿಮೆ ಮಾಡಲ್ವಾ?” ಎಂದು ಕೇಳಿದರೆ, “ಸುಮ್ನೆ ಇರಿ ಸಾರ್, ಬೇರೆ ಅವರು ಕೇಳಿದರೆ ಗಲಾಟೆ ಮಾಡ್ತಾರೆ, ಅವರ್ಗೆ ಏನೂ ಹೇಳಕ್ಕೆ ಆಗಲ್ಲ… ಅದೇನೋ ನಮ್ ದೂ ಯೂನಿಯನ್ ಅಂತೇ… ಅಲ್ಲಿ ಹೆಳ್ದ್ರೆ ಕಡಿಮೆ ಮಾಡ್ಬೇಕಂತೆ, ನಾಮ್ಕೆನೂ ಗೊತ್ತಾಗಲ್ಲ ಸಾರ್ ಅದೆಲ್ಲ” ಎಂದು ಸಮಜಾಯಿಷಿ ನೀಡುತ್ತಿದ್ದರು. ಹಲವು ಸಾರಿ ಅವರಿಗೆ ಮನೆಯಿಂದ ಕಳುಸಿರುತ್ತಿದ್ದ ಹಣ್ಣು, ತಿಂಡಿಗಳನ್ನು ನನ್ನೊಂದಿಗೆ ಹಂಚಿಕೊಂಡಿದ್ದಿದೆ. ಹೀಗೆ ಸಾಗಿದ್ದ ನಮ್ಮ ನಿತ್ಯ ಪ್ರಯಾಣದ ಸುಂದರ ಸಿನಿಮಾಕ್ಕೆ ಒಂದು ದಿನ ವಿಲನ್ ನ ಆಗಮನವಾಗಿತ್ತು. ಅಚಾನಕ್ಕಾಗಿ ಇನ್ನೊಂದು ಬಸ್ಸಿನ ಕಂಡಕ್ಟರಿನಿಂದ ಬಂದ ಮೊಬೈಲ್ ಕರೆಯನ್ನು ಕಿವಿಗೆ ಹಿಡಿದು, ” ಯಾಡುಂಡಾಡು?… ಯಾಡ ಪೋವೆಲ್ರಾ? … ” ವಿಷಯ ತಿಳಿದ ಕೂಡಲೇ ಅದನ್ನು ನಂತರದ ಬಸ್ಸಿನ ಕಂಡಕ್ಟರಿಗೆ ಇನ್ನೊಂದು ಕರೆ ಮಾಡಿ ಮುಟ್ಟಿಸಿ, ಡ್ರೈವರಿನ ಸೀಟಿನ ಬಳಿಗೆ ನಡೆದು ಅವರಿಗೆ ಹೇಗೆ ಹೋಗಬೇಕಂದು ತಿಳಿಸಿ ಗಾಬರಿಯಿಂದ ಮುಂದಿನ ರಸ್ತೆಯನ್ನು ನೋಡುತ್ತಾ ಕುಳಿತ. “ಏನಾಯ್ತ್ರಿ?” ನನ್ನ ಪ್ರಶ್ನೆಗೆ “RTO ಅಂತೇ ಸಾರ್, ಮುಂದೆ ಹೋಗಿದ್ ಬಸ್ ನ ರೇಡ್ ಮಾಡವ್ರೆ… ನಾವು ದಾರಿ ಬದಲಾಯ್ಸಿ ಹೋಗ್ತಿವಿ” ಎಂದು ಮಧ್ಯದ ಎರಡು ಸ್ಟಾಪುಗಳ ಜನರನ್ನು ಅಲ್ಲೇ ಇಳಿಸಿ ಬೇರೊಂದು ಮಾರ್ಗವಾಗಿ, ನೋಡಿರದ ಹಳ್ಳಿಗಳ ಹೊಕ್ಕಳೊಳಗೆ ಹೊಕ್ಕಿ ಅದೇ ಮಾರ್ಗಕ್ಕೆ ಬಂದು ಸೇರಲು ಒಂದು ತಾಸೆ ಕಳೆದು ಹೋಗಿತ್ತು. “ಯಾಕೆ ಪರ್ಮಿಟ್ ಇಲ್ವಾ?” ತನಗೆ ಬೇಡದ ಪ್ರಶ್ನೆಯನ್ನು ಕೇಳಿದ ನನ್ನನ್ನು ನೋಡಿ ಕಂಡಕ್ಟರ್ “ಅಯ್ಯೋ ಸಾರ್, ಅವ್ರ್ ಪರ್ಮಿಟ್ ಕಥೆ ಕಟ್ಕೊಂಡ್ರೆ ನಾವ್ ಬಸ್ ಓಡ್ಸಕ್ಕೆ ಆಗ್ತದ?… ಒಂದು ಮಾಡುದ್ರೆ ನೂರು ಹೊಸ ರೂಲ್ಸ್ ತರ್ತಾರೆ ” ಎಂದು ಹೇಳಿ, ಕಡೆಯ ಸ್ಟಾಪಿನಲ್ಲಿ ಬಸ್ಸನ್ನು ನಿಲ್ಲಿಸಿ ನಡೆದರು. ನಾನೂ ನನ್ನ ಇಂದಿನ ಕೆಲ್ಸದ ಹಾದಿಯಲ್ಲಿ ಮುನ್ನಡೆದೆ. ಸಂಜೆ ಹೇಗೆ ಊರಿಗೆ ವಾಪಸ್ ಬರುವುದು?… ಗವರ್ನಮೆಂಟ್ ಬಸ್ ಗೆ ಹೋಗೋಣ್ವಾ ಅಥವಾ ಇಲ್ಲೇ ಉಲಿಯೋಣವಾ? ಎಂದು ಮನಸ್ಸಿನಲ್ಲಿಯೇ ನನ್ನ ಆಯ್ಕೆಗಳನ್ನು ಗುರುತಿಸಿಕೊಳ್ಳಲಾರಂಭಿಸಿದೆ. ಸಂಜೆಯ ಕಥೆ ಸಂಜೆ ನೋಡಿಕೊಳ್ಳೋಣವೆಂದು ಆಫೀಸಿನ ಕಡೆಗೆ ನಡೆದೆ.
ಇನ್ನು ಸಂಜೆ ಕೆಲಸ ಮುಗಿಸಿ ಬರುವಾಗ ಮೆಜೆಸ್ಟಿಕ್ ಗೆ ಹೋಗುವುದು ಒಳಿತೆಂದು ಅನಿಸಿದರೂ ಒಂದು ಸಾರಿ ಮಾರ್ಕೆಟ್ ಸ್ಟಾಪಿನಲ್ಲಿ ನೋಡಿ ಹೋಗೋಣವೆಂದು ಭಾವಿಸಿ, ಎಂದಿನಂತೆ ಮಸೀದಿಯ ರಸ್ತೆಯ ತುದಿ ತಲುಪುವಷ್ಟರಲ್ಲಿ ನಮ್ಮ ಪ್ರತಿನಿತ್ಯದ ಬಸ್ ಇಣುಕಿ ನೋಡುತ್ತಿದ್ದುದು ಕಾಣಿಸಿತು. ನನ್ನನ್ನು ಕಂಡ ತಕ್ಷಣ ಲೋಡರ್ “ಬಾರಣ್ಣ ಬೇಗ, ಇವತ್ತು ಬೇಗ ಬಿಡ್ಬೇಕು, ಮಧ್ಯ ಸ್ಟಾಪು ಇಲ್ಲ” ಎಂದು ಕೈಬೀಸಿ ಕೂಗಿದ. ಖುಷಿಯಿಂದ ಏರುವಾಗ ಬಸ್ ನ ಬೋರ್ಡು ಗಮನಿಸಿದೆ. ಮಾಮೂಲಿನಂತೆ ಶಿಡ್ಲಘಟ್ಟ – ಬೆಂಗಳೂರು ಕಾಣಲಿಲ್ಲ. ಅದರ ಜಾಗದಲ್ಲಿ ” ರೀನಾ ವೆಡ್ಸ್ ಜಯರಾಮ್” ಬೋರ್ಡು ಕಾಣಿಸಿತು. ನಾನು ನೋಡಿದ್ದನ್ನು ಗಮನಿಸಿದ ಲೋಡರ್ “RTO ಗೆ ನಮ್ ಪ್ಲ್ಯಾನು ಅಣ್ಣೋ ” ಎಂದ. ಬಾಗಿಲ ಪಕ್ಕದಲ್ಲಿಯೇ ಸೀಟಿನಲ್ಲಿ ಕೂತ ನಾನು ಬಾಗಿಲಲ್ಲಿ ನೇತಾಡಿಕೊಂಡು ನಿಂತಿದ್ದ ಲೋಡರ್ಅನ್ನು ಕೇಳಿದೆ “ಈ ರೀನಾ, ಜಯರಾಮ್ ಯಾರಪ್ಪಾ? “… “ರೀನಾ ನಮ್ಮ್ಹುಡುಗಿ ಅಣ್ಣಾ, 1 ವರ್ಷ ದಿನಾ ಮನೆ ಮುಂದೆ ಹೋಗಿ ನೋಡ್ತಾ ಇರ್ತಿದ್ದೆ …” ಅವನ ಭೂತ ಕಾಲದ ಪ್ರಯೋಗದಿಂದ ಎಚ್ಚರವಾದ ನಾನು ಮುಂದೇನಾಯಿತೆಂದರೆ.. “ಯಾರೋ ಅಲ್ಲಾ ಬಕಾಷ್ ಅನ್ನೋವನ್ ಜೊತೆ ಅವ್ಳ ಮದ್ವೆ ಆಯ್ತಣ್ಣೊ… ಈಗ ಚಿಕ್ಕ ಮಗು ನೂ ಇದೆ ” ಎಂದ. “ಹಾಗಾದ್ರೆ ಈ ಜಯರಾಮ್ ಯಾರು?” ಹಿಂದೆಯೇ ನನ್ನ ಪ್ರಶ್ನೆ ಸಿದ್ಧವಾಗಿತ್ತು. “ನನ್ನ ಹೆಸರು ಜಯರಾಮ್ ಅಣ್ಣಾ, ಈ ಬೋರ್ಡ್ನ ಮಾಡ್ಸೋವಾಗ ಏನ್ ಹೆಸರು ಹಾಕ್ಬೇಕು ಗೊತ್ತಾಗ್ಲಿಲ್ಲ ಅದ್ಕೆ ನಮ್ಮಿಬ್ರುದು ಹಾಕ್ಸ್ದೆ” ಎಂದ.
ಪ್ರಶ್ನೆಗಳು ಮತ್ತಷ್ಟಿತ್ತು ಆದರೂ ಬಹಳಷ್ಟಕ್ಕೆ ಈಗಾಗಲೇ ಉತ್ತರ ಸಿಕ್ಕಿಯಾಗಿತ್ತು. ನಾನು ಸಣ್ಣ ನಗುವಿನೊಂದಿಗೆ ಮಾತು ಮುಗಿಸಿದ್ದೆ.
ಜಯರಾಮ ತನ್ನ ಕಾರ್ಯ ಮುಂದುವರೆಸಿದ್ದ…. “ಯಲಹಂಕ, ದೇವನಳ್ಳಿ, ವಿಜಿಪುರ… ಸಿಲ್ಗಟ್ಟ … ಸಿಲ್ಗಟ್ಟ… ಸಿಲ್ಗಟ್ಟ”
– ಸಂದೀಪ್ ಜಗದೀಶ್ವರ್

Just Published

Latest news

- Advertisement -

Covid-19

Silk

Related news

- Advertisement -
  1. ತುಂಬಾ ರಸಭರಿತವಾದ ಲೇಖನ, ನನಗೂ ಈ ರೀತಿ ಬರೆಯುವ ಆಸೆ, ನಿಮ್ಮಂತಹವರ ಸಹಕಾರ ಬೇಕಾಗಿದೆ…

LEAVE A REPLY

Please enter your comment!
Please enter your name here